ADVERTISEMENT

ಕಾಂಗ್ರೆಸ್‌ಗೆ ರಾಮನಿಗೆ ಎಣ್ಣೆ ಸೀಗೆಕಾಯಿ ಸಂಬಂಧ: ಸಿ.ಟಿ ರವಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 16:22 IST
Last Updated 13 ಜನವರಿ 2024, 16:22 IST
ಸಿ.ಟಿ.