ADVERTISEMENT

ತುಂಗಭದ್ರಾ ನದಿ ನೀರು ಕಲುಷಿತ: ನರೇಂದ್ರಸ್ವಾಮಿ ಕಳವಳ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 10:30 IST
Last Updated 5 ನವೆಂಬರ್ 2025, 10:30 IST
   

ದಾವಣಗೆರೆ: ಮಧ್ಯಕರ್ನಾಟಕದಲ್ಲಿ ಹರಿಯುವ ತುಂಗಭದ್ರಾ ನದಿಗೆ ಕಾರ್ಖಾನೆ ತಾಜ್ಯ, ಜನವಸತಿ ಪ್ರದೇಶದ ಒಳಚರಂಡಿಯ ಕೊಳಚೆ ಸೇರುತ್ತಿದೆ. ಹೊನ್ನಾಳಿ ದಾಟಿದ ಬಳಿಕ ನದಿ ನೀರು ನಿರೀಕ್ಷೆ ಮೀರಿ ಕಲುಷಿತಗೊಂಡಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲಾಡಳಿತದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯಲ್ಲಿ 350ಕ್ಕೂ ಅಧಿಕ ಕಾರ್ಖಾನೆಗಳಿವೆ. ದಾವಣಗೆರೆಯಲ್ಲಿ 69 ರೈಸ್‌ ಮಿಲ್‌, ನೂರಾರು ಮಂಡಕ್ಕಿ ಭಟ್ಟಿಗಳಿವೆ. ಒಂದು ದೊಡ್ಡ ಕೈಗಾರಿಕೆಯ ತ್ಯಾಜ್ಯ ನೇರವಾಗಿ ನದಿಗೆ ಹರಿದುಬರುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 3 ಸಕ್ಕರೆ ಕಾರ್ಖಾನೆ, 4 ಎಥೆನಾಲ್‌ ಘಟಕ ಸೇರಿ ಹಲವು ಕಾರ್ಖಾನೆಗಳಿವೆ. ತ್ಯಾಜ್ಯ ನೀರು ನದಿ ಮೂಲ ಸೇರದಂತೆ ಎಚ್ಚರವಹಿಸುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ ಹೊನ್ನಾಳಿ ದಾಟಿದಾಕ್ಷಣ ತುಂಗಭದ್ರಾ ನದಿ ನೀರಿನ ಗುಣಮಟ್ಟ ಬದಲಾಗುತ್ತಿದೆ. ಹೊನ್ನಾಳಿ ಪಟ್ಟಣದ ಕೊಳಚೆ ನೀರು ಶುದ್ಧೀಕರಣವಾಗದೇ ನದಿ ಸೇರುತ್ತಿರುವ ಅನುಮಾನವಿದೆ. ನಗರ, ಪಟ್ಟಣಗಳ ಕೊಳಚೆ ನೀರು ಶುದ್ಧೀಕರಣ ಮಾಡದೇ ನದಿಗೆ ಬಿಡುವುದು ತಪ್ಪು. ನೀರಿನ ಗುಣಮಟ್ಟ ಪರೀಕ್ಷೆಗೆ ತುಂಗಭದ್ರಾ ನದಿಯಲ್ಲಿ 15 ಹಾಗೂ ವರದಾ ನದಿಯಲ್ಲಿ 2 ಸ್ಥಳ ಗುರುತಿಸಲಾಗಿದೆ’ ಎಂದರು.

‘ಮಂಡಕ್ಕಿ ಭಟ್ಟಿಗಳಿಂದ ದಾವಣಗೆರೆಯ ಮಾಲಿನ್ಯ ಹೆಚ್ಚಾಗಿದೆ. ಇಲ್ಲಿ ಬಳಕೆ ಮಾಡುವ ಇಂಧನ ಸಮಸ್ಯೆ ಸೃಷ್ಟಿಸಿದೆ. ಇವು ಸಣ್ಣ ಉದ್ದಿಮೆ ಆಗಿರುವುದರಿಂದ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಾಧ್ಯವಿಲ್ಲ. ಅವರ ಮನವೊಲಿಸಿ ಸ್ಥಳಾಂತರಿಸುವ ಅಗತ್ಯವಿದೆ. ಜಿಲ್ಲಾಡಳಿತ ಈ ಪ್ರಯತ್ನ ಮಾಡಿದರೆ ಅನುಕೂಲವಾಗಲಿದೆ’ ಎಂದು ಮನವಿ ಮಾಡಿದರು.

