ದಾವಣಗೆರೆಯ ಕೆ.ಆರ್. ಮಾರುಕಟ್ಟೆಯಲ್ಲಿ ತುಂತುರು ಮಳೆಯಲ್ಲೇ ಮಹಿಳೆಯೊಬ್ಬರು ರೇನ್‌ಕೋಟ್ ಧರಿಸಿ ಮೂಲಂಗಿ ಮಾರಾಟದಲ್ಲಿ ತೊಡಗಿದ್ದರು.
–ಪ್ರಜಾವಾಣಿ ಚಿತ್ರ
ದಾವಣಗೆರೆ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ತುಂತುರು ಮಳೆ ಸುರಿಯುತ್ತಿರುವುದರಿಂದ ಶೀತ ವಾತಾವರಣ ಹೆಚ್ಚುತ್ತಿದೆ. ಇದರಿಂದಾಗಿ ತರಕಾರಿಗೆ ಬೇಡಿಕೆ ಕಡಿಮೆಯಾಗಿದ್ದು, ದರ ಕುಸಿತ ಕಂಡಿದೆ.
ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಶುಕ್ರವಾರ ಬಹುತೇಕ ತರಕಾರಿಗಳ ದರ ಕೆ.ಜಿ.ಗೆ ₹ 40 ರಿಂದ ₹ 60ರ ಆಸುಪಾಸಿನಲ್ಲಿತ್ತು. ತುಂತುರು ಮಳೆಯಿಂದಾಗಿ ಮಾರುಕಟ್ಟೆಗೆ ತರಕಾರಿ ಆವಕ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬಿಕರಿಯಾಗುತ್ತಿಲ್ಲ.
ಮೂರ್ನಾಲ್ಕು ದಿನಗಳ ಹಿಂದೆ ಕೆ.ಜಿ.ಗೆ ₹ 70ರಿಂದ ₹ 80 ಇದ್ದ ಹಸಿಮೆಣಸಿನಕಾಯಿ ದರ ಕೊಂಚ ತಗ್ಗಿದ್ದು, ₹ 40 ರಿಂದ ₹ 60 ರಂತೆ ಮಾರಾಟವಾಗುತ್ತಿದೆ. ₹ 40 ರಿಂದ ₹ 50 ಇದ್ದ ಟೊಮೆಟೊ ಬೆಲೆ ₹ 60 ರಿಂದ ₹ 70 ರಂತೆ ಬಿಕರಿಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊ, ಹಸಿಮೆಣಸಿನಕಾಯಿ ತರಕಾರಿಗಳ ದರದಲ್ಲಿ ನಿತ್ಯವೂ ಏರಿಳಿತ ಕಾಣುತ್ತಿವೆ.
‘ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿದೆ. ಆದರೆ, ನಿರಂತರ ಮಳೆಯಿಂದಾಗಿ ಗ್ರಾಹಕರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಇಲ್ಲಿಂದ ರಫ್ತಾಗುತ್ತಿರುವ ಕಾರಣಕ್ಕೆ ಟೊಮೆಟೊಗೆ ಮಾತ್ರ ಬೇಡಿಕೆ ಇದೆ. ಉಳಿದಂತೆ ಯಾವುದೇ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ’ ಎಂದು ತರಕಾರಿ ಸಗಟು ವ್ಯಾಪಾರಿ ಶೀಲಮ್ಮ ತಿಳಿಸಿದರು.
ಬೆಳ್ಳುಳ್ಳಿ ಹಾಗೂ ಶುಂಠಿ ಕೆ.ಜಿ.ಗೆ ₹ 200 ರಂತೆ ಮಾರಾಟ ಆಗುತ್ತಿದೆ.
ಸೊಪ್ಪಿನ ದರ:
ಸೊಪ್ಪುಗಳ ದರದಲ್ಲಿ ಈ ವಾರ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಪಾಲಕ್, ಮೆಂತ್ಯೆ, ಕೊತ್ತಂಬರಿ ಸೊಪ್ಪು ಸೇರಿದಂತೆ ಬಹುತೇಕ ಸೊಪ್ಪುಗಳ ದರ ಸಿವುಡಿಗೆ ₹ 5ರ ದರ ಇವೆ. ಕೆಲವೊಂದು ಸೊಪ್ಪನ್ನು ₹ 10ಕ್ಕೆ 3 ರಂತೆಯೂ ಮಾರಲಾಗುತ್ತಿದೆ.
