ADVERTISEMENT

ಸಂತೇಬೆನ್ನೂರು: ಸರಗಳ್ಳನ ಹಿಡಿದುಕೊಟ್ಟ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 22:47 IST
Last Updated 5 ಫೆಬ್ರುವರಿ 2025, 22:47 IST
   

ಸಂತೇಬೆನ್ನೂರು (ದಾವಣಗೆರೆ ಜಿಲ್ಲೆ): ಡ್ರಾಪ್‌ ಕೊಡುವ ನೆಪದಲ್ಲಿ ಬೈಕ್‌ನಲ್ಲಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡು ಸ್ವಲ್ಪ ದೂರ ಸಾಗಿದ ನಂತರ ಕೊರಳಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಇಬ್ಬರ ಪೈಕಿ ಒಬ್ಬ ಸರಗಳ್ಳನನ್ನು ಕೂಲಿ ಕಾರ್ಮಿಕ ಮಹಿಳೆಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಮೀಪದ ಕಾಕನೂರು ಗ್ರಾಮದ ಬಳಿ ಮಂಗಳವಾರ ಸಂಜೆ ನಡೆದಿದೆ.

ಕಾಕನೂರು ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪಕ್ಕದಲ್ಲಿರುವ ಚಿಕ್ಕಬೆನ್ನೂರು ಗ್ರಾಮದ ಕಚ್ಚಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಒಬ್ಬ ಕಳ್ಳ ₹ 2.50 ಲಕ್ಷ ಮೌಲ್ಯದ 40 ಗ್ರಾಂ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ. ಆತನೊಂದಿಗಿದ್ದ ಇನ್ನೊಬ್ಬನನ್ನು ಸಂತ್ರಸ್ತ ಮಹಿಳೆಯರೇ ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭ ಕಳ್ಳ ಕಲ್ಲಿನಿಂದ ಹಲ್ಲೆ ಮಾಡಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.

ಘಟನೆಯ ವಿವರ: 

ADVERTISEMENT

ಚಿಕ್ಕಬೆನ್ನೂರು ಗ್ರಾಮಕ್ಕೆ ನೇರ ಬಸ್‌ ಸಂಪರ್ಕ ಇಲ್ಲ. ಕಾಕನೂರಲ್ಲಿರುವ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಬಳಿ ಬಸ್‌ ಇಳಿದು ಊರ ಕಡೆ ನಡೆದು ಹೋಗಬೇಕು. ಕೂಲಿ ಕೆಲಸ ಮುಗಿಸಿ, ಶಾಲೆಯ ಬಳಿ ಬಸ್‌ ಇಳಿದಿರುವ ಗ್ರಾಮದ ರತ್ನಮ್ಮ, ಗೌರಮ್ಮ ಹಾಗೂ ಶಾಂತಮ್ಮ ಕಡಲೆ ಹಾಗೂ ಈರುಳ್ಳಿ ಮೂಟೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗಿದ್ದರು. ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಊರವರೆಗೆ ಡ್ರಾಪ್‌ ನೀಡುವುದಾಗಿ ಹೇಳಿದ್ದರಿಂದ ರತ್ನಮ್ಮ ಮಾತ್ರ ಬೈಕ್‌ ಹತ್ತಿದ್ದಾರೆ. ಸ್ವಲ್ಪ ದೂರ ಸಾಗಿದ ನಂತರ ಅಪರಿಚಿತರು ರತ್ನಮ್ಮ ಅವರನ್ನು ಬೈಕ್‌ನಿಂದ ಇಳಿಸಿ, ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

ರತ್ನಮ್ಮ ಕೂಗಿಕೊಂಡಾಗ ಹಿಂದೆ ಬರುತ್ತಿದ್ದ ಗೌರಮ್ಮ ಹಾಗೂ ಶಾಂತಮ್ಮ ರಕ್ಷಣೆಗೆ ಧಾವಿಸಿದ್ದಾರೆ. ಹಿಂಬದಿ ಕುಳಿತಿದ್ದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮಾದನಾಯಕನಹಳ್ಳಿ ಗ್ರಾಮದ ಸುರೇಶ ಎಂಬವನನ್ನು ರತ್ನಮ್ಮ ಬೆನ್ನತ್ತಿ ಬೈಕ್‌ನಿಂದ ಬೀಳಿಸಿ ಹಿಡಿದಿದ್ದಾರೆ. ಆಗ ಸುರೇಶ  ರತ್ನಮ್ಮ ಅವರಿಗೆ ಕಲ್ಲಿನಿಂದ ಹೊಡೆದಿದ್ದಾನೆ. ರಕ್ತಸ್ರಾವದ ನಡುವೆಯೂ ರತ್ನಮ್ಮ ಆತನನ್ನು ಬಡಿದು ನೆಲಕ್ಕುರುಳಿಸಿದ್ದಾರೆ. ಚಿಕ್ಕಬೆನ್ನೂರು ಕಡೆಯಿಂದ ಬಂದ ಕೆಲವರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಸರ ಕಿತ್ತುಕೊಂಡು ಪರಾರಿಯಾಗಿರುವ ವ್ಯಕ್ತಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಕನ್ನಗುಂದಿ ಗ್ರಾಮದ ಸೋಮಶೇಖರ ಎಂಬುದಾಗಿ ಬಂಧಿತ ಮಾಹಿತಿ ನೀಡಿದ್ದಾನೆ. ಆತನಿಗಾಗಿ ಶೋಧ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ತಿಳಿಸಿದ್ದಾರೆ.  ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.