ADVERTISEMENT

ಧಾರವಾಡ | ಮಾಧ್ಯಮ ಕಾರ್ಯಾಗಾರ ಆಯೋಜನೆಗೆ ಕ್ರಮ: ಜಿಲ್ಲಾಧಿಕಾರಿ ದಿವ್ಯಪ್ರಭು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:24 IST
Last Updated 25 ಡಿಸೆಂಬರ್ 2025, 3:24 IST
ಧಾರವಾಡದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು 
ಧಾರವಾಡದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು    

ಧಾರವಾಡ: ‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾಧ್ಯಮ ಕಾರ್ಯಾಗಾರ ಆಯೋಜಿಸಿ ಸರ್ಕಾರಿ ನೌಕರರಿಗೆ ಮಾಧ್ಯಮ ಪ್ರತಿನಿಧಿಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಧಿಕೃತ ಪತ್ರಕರ್ತರಿಗೆ ವೃತ್ತಿ ದೃಷ್ಠಿಯಿಂದ ಸಿಗಬೇಕಾದ ಮಾಹಿತಿ ನೀಡಲು ಅಧಿಕಾರಿಗಳು, ಸಿಬ್ಬಂದಿಗೆ ಮಾಧ್ಯಮದ ಕಾರ್ಯ ಚಟುವಟಿಕೆಗಳ ಕುರಿತು ಮತ್ತು ಮಾಧ್ಯಮ ಪ್ರತಿನಿಧಿಗಳ ಬಗ್ಗೆ ತಿಳಿಸುವುದು, ನಕಲಿ ಪತ್ರಕರ್ತರ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ’ ಎಂದರು.

ADVERTISEMENT

‘ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಮಾಧ್ಯಮ ಕ್ಷೇತ್ರವನ್ನು ಕರೆಯಲಾಗುತ್ತದೆ.  ಸಾರ್ವಜನಿಕರಿಗೆ ವಿದ್ಯಮಾನಗಳು, ಮಾಹಿತಿಗಳನ್ನು ತಿಳಿಸಲು ಮಾಧ್ಯಮ ಅವಶ್ಯಕ. ಸಾರ್ವಜನಿಕರಿಗೆ ಸ್ಫಂದಿಸುವುದು ಮಾಧ್ಯಮ ಮತ್ತು ಜಿಲ್ಲಾಡಳಿತದ ಕರ್ತವ್ಯ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಮಾತನಾಡಿ, ಸರ್ಕಾರದ ಯೋಜನೆ, ಬಜೆಟ್ ಸಹಿತ ಸಂಗತಿಗಳನ್ನು ಜನರಿಗೆ ತಿಳಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ದೇಶದ  ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಘನತೆ ಇದೆ’ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರ, ವಿವಿಧ ಮಾಧ್ಯಮ ಸಂಸ್ಥೆಗಳ ಬ್ಯೂರೊ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಂಡು ಕುಲಕರ್ಣಿ, ಪ್ರಕರ್ತರಾದ ಮೋಹನ ಹೆಗಡೆ, ಮಲ್ಲಿಕಾರ್ಜುನ ಸಿದ್ದಣ್ಣನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ವಾರ್ತಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಸುರೇಶ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.