ADVERTISEMENT

ದಾವಣಗೆರೆ | ಅನಾರೋಗ್ಯವಿದ್ದರೂ ರಜೆ ಹಾಕದ ಡಿಎಚ್‌ಒ ಡಾ. ರಾಘವೇಂದ್ರಸ್ವಾಮಿ

ಪ್ರತಿದಿನ ಕಂಟೈನ್‌ಮೆಂಟ್‌ ವಲಯಕ್ಕೆ ಭೇಟಿ

ಬಾಲಕೃಷ್ಣ ಪಿ.ಎಚ್‌
Published 9 ಜೂನ್ 2020, 19:30 IST
Last Updated 9 ಜೂನ್ 2020, 19:30 IST
ಡಾ.ರಾಘವೇಂದ್ರ ಸ್ವಾಮಿ
ಡಾ.ರಾಘವೇಂದ್ರ ಸ್ವಾಮಿ   

ದಾವಣಗೆರೆ: ‘ಪ್ರತಿದಿನ ಕಂಟೈನ್‌ಮೆಂಟ್‌ ವಲಯಕ್ಕೆ ಭೇಟಿ ನೀಡುತ್ತಿದ್ದೇನೆ. ಮಧ್ಯಾಹ್ನದವರೆಗೆ ಇದ್ದು, ಅಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಕಾರ್ಯಕರ್ತೆಯರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೋಡಿ, ಅವರಿಗೆ ಸಲಹೆ ನೀಡಿ ಬರುತ್ತಿದ್ದೇನೆ’

ಜಿಲ್ಲೆಯ ಎಲ್ಲರ ಆರೋಗ್ಯದ ಕಾಳಜಿ ವಹಿಸುವ ಕೊರೊನಾ ವಾರಿಯರ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ ಅವರು ‘ಪ್ರಜಾವಾಣಿ’ ಜತೆ ಆಡಿದ ನುಡಿಗಳಿವು.

‘ಅತಿಹೆಚ್ಚು ಕೊರೊನಾ ಪ್ರಕರಣ ದಾಖಲಾಗಿರುವ ಜಾಲಿನಗರ ಕಂಟೈನ್‌ಮೆಂಟ್‌ ವಲಯಕ್ಕೆ ಅತಿ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ಮಧ್ಯಾಹ್ನದ ನಂತರ ಮೀಟಿಂಗ್‌, ವಿಡಿಯೊ ಕಾನ್ಫರೆನ್ಸ್‌ ಇನ್ನಿತರ ಕಾರ್ಯಗಳಿರುತ್ತವೆ. ರಾತ್ರಿ ಫೈಲ್‌ಗಳನ್ನು ನೋಡುತ್ತೇನೆ’ ಎಂದು ವಿವರಿಸಿದರು.

ADVERTISEMENT

ಮಾರ್ಚ್‌ ಕೊನೆ ವಾರದಲ್ಲಿ ವಿದೇಶದಿಂದ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಾಗ ಹೇಗೆ ನಿರ್ವಹಿಸುವುದು ಎಂಬ ಗೊಂದಲ ಉಂಟಾಗಿತ್ತು. ಪ್ರಧಾನಮಂತ್ರಿ ಕಚೇರಿಯಿಂದ ಬಂದಿದ್ದ ಒಂದು ಮಾರ್ಗಸೂಚಿ ಬಿಟ್ಟರೆ ಮತ್ತೇನೂ ಇರಲಿಲ್ಲ. ಮೇಲಧಿಕಾರಿಗಳನ್ನೂ ಒಳಗೊಂಡಂತೆ ರಾಜ್ಯದ ಬೇರೆ ಬೇರೆ ಕಡೆಗೆ ಕರೆ ಮಾಡಿ ತಿಳಿದುಕೊಳ್ಳಬೇಕಾಯಿತು ಎಂದು ತಿಳಿಸಿದರು.

‘ಏಪ್ರಿಲ್‌ ಕೊನೆಗೆ ಕೊರೊನಾ ಪತ್ತೆಯಾದಾಗ ಅದೂ ನಮ್ಮದೇ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಂದಾಗ ತಲೆಬಿಸಿಯಾಯಿತು. ನನ್ನ ರಕ್ತದೊತ್ತಡ ಹೆಚ್ಚಾಯಿತು. ರಾತ್ರಿ ಮಲಗಿದರೆ ನಿದ್ದೆ ಬರುತ್ತಿರಲಿಲ್ಲ. ಎಲ್ಲರೂ ಒಟ್ಟು ಸೇರಿ ಕೆಲಸ ಮಾಡೋಣ, ತಲೆಕೆಡಿಸಿಕೊಳ್ಳಬೇಡಿ ಎಂದು ಕೆಲಸದ ರೂಪುರೇಷೆಯನ್ನು ತಿಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಧೈರ್ಯ ತುಂಬಿದರು. ಎಡಿಸಿ ಪೂಜಾರ ವೀರಮಲ್ಲಪ್ಪ ಅವರು ಎಲ್ಲರಿಗೂ ಕೆಲಸವನ್ನು ಹಂಚಿ ನನ್ನ ಒತ್ತಡ ಕಡಿಮೆ ಮಾಡಿದರು. ಎಸ್‌ಪಿ ಹನುಮಂತರಾಯ, ಸಿಇಒ ಪದ್ಮ ಮೇಡಂ, ನಜ್ಮಾ ಮೇಡಂ, ರೇಷ್ಮಾ ಮೇಡಂ, ಪ್ರಮೋದ ನಾಯಕ ಸಹಿತ ಹಲವರು ನನ್ನ ಬೆಂಬಲಕ್ಕೆ ನಿಂತರು’ ಎಂದು ಎಲ್ಲರ ಸಹಕಾರವನ್ನು ಸ್ಮರಿಸಿದರು.

ರಾತ್ರಿ 12, 1, 2 ಗಂಟೆಗೆಲ್ಲ ಜನ ಕರೆ ಮಾಡುತ್ತಿದ್ದರು. ಬೆಂಗಳೂರು, ಆಂಧ್ರ, ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂದೆಲ್ಲ ಹೇಳುವರು. ಅಲ್ಲಿ ಬೇಲಿ ಹಾಕಿದ್ದೇವೆ ಎನ್ನುವರು. ಎಲ್ಲವನ್ನೂ ಡಿಸಿ ಮತ್ತು ಎಸ್‌ಪಿ ಸಿಸ್ಟಮೆಟಿಕ್‌ ಆಗಿ ನಿರ್ವಹಿಸಿದರು. ಹೊಸ ಹೊಸ ಗೈಡ್‌ಲೈನ್‌ಗಳೂ ಬಂದವು. ಈಗ ಫೋನ್‌ ಬರುವುದು ಕಡಿಮೆಯಾಗಿದೆ ಎಂದರು.

‘ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಆರೋಗ್ಯವಾಗಿ ದುರ್ಬಲರಾಗಿರುವವರನ್ನು ಗುರುತಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಯಿತು. ನಗರದ ಎಲ್ಲ ಕಂಟೈನ್‌ಮೆಂಟ್‌ಗಳಲ್ಲಿ ಆರೋಗ್ಯದ ಪರೀಕ್ಷೆಗಳು ನಿರಂತರವಾಗಿ ನಡೆದವು. ಜಾಲಿನಗರದಲ್ಲಿ ಅಂತೂ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಮಾರ್ಗಸೂಚಿಯನ್ನು ಮೀರಿ ಪ್ರತಿಯೊಬ್ಬರ ಆರೋಗ್ಯವನ್ನೂ ತ‍ಪಾಸಣೆ ಮಾಡಿಸಿದೆವು. ಸ್ವಲ್ಪ ರೋಗದ ಲಕ್ಷಣ ಇದ್ದರೂ ತಂದು ಕ್ವಾರಂಟೈನ್‌ ಮಾಡಿದೆವು’ ಎಂದು ವಿವರಿಸಿದರು.

‘ಕೊರೊನಾ ವಿರುದ್ಧದ ಹೋರಾಟಕ್ಕೆ ಬೆನ್ನು ತೋರಿಸಲ್ಲ’
‘ಮಧುಮೇಹ ಸಹಿತ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೂ ಕೊರೊನಾ ವಿರುದ್ಧದ ಯುದ್ಧದಲ್ಲಿ ಬೆನ್ನು ಹಾಕಲಾರೆ ಎಂದು ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆ 7.30ರೆಗೆ ಮನೆ ಬಿಟ್ಟರೆ ರಾತ್ರಿ 10.30ರ ನಂತರವೇ ಮನೆ ಸೇರುತ್ತಿದ್ದೇನೆ’ ಎಂದು ಡಾ.ರಾಘವೇಂದ್ರ ಸ್ವಾಮಿ ಹೇಳಿದರು.

‘ನಾನು ಮನೆಗೆ ಹೋಗಲೇಬೇಕು. ಹೊರಗೆ ಊಟ ಮಾಡಿದರೆ ಆರೋಗ್ಯದ ಸ್ಥಿತಿ ಏರುಪೇರಾಗುತ್ತದೆ. ದೇವರ ಮೇಲೆ ಭಾರ ಹಾಕಿ ಮನೆಗೆ ಹೋಗುತ್ತಿದ್ದೇನೆ. ಎರಡೂವರೆ ತಿಂಗಳಲ್ಲಿ ನಾನು ನನ್ನ ಸಂಬಂಧಿಕರನ್ನಾಗಲಿ, ಗೆಳೆಯರನ್ನಾಗಲಿ ಭೇಟಿಯಾಗಿಲ್ಲ. ಮಧ್ಯಾಹ್ನ ಊಟ ಮಾಡುವಾಗ 3 ಗಂಟೆ ದಾಟಿದ್ದೂ ಇದೆ. ತಾಯಿ, ಪತ್ನಿ, ಜರ್ನಲಿಸಂ ಮಾಡುತ್ತಿರುವ ಮಗಳು, ಪಿಯುಸಿ ಓದುತ್ತಿರುವ ಮಗ ಎಲ್ಲರೂ ಪೂರ್ಣ ಸಹಕಾರ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.