ಜಗಳೂರು: ದೇಶದ ಏಕೈಕ ಕೊಂಡುಕುರಿ ವನ್ಯಧಾಮವಾಗಿರುವ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ವೈವಿಧ್ಯಮಯ ಕಾಡುಹಣ್ಣುಗಳು ತೊನೆದಾಡುತ್ತಿದ್ದು, ಅರಣ್ಯದ ಸೊಬಗನ್ನು ಹೆಚ್ಚಿಸಿದೆ. ಸದ್ಯ ಮಳೆಯ ಸಿಂಚನವಾಗುತ್ತಿರುವುದರಿಂದ ಹಸಿರು ಮನೆಮಾಡಿದೆ.
ಕೊಂಡುಕುರಿ, ಕರಡಿ, ಚಿಂಕಾರ ಮುಂತಾದ ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಅಮೂಲ್ಯ ಪೋಷಕಾಂಶಗಳ ಮೂಲವಾಗಿರುವ ರಸಭರಿತ ಹಣ್ಣುಗಳು, ಕಾಯಿ ಮತ್ತು ಹೂಗಳು ಅರಣ್ಯದೆಲ್ಲೆಡೆ ಕಂಗೊಳಿಸುತ್ತಿದ್ದು, ಪ್ರಕೃತಿಯ ವಿಸ್ಮಯ ಕಾಣಬಹುದು.
80 ಚ.ಕಿ.ಮೀ ವಿಸ್ತೀರ್ಣದ ವನ್ಯಧಾಮದ ಪ್ರದೇಶದಲ್ಲಿ ಕಾಡು ನೇರಳೆ, ಬೆಟ್ಟದ ನೆಲ್ಲಿ, ನಗರೆ, ಬೇಲ, ಕವಳೆ, ಕಾರೆ, ತಾರೆ, ಹಿಪ್ಪೆ, ಕಾಡುಬಿಕ್ಕೆ, ರಾಯಬಿಕ್ಕೆ ಉಲುಪಿ, ಜಾನೆ, ದೇವಧಾರಿ, ಲೇಬಿ, ಬಾರೆ, ಅಂಕಲಿ, ಗೊರವಿ, ಕಾಡು ಗೇರು ಮತ್ತು ತುಮರಿ ಹಣ್ಣುಗಳು ಬಿಟ್ಟು, ನಳನಳಿಸುತ್ತಿವೆ. ಅಸಂಖ್ಯಾತ ಪಕ್ಷಿ ಪ್ರಾಣಿಗಳಿಗೆ ಅಗತ್ಯ ಪೋಷಕಾಂಶಗಳನ್ನು ತರಹೇವಾರಿ ಹಣ್ಣುಗಳು ಪೂರೈಸುತ್ತಿವೆ.
ಸಕಲ ಪ್ರೋಟಿನ್‌ಗಳ ಆಗರವಾಗಿರುವ ಸತ್ವ ಭರಿತ ಹಣ್ಣುಗಳು ಋತುಮಾನಗಳಿಗೆ ತಕ್ಕಂತೆ ಬಿಡುವುದು ನಿಸರ್ಗದ ಕೊಡುಗೆ. ದೈತ್ಯ ದೇಹಿ ಕರಡಿಗೆ ಈ ಹಣ್ಣುಗಳು ಅತ್ಯಂತ ಪ್ರಿಯ.
ಪ್ರತಿ ವರ್ಷಕ್ಕಿಂತ ಈ ಬಾರಿ ಸ್ವಲ್ಪ ಮುಂಚೆಯೇ ಮುಂಗಾರು ಮಳೆ ಆರಂಭವಾಗಿದ್ದು, ಅರಣ್ಯದಾದ್ಯಂತ ಹಸಿರು ಕಂಗೊಳಿಸುತ್ತಿದ್ದು, ಮರಗಳಲ್ಲಿ ಹೂ, ಕಾಯಿ, ಹಣ್ಣುಗಳು ಸಮೃದ್ಧವಾಗಿವೆ.
ನವಿಲು, ಗ್ರೇಹಾರ್ನ್ ಬಿಲ್, ಕಾಜಾಣ, ಮೈನಾ, ಕೆಂಪು ಪಿಕಳಾರ, ಬುಲ್ ಬುಲ್, ಹರಟೆಮಲ್ಲ, ಕೋಗಿಲೆ ಸೇರಿ ಅಪಾರ ಪಕ್ಷಿ ಸಂಕುಲಕ್ಕೆ ಉತ್ಕೃಷ್ಟ ಆಹಾರವಾಗಿರುವ ಹಣ್ಣು ಮತ್ತು ಕಾಯಿಗಳು ಇಲ್ಲಿ ಹೇರಳವಾಗಿವೆ.
ಕೇವಲ ಕಾಡು ಪ್ರಾಣಿಗಳು ಮಾತ್ರವಲ್ಲದೆ ಅರಣ್ಯದಂಚಿನ ಗ್ರಾಮಗಳ ಜನರು ಕಾಡುಬಿಕ್ಕೆ, ಕಾರೆ, ಕವಳೆ ಹಾಗೂ ಬೇಲದ ಹಣ್ಣುಗಳನ್ನು ಅರಣ್ಯದಿಂದ ಸಂಗ್ರಹಿಸಿ ತಂದು ತಿನ್ನುತ್ತಾರೆ. ದಶಕಗಳ ಹಿಂದೆ ಬುಡಕಟ್ಟು ಮಹಿಳೆಯರು ಕಾಡಿಗೆ ತೆರಳಿ ಬಿಕ್ಕೆ, ಕವಳೆ, ಕಾರೆ ಹಣ್ಣುಗಳನ್ನು ತಂದು ಶಾಲೆಗಳ ಆವರಣದಲ್ಲಿ ಮಕ್ಕಳಿಗೆ ಮಾರಾಟ ಮಾಡುತ್ತಿದ್ದರು.
ಬದಲಾದ ಆಧುನಿಕ ಕಾಲಘಟ್ಟದಲ್ಲಿ ಪಟ್ಟಣವಾಸಿ ಮಕ್ಕಳಿಗೆ ಕಾಡುಹಣ್ಣುಗಳನ್ನು ಸವಿಯುವ ಭಾಗ್ಯ ಇಲ್ಲವಾಗಿದೆ.
ಸಿಹಿ ಸ್ವಾದದ ಕವಳೆ..
‘ಶಾಲಾ ದಿನಗಳಲ್ಲಿ ಕಡುಗಪ್ಪಿನ ಸಿಹಿ ಸ್ವಾದದ ಕವಳೆ. ಒಗರು ಮತ್ತು ಸಿಹಿಯ ಕಾರೆಹಣ್ಣು ದಪ್ಪ ತೊಗಟೆಯ ಒಳಗಿನ ಸಿಹಿ ಕಾಡುಬಿಕ್ಕೆ ಹಣ್ಣುಗಳನ್ನು ಅಜ್ಜಿಯರು ಮಾರಾಟ ಮಾಡುತ್ತಿದ್ದರು. ಮುಗಿಬಿದ್ದು ಕಾಡುಹಣ್ಣುಗಳ ರುಚಿಯನ್ನು ಅಸ್ವಾದಿಸುತ್ತಿದ್ದೆವು. ಈಗ ನಾಡಿನಲ್ಲಿ ಆ ಹಣ್ಣುಗಳು ನೋಡಲೇ ಸಿಗುತ್ತಿಲ್ಲ. ಇಂದಿನ ಮಕ್ಕಳಿಗೆ ಆರೋಗ್ಯಕರ ಕಾಡು ಹಣ್ಣು ತಿನ್ನುವ ಭಾಗ್ಯ ಇಲ್ಲ’ ಎಂದು ಶಾಸಕ ಬಿ. ದೇವೇಂದ್ರಪ್ಪ ‘ಪ್ರಜಾವಾಣಿ’ಯೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.