‘ತುಂಗಭದ್ರಾ ನದಿಯ ಇಕ್ಕೆಲಗಳ ಜಮೀನುಗಳಲ್ಲಿ ರೈತರು ಬಳಸುವ ರಸಗೊಬ್ಬರ, ಕೀಟನಾಶಕ ಕೂಡ ನೀರು ಸೇರುತ್ತಿದೆ. ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ನದಿ ನೀರು ಕಲುಷಿತಗೊಳ್ಳದಂತೆ ತಡೆಯುವ ಅಗತ್ಯವಿದೆ. ವೈದ್ಯಕೀಯ ತ್ಯಾಜ್ಯ ನಿರ್ವಹಣೆ ವೈಜ್ಞಾನಿಕವಾಗಿ ನಡೆಯಬೇಕಿದೆ. ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ನಿತ್ಯ 2 ಲಕ್ಷ ಹಾಲಿನ ಪ್ಯಾಕೇಟ್‌ಗಳು ಬಳಕೆಯಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್, ಮಾಜಿ ಶಾಸಕ ಮಹಿಮ ಪಟೇಲ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್‌.ಎಸ್‌. ಲಿಂಗರಾಜ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್‌. ಹರ್ಷವರ್ಧನ್‌, ಮುಖ್ಯ ಪರಿಸರ ಅಧಿಕಾರಿ ವಿಜಯಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಜರಿದ್ದರು.

ಒಬ್ಬ ವ್ಯಕ್ತಿಯಿಂದ ನಿತ್ಯ ಸರಾಸರಿ ಒಂದೂವರೆ ಕೆ.ಜಿ ಕಸ ಉತ್ಪತ್ತಿಯಾಗುತ್ತಿದೆ. ಈ ಪ್ರಮಾಣ ಕಡಿಮೆ ಆಗಬೇಕಿದೆ. ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ದಾವಣಗೆರೆ ಒಂದಂಕಿ ಸ್ಥಾನಕ್ಕೆ ಏರಬೇಕು
ಡಾ.ಪ್ರಭಾ ಮಲ್ಲಿಕಾರ್ಜುನ್‌, ಸಂಸದೆ, ದಾವಣಗೆರೆ

‘ಗ್ರಾ.ಪಂ. ಅನುದಾನ ದುರ್ಬಳಕೆ’

‘ಸ್ವಚ್ಛತೆಗಾಗಿ ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಿಟ್ಟ ಅನುದಾನ ದುರ್ಬಳಕೆಯಾಗುತ್ತಿದೆ. ಸುಳ್ಳು ಮಾಹಿತಿ, ತಪ್ಪು ಲೆಕ್ಕ ನೀಡುವ ಗುತ್ತಿಗೆದಾರರ ಪಾಲಾಗುತ್ತಿದೆ’ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಕಳವಳ ವ್ಯಕ್ತಪಡಿಸಿದರು.

‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆಗಾಗಿ ₹ 2 ಲಕ್ಷದಿಂದ ₹ 5 ಲಕ್ಷದವರೆಗೆ ಅನುದಾನ ಲಭ್ಯವಿದೆ. ಸ್ವಚ್ಛತೆಗೆ ಗುತ್ತಿಗೆ ನೀಡುವುದರಿಂದ ಪ್ರಯೋಜನವಾಗುತ್ತಿಲ್ಲ. ನಗರ, ಪಟ್ಟಣದ ಮಾದರಿಯಲ್ಲಿ ಗ್ರಾಮಗಳಿಗೂ ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡರೆ ಕೆಲ ಕುಟುಂಬಗಳಿಗೆ ಜೀವನಾಧಾರ ದೊರೆಯುತ್ತದೆ’ ಎಂದು ಹೇಳಿದರು.

‘ಸಾಗರ ಸ್ವಚ್ಛವಾಗಿದ್ದರೆ ಮಳೆ’

‘ಪ್ಲಾಸ್ಟಿಕ್‌ ನದಿಗಳ ಮೂಲಕ ಸಾಗರವನ್ನು ಸೇರುತ್ತಿದೆ. ಇದರಿಂದ ಸಾಗರಗಳು ಕಲುಷಿತಗೊಂಡು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿವೆ. ಸಾಗರ ಪ್ಲಾಸ್ಟಿಕ್‌ ಮುಕ್ತಗೊಳಿಸಿದರೆ ಭೂಮಿಯ ಮೇಲೆ ಮಳೆ, ಗಾಳಿ ಉತ್ತಮವಾಗಿರುತ್ತದೆ’ ಎಂದು ಮಹಾರಾಷ್ಟ್ರದ ಪರಿಸರ ತಜ್ಞ ವಿನೋದ್‌ ಭೋದನಕರ್‌ ಅಭಿಪ್ರಾಯಪಟ್ಟರು.

‘ಭೂಮಿಯ ಮೇಲೆ ಶೇ 30ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಶೇ 70ರಷ್ಟು ಆಮ್ಲಜನಕ ಸಾಗರದಿಂದ ಉತ್ಪತ್ತಿಯಾಗುತ್ತದೆ. ಸಾಗರದ ಪರಿಸರ ಉತ್ತಮವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಹೇಳಿದರು.