ADVERTISEMENT

ಬೆಣ್ಣೆಹಳ್ಳದ ಪ್ರವಾಹದಿಂದ ನಲುಗಿದ ಗ್ರಾಮಗಳು; ಜಲಾವೃತಗೊಂಡ ಮನೆ, ಶಾಲೆ

‘ಹಳ್ಳದಿಂದಾಗಿ ಬದುಕೇ ಬ್ಯಾಸರಾಗೈತ್ರಿ...’

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 2:20 IST
Last Updated 7 ಸೆಪ್ಟೆಂಬರ್ 2022, 2:20 IST
ಹುಬ್ಬಳ್ಳಿ ತಾಲ್ಲೂಕಿನಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದಾಗಿ ಕಿರೇಸೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಂಡಿಯುದ್ದದ ನೀರಿನಲ್ಲಿ ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತುಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ತಾಲ್ಲೂಕಿನಲ್ಲಿ ಬೆಣ್ಣೆಹಳ್ಳ ಪ್ರವಾಹದಿಂದಾಗಿ ಕಿರೇಸೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಂಡಿಯುದ್ದದ ನೀರಿನಲ್ಲಿ ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತುಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಚಲೋ ಮಳಿ ಬಂದ್ರ ಎಲ್ರಿಗೂ ಬಾಳ ಖುಷಿಯಾಗ್ತೈತ್ರಿ. ಆದ್ರ, ನಮಗ ಮಾತ್ರ ಈ ಬೆಣ್ಣಿಹಳ್ಳದಿಂದಾಗಿ ಬದುಕೇ ಬ್ಯಾಸರಾಗೈತ್ರಿ. ಹಳ್ಳದ ನೀರು ಯಾವಾಗ ಮನಿ ನುಗ್ಗುತ್ತೊ ಅಂತ ಭಯದಾಗ ಜೀವನ ಮಾಡ್ಬೇಕಾಗೈತಿ...’

ಹೊಸ್ತಿಲು ದಾಟಿ ಮನೆ ಪ್ರವೇಶಿಸಿದ್ದ ಬೆಣ್ಣೆಹಳ್ಳ ಪ್ರವಾಹದ ನೀರನ್ನು ಬಕೆಟ್‌ನಲ್ಲಿ ಹೊರ ಚೆಲ್ಲುತ್ತಿದ್ದ ಕಲ್ಲವ್ವ ಬೂದಣ್ಣವರ ಅವರ ನೋವಿನ ಮಾತುಗಳಿವು.

ಹಳ್ಳದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಗ್ರಾಮವು ಮಳೆಗಾಲದಲ್ಲಿ ಕನಿಷ್ಠ ಆರೇಳು ಸಲ ಜಲಾವೃತವಾಗುವುದು ಮಾಮೂಲಿ. ಪ್ರವಾಹದದಿಂದ ನಲುಗುವ ಜನರಿಗೆ ಪ್ರತಿ ಸಲ ಸಾಂತ್ವನದ ಮಾತುಗಳನ್ನು ಬಿಟ್ಟರೆ, ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕ್ರಮಗಳು ಮಾತ್ರ ಸಿಕ್ಕಿಲ್ಲ.

ADVERTISEMENT

ಬದ್ಕು ಬದಲಾಗಿಲ್ರಿ: ‘ಬೆಳಿಗ್ಗಿ ನಿದ್ದಿಯಿಂದ ಏಳಾಕೆ ಮುಂಚೆ ಓಣ್ಯಾಗೆ ನೀರು ನುಗ್ಗೈತ್ರಿ. ಎದ್ವೊ ಬಿದ್ವೊ ಅಂತ ನೆಲದಲ್ಲಿದ್ದ ಸಾಮಾನುಗಳನ್ನು ಮ್ಯಾಲಕ್ಕೆ ಇಟ್ಟೆವ್ರಿ. ಆದ್ರೂ, ಪಾತ್ರಿ, ಮೇವು, ಕೆಲ ಸಾಮಾನು ನೀರಿನ್ಯಾಗ ತೋಯ್ದಾವ್ರಿ. ಮಿನಿಸ್ಟ್ರು, ಶಾಸಕ್ರು, ಪಂಚಾಯ್ತಿಯವ್ರ ಹಿಂಗ ಬಂದ್, ಹಂಗ ನೋಡ್ಕೊಂಡ್ ಹೋಗ್ತಾರೆ. ಆದ್ರ, ನಮ್ಮ ಬದ್ಕು ಮಾತ್ರ ಬದಲಾಗಿಲ್ರಿ’ ಎಂದು ಕಲ್ಲವ್ವ ಅವರ ಪಕ್ಕದ ಮನೆಯ ಮೀನಾಕ್ಷಿ ಬೂದಣ್ಣವರ ಅಸಮಾಧಾನ ವ್ಯಕ್ತಪಡಿಸಿದರು.

ಹೆಬಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಬೆಣ್ಣೆಹಳ್ಳದ ಪ್ರವಾಹದ ಬಿಸಿ ತಪ್ಪಿಲ್ಲ. ಶಾಲೆಯ ಕಟ್ಟಡ ಶಿಥಿಲಗೊಂಡಿದ್ದರಿಂದ, ಕಾರಿಡಾರ್‌ನ ಮೂರ್ನಾಲ್ಕು ಕಂಬಗಳು ನೆಲಕ್ಕುರುಳಿವೆ. ಹತ್ತಕ್ಕೂ ಹೆಚ್ಚು ಕೊಠಡಿಗಳಿಗೆ ನೀರು ನುಗ್ಗಿ, ಕಲಿಕಾ ಸಾಮಗ್ರಿಗಳೆಲ್ಲ ನೆಂದು ಚೆಲ್ಲಾಪಿಲ್ಲಿಯಾಗಿವೆ.

ಶಾಲೆ ಸ್ಥಳಾಂತರಿಸಿ: ‘ಮಳೆ ಬಂದರೆ ಭಯವಾಗುತ್ತದೆ. ಹಳೆಯದಾದ ಶಾಲಾ ಕಟ್ಟಡ ಹಲವು ವರ್ಷಗಳಿಂದ ಪ್ರವಾಹದಿಂದ ಜಲಾವೃತಗೊಂಡು ಶಿಥಿಲಗೊಂಡಿದೆ. ಯಾವಾಗ ಬೀಳುತ್ತದೊ ಎಂಬ ಆತಂಕದಲ್ಲೇ ಕಾಲ ಕಳೆಯುತ್ತಿದ್ದೇವೆ. ಆದಷ್ಟು ಬೇಗ ಶಾಲೆಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೇಕು’ ಎಂದು ಹೆಬಸೂರಿನ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಾ ಗ್ರಾಮಪುರೋಹಿತ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.