ಅಣ್ಣಿಗೇರಿ: ಶಿರಗುಪ್ಪಿ ಭಾಗದಲ್ಲಿ ಬೆಣ್ಣೆಹಳ್ಳದ ಹೂಳು ಎತ್ತಲು ₹1,600 ಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಇಲ್ಲಿನ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಪುರಸಭೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಅವರು ಮಾತನಾಡಿದರು.
‘ಗೊಬ್ಬರವನ್ನು ಹೆಚ್ಚಿನ ಬೆಲೆಗೆ ರೈತರಿಗೆ ಮಾರಾಟ ಮಾಡುವ ದಲ್ಲಾಳಿ ಹಾಗೂ ರಾಸಾಯನಿಕ ಗೊಬ್ಬರ ಮಾರಾಟ ಅಂಗಡಿಗಳನ್ನು ಪರಿಶೀಲಿಸಿ, ತಪ್ಪು ಮಾಡುವುದು ಕಂಡುಬಂದರೆ ಪರವಾನಗಿ ರದ್ದು ಮಾಡಲಾಗುವುದು ಮತ್ತು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ವೈದ್ಯಾಧಿಕಾರಿಗೆ ತರಾಟೆ: ‘ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಇಸಿಜಿ ಚಿಕಿತ್ಸೆ ಕೆಲವು ವರ್ಷಗಳಿಂದ ಇಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ನಿರಂತರ ಔಷಧ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ’ ಎಂದು ಬಸವರಾಜ ಬೆಟಗೇರಿ ಅವರು ಸಮಸ್ಯೆ ತಿಳಿಸಿದರು.
ಕೂಡಲೇ ವೈದ್ಯಾಧಿಕಾರಿಯನ್ನು ವೇದಿಕೆಗೆ ಕರೆದು ತರಾಟೆಗೆ ತೆಗೆದುಕೊಂಡ ಸಚಿವರು, ಸಮರ್ಪಕವಾಗಿ ಔಷಧಗಳನ್ನು ಪೂರೈಸುವಂತೆ ಸೂಚಿಸಿದರು. ಕೆಲವು ತಿಂಗಳುಗಳಲ್ಲಿ ಇಸಿಜಿ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದರು.
ಸಚಿವರ ಭರವಸೆ: ಕೆಲವು ವರ್ಷಗಳ ಹಿಂದೆ ಕೆಲಸ ಮಾಡುವಾಗ ಕಟ್ಟಡದಿಂದ ಬಿದ್ದು ಅಂಗವೈಕಲ್ಯಕ್ಕೆ ಒಳಗಾದ ರಾಜೇಸಾಬ ಬಾಬುಸಾಬ ಕಣವಿ ಅವರಿಗೆ ಸರ್ಕಾರ ಅಥವಾ ಸಂತೋಷ ಲಾಡ್ ಪೌಂಡೇಶನ್‌ನಿಂದ ಅಂಗಡಿ ತೆರೆಯಲು ಸಹಾಯ ಮಾಡುವುದಾಗಿ ತಿಳಿಸಿದರು.
ತಾಲ್ಲೂಕಿನ ಮಾಜಿ ಪೈಲ್ವಾನ್ ಕಚೇರಿ ಜಾಗದ ನೋಂದಣಿಗಾಗಿ ಅಗತ್ಯ ಇರುವ ₹2.15 ಲಕ್ಷವನ್ನು ವೈಯಕ್ತಿಕವಾಗಿ ನೀಡಿ ನೋಂದಣಿ ಮಾಡಿಸಿಕೊಡುವುದಾಗಿ ಒಪ್ಪಿಗೆ ನೀಡಿದರು.
ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ್, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಬಿರಾದರ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಸ್.ಆರ್. ಪಾಟೀಲ ಇದ್ದರು.
199 ಅರ್ಜಿ ಸಲ್ಲಿಕೆ
ಕಂದಾಯ ಇಲಾಖೆಗೆ 52 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 48 ನಗರಾಭಿವೃದ್ಧಿ ಇಲಾಖೆಗೆ 34 ಇಂಧನ ಇಲಾಖೆಗೆ 10 ಸೇರಿ ಒಟ್ಟು 199 ಅರ್ಜಿಗಳು ಸಲ್ಲಿಕೆ ಆದವು. ಸಾರ್ವಜನಿಕ ಅರ್ಜಿಗಳನ್ನು ಮುಂದಿನ ಕ್ರಮಕ್ಕಾಗಿ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಕಳುಹಿಸಿ ಅವರಿಂದ ಉತ್ತರ ಪಡೆದು ಜನತಾ ದರ್ಶನದಲ್ಲಿ ನೀಡಲಾಯಿತು. ‘ಸರ್ಕಾರದ ಮಟ್ಟದಲ್ಲಿ ನಿರ್ಣಯವಾಗಬೇಕಾದ ಅರ್ಜಿಗಳನ್ನು ಸೂಕ್ತ ಶಿಫಾರಸುಗಳೊಂದಿಗೆ ಸಂಬಂಧಿಸಿದ ಇಲಾಖೆಗೆ ಕಳಿಸಲಾಗುವುದು’ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.