ಹಣ್ಣುಗಳ ದರ:
ಹಣ್ಣುಗಳ ದರವೂ ಸ್ಥಿರವಾಗಿದ್ದು, ಕೆ.ಜಿ.ಗೆ ಸೇಬು ₹ 200 ರಿಂದ ₹ 240, ಕಿತ್ತಳೆ ₹ 140, ಮೂಸಂಬಿ ₹ 100, ಮಾವು ₹ 100, ದ್ರಾಕ್ಷಿ ₹ 180, ಡ್ರ್ಯಾಗನ್‌ಫ್ರೂಟ್ ₹ 120, ದಾಳಿಂಬೆ ₹ 130, ಏಲಕ್ಕಿ ಬಾಳೆ ₹ 40 ರಂತೆ ಮಾರಾಟ ಆಗುತ್ತಿವೆ.
ಚಿಕನ್, ಮೊಟ್ಟೆ ದರ:
ಚಿಕನ್ ದರದಲ್ಲೂ ಯಥಾಸ್ಥಿತಿ ಮುಂದುವರಿದಿದ್ದು, ವಿತ್ ಸ್ಕಿನ್ ಕೆ.ಜಿ.ಗೆ ₹ 230 ರಿಂದ ₹ 240 ಹಾಗೂ ಸ್ಕಿನ್‌ಲೆಸ್ ₹ 260 ರಿಂದ ₹ 270ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆ ದರ ಡಜನ್‌ಗೆ ₹ 72 ರಿಂದ ₹ 80 ಇದೆ.
‘ಇನ್ನೆರೆಡು ವಾರಗಳಲ್ಲಿ ಶ್ರಾವಣ ಶುರುವಾಗುವುದರಿಂದ ಮಾಂಸಹಾರ ಸೇವಿಸುವವರ ಪ್ರಮಾಣ ಕಡಿಮೆಯಾಗಲಿದ್ದು, ದರ ಕುಸಿಯುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಾಂಸದ ಅಂಗಡಿ ವ್ಯಾಪಾರಿಗಳು.
ನಗರದಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಗ್ರಾಹಕರು ತರಕಾರಿ ಖರೀದಿಗೆ ಬರುತ್ತಿಲ್ಲ. ಹೀಗಾಗಿ ವ್ಯಾಪಾರವೇ ನಡೆಯುತ್ತಿಲ್ಲ. ಮಳೆಯಿಂದಾಗಿ ಸಾಕಷ್ಟು ತರಕಾರಿ ಹಾಳಾಗುತ್ತಿದೆಎಸ್.ಟಿ.ಜಿ. ರುದ್ರೇಶ್ ತರಕಾರಿ ವ್ಯಾಪಾರಿ
ಮಳೆಯಿಂದಾಗಿ ಹಣ್ಣುಗಳು ಹಾಳಾಗುತ್ತಿವೆ. ಮಳೆ ನೀರು ಬಿದ್ದು ಬಾಳೆಹಣ್ಣಿನ ಕಲರ್ ಹೋಗುತ್ತಿದೆ. ಮಾರಾಟವಾಗದೇ ಉಳಿದ ಹಣ್ಣುಗಳನ್ನು ಮರು ದಿನ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆಕಲೀಂ ಹಣ್ಣಿನ ವ್ಯಾಪಾರಿ
ಕೆ.ಆರ್.ಮಾರುಕಟ್ಟೆ
ದಾವಣಗೆರೆ (ಜುಲೈ 19) ತರಕಾರಿ;ದರ (ಕೆ.ಜಿ.₹ ಗಳಲ್ಲಿ) ಹಸಿಮೆಣಸಿನಕಾಯಿ;40–60 ಹೊಟ್ಟೆಮೆಣಸಿನಕಾಯಿ;80–100 ಆಲೂಗೆಡ್ಡೆ;40–50 ಟೊಮೆಟೊ;50–60 ಕ್ಯಾರೆಟ್;40–60 ಈರುಳ್ಳಿ;50–55 ಬೆಂಡೆಕಾಯಿ;40–50 ಸವತೆಕಾಯಿ;20 ಬದನೆಕಾಯಿ;30–40 ಚವಳೆಕಾಯಿ;50–60 ಬೀಟ್‌ರೂಟ್;40–50 ಬೀನ್ಸ್;60–80 ಹಾಗಲಕಾಯಿ;50–60 ನವಿಲುಕೋಸು;40–50
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.