
ಹುಬ್ಬಳ್ಳಿ: ‘ನಗರದಲ್ಲಿ ಶನಿವಾರ ನಡೆದ ಮನೆ ಹಂಚಿಕೆ ಕಾರ್ಯಕ್ರಮವು ಯಶಸ್ವಿಯಾಗಿದೆ. ಇದು ಸರ್ಕಾರದ ಕಾರ್ಯಕ್ರಮ, ಬಡವರ ಕಾರ್ಯಕ್ರಮ. ಅಂಥ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಭಾಗಿಯಾಗುವುದನ್ನು ಬಿಟ್ಟು ಬಿಜೆಪಿಯವರು ಆರೋಪಗಳಲ್ಲಿ ತೊಡಗಿದ್ದಾರೆ’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಡವರ ಕಾರ್ಯಕ್ರಮ ವಿರೋಧಿಸಿ ಬಿಜೆಪಿಯವರು ಪ್ರತಿಭಟಿಸಿದ್ದಾರೆ. ಗ್ಯಾರಂಟಿ ಯೋಜನೆ ಬಗ್ಗೆಯೂ ಹೀಗೇ ನಡೆದುಕೊಂಡಿದ್ದಾರೆ. ಅವರಿಗೆ ಬಡವರು ಎಂದರೇ ಅಲರ್ಜಿ’ ಎಂದು ಟೀಕಿಸಿದರು.
‘ಬಿಜೆಪಿ, ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಲ್ಲೂ ಮನೆಗಳ ಹಂಚಿಕೆ ಆಗಿದೆ. ಆದರೆ ಆ ಪಕ್ಷಗಳ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಅವರು ಮಾಡಿರುವ ಎಲ್ಲ ಆರೋಪಗಳೂ ಸತ್ಯಕ್ಕೆ ದೂರವಾದವು’ ಎಂದು ತಿಳಿಸಿದರು.
‘ನಾನು ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಖುದ್ದಾಗಿ ಶಾಸಕ ಅರವಿಂದ ಬೆಲ್ಲದ, ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೂ ಎರಡು ಬಾರಿ ಮಾತನಾಡಿದ್ದೇವೆ. ಆದರೂ ತಮ್ಮನ್ನು ಕರೆದಿಲ್ಲ, ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸುತ್ತಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಲ ಕಾರ್ಯಕ್ರಮಗಳಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡುರುವುದು ಅವರು. ಶಿಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಅವರಿಗಿಲ್ಲ’ ಎಂದು ಕಿಡಿ ಕಾರಿದರು.
ಅಕ್ರಮವಿಲ್ಲ: ‘ಈಗಾಗಲೇ ಮನೆ ಇದ್ದವರಿಗೇ ಮತ್ತೆ ಮನೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಹಾಗೆ ಆಗುವ ಪ್ರಮೇಯವೇ ಇಲ್ಲ. ಒಂದೊಮ್ಮೆ ಅಂಥ ಪ್ರಕರಣ ಸಾಬೀತುಪಡಿಸಿದರೆ ತಕ್ಷಣ ಅವರಿಂದ ಮನೆಯನ್ನು ಹಿಂಪಡೆಯಲಾಗುವುದು’ ಎಂದು ಅವರು ಸವಾಲು ಹಾಕಿದರು.
ಸದ್ಯದಲ್ಲೇ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ಹಸ್ತಾಂತರ ಆಗಲಿದೆ. ಕಾನೂನು ಉಲ್ಲಂಘಿಸಿ ಯಾರೂ ಮನೆಗಳನ್ನು ಪರಭಾರೆ ಮಾಡಬಾರದುಪ್ರಸಾದ ಅಬ್ಬಯ್ಯ ಶಾಸಕ
‘ನಿರ್ವಹಣೆಗೆ ಯೋಜನೆ’: ‘ಮನೆಗಳನ್ನು ನಿರ್ಮಿಸಿದ ಪ್ರದೇಶದ ಮುಂದಿನ ಜಾಗದಲ್ಲಿ ವ್ಯಾಪಾರಿ ಮಳಿಗೆ ನಿರ್ಮಿಸಿ ಅದರ ಬಾಡಿಗೆಯಿಂದ ಬಂದ ಆದಾಯದಲ್ಲಿ ಮನೆಗಳ ನಿರ್ವಹಣೆ ಮಾಡುವ ಯೋಚನೆ ಇದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದಲೇ ನಿರ್ವಹಣೆ ಮಾಡಬೇಕೇ ಅಥವಾ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಗೆ ನಿರ್ವಹಣೆಯ ಹೊಣೆಯನ್ನು ವಹಿಸಬೇಕೇ ಎಂಬುದನ್ನು ನಿರ್ಧರಿಸಲಾಗುವುದು’ ಎಂದು ಪ್ರಸಾದ ಅಬ್ಬಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.