ನವಲಗುಂದ (ಧಾರವಾಡ ಜಿಲ್ಲೆ): ಪಟ್ಟಣದ ಎಪಿಎಂಸಿ ಆವರಣದಲ್ಲಿನ ಮಣ್ಣಿನಲ್ಲಿ ಹೂತಿಟ್ಟ ‘ಅನ್ನಭಾಗ್ಯ’ ಯೋಜನೆಯ ಎರಡು ಚೀಲ ತೊಗರಿ ಬೇಳೆ ಪೊಟ್ಟಣಗಳು ಸೋಮವಾರ ಸಿಕ್ಕಿವೆ.
ಗ್ರಾಮ ಆಡಳಿತಾಧಿಕಾರಿ ಎಚ್.ವಿ.ಚಿಕ್ಕನರಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಫ್‌ಡಿಎ ಪ್ರಕಾಶ ಮೇಲಿನಮನಿ ಮತ್ತು ಇಬ್ಬರು ಪೊಲೀಸರು ಪರಿಶೀಲಿಸಿದರು. ಮಣ್ಣು ಸರಿಸಿದಾಗ, ಚೀಲಗಳು ಸಿಕ್ಕವು.
ಮಣ್ಣು ಮೆತ್ತಿದ್ದ ಪೊಟ್ಟಣಗಳನ್ನು ಹೊರತೆಗೆದು ನೀರು ಹಾಕಿ ಒರೆಸಿದ್ದಾರೆ. ಪೊಟ್ಟಣದ ಮೇಲೆ ‘ಕರ್ನಾಟಕ ಸರ್ಕಾರ, ಅನ್ನಭಾಗ್ಯ ಹಸಿವು ಮುಕ್ತ ಕರ್ನಾಟಕ, ತೊಗರಿ ಬೇಳೆ’ ಎಂದು ಮುದ್ರಿತವಾಗಿದೆ.
‘ಪೊಟ್ಟಣದ ಮೇಲೆ 2019 ಎಂದು ನಮೂದಾಗಿದೆ. ಪೊಟ್ಟಣಗಳಿಂದ ಸುತ್ತಮುತ್ತ ದುರ್ನಾತ ವ್ಯಾಪಿಸಿದೆ. ಎರಡು ಚೀಲಗಳು ಸಿಕ್ಕಿವೆ. ಇನ್ನಷ್ಟು ಇರಬಹುದು. ಸಮೀಪದಲ್ಲೇ ಆಹಾರ ನಿಗಮದ ಉಗ್ರಾಣವಿದೆ. ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತೊಗರಿ ಬೇಳೆ ಪೊಟ್ಟಣಗಳಿದ್ದ ಚೀಲಗಳನ್ನು ಯಾರು ಹೂತಿದ್ದಾರೆ ಎಂಬುದು ಗೊತ್ತಿಲ್ಲ. ಅನ್ನಭಾಗ್ಯ ಯೋಜನೆಯಡಿ ‘ತೊಗರಿ ಬೇಳೆ’ ಪೊಟ್ಟಣ ಈಗ ವಿತರಿಸುತ್ತಿಲ್ಲ. ಹಳೆಯ ಪೊಟ್ಟಣಗಳು ಇರಬಹುದು.–ಸುಧೀರ್ ಸಾಹುಕಾರ ತಹಶೀಲ್ದಾರ್ ನವಲಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.