ಹೊನ್ನಾಳಿ: ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಭಾನುವಾರ ರಾಮ ದೇವಸ್ಥಾನದ ಗೃಹಪ್ರವೇಶ, ಕಳಶಾರೋಹಣ ಮತ್ತು ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು.
ಶನಿವಾರ ಸುಂಕದಕಟ್ಟೆ, ದೇವರಹೊನ್ನಾಳಿ, ಬೇಲಿಮಲ್ಲೂರು, ಮಾಸಡಿ, ನರಸಗೊಂಡನಹಳ್ಳಿ ಗ್ರಾಮಗಳ ದೇವರು ಉತ್ಸವ ಮೂರ್ತಿಗಳೊಂದಿಗೆ ತೆರಳಿ ಗಂಗೆಪೂಜೆ ನೆರವೇರಿಸಲಾಗಿತ್ತು. ನಂತರ ದೇವಸ್ಥಾನ ಪ್ರವೇಶ, ಮಹಾಗಣಪತಿ ಪೂಜೆ, ಮಹಾ ಮೃತ್ಯಂಜಯ ಹೋಮ, ಗಣಹೋಮ, ರುದ್ರಹೋಮಗಳು ಕುಮಾರ ಭಟ್ಟರ ನೇತೃತ್ವದಲ್ಲಿ ನಡೆದಿದ್ದವು.
ಭಾನುವಾರ ನೂತನ ರಾಮನಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಿತು. ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ರಾಮನ ಶಿಲಾಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಹಾಗೂ ಗೋಪುರ ಕಳಶಾರೋಹಣ ನೆರವೇರಿಸಿದರು.
ನಂತರ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ, ‘ಶ್ರೀರಾಮ ವನವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ ಹಾದು ಹೋಗಿದ್ದರು ಎಂಬ ಐತಿಹ್ಯವಿದೆ. ಹೋಗುವಾಗ ಈ ಜಾಗದಲ್ಲಿ ಲಿಂಗು ಪ್ರತಿಷ್ಠಾಪನೆ ಮಾಡಿದ್ದರಿಂದ ಈ ಪ್ರದೇಶಕ್ಕೆ ರಾಮನಗುಡಿ ಎಂಬ ಹೆಸರು ಪ್ರಾಪ್ತವಾಯಿತು. ಹಳೆಯ ಕಲ್ಲಿನ ಕಟ್ಟಡವನ್ನು ತೆರವುಗೊಳಿಸಿ ಯುವಕರು, ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನ ನಿರ್ಮಾಣ ಮಾಡಲಾಗಿದೆ’ ಎಂದರು.
‘ರಾಮನಗುಡಿ ಇರುವ ಜಾಗವನ್ನು ವಿಜಯಪ್ಪ ಗೌಡರು ದಾನ ಮಾಡಿದ್ದು, ಈ ಜಾಗದಲ್ಲಿ ರಾಮನ ಮಂದಿರವನ್ನು ಗ್ರಾಮಸ್ಥರು ನಿರ್ಮಿಸಿದ್ದಾರೆ. ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದಂತೆ ಸರ್ಕಾರಿ ಶಾಲೆಗಳನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗ್ರಾಮಸ್ಥರಿಗೆ ಮನವಿ ಮಾಡಿದರು.
ಗ್ರಾಮದ ಮುಖಂಡರಾದ ವಿಜಯಪ್ಪ ಗೌಡ, ಜಿ.ಪಿ. ಶ್ರೀನಿವಾಸ್, ಷಣ್ಮುಖಪ್ಪ, ರುದ್ರಪ್ಪ, ಎ.ಬಿ. ಮಂಜಪ್ಪ, ಜಿ.ಪಂ. ಸದಸ್ಯ ಸುರೇಂದ್ರನಾಯ್ಕ, ಸತೀಶ್ ಗೌಡ, ಗೋವಿಂದಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ರಮೇಶ್ ದಾಸಹಳ್ಳಿ, ಶಿಕ್ಷಕ ಸುನೀಲ್, ತಿಮ್ಮಪ್ಪ ಸೇರಿದಂತೆ ಮುಖಂಡರು ಹಾಜರಿದ್ದರು.
ಹೊನ್ನಾಳಿ ತಾ ಗೊಲ್ಲರಹಳ್ಳಿಯಲ್ಲಿ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ಶ್ರೀರಾಮನ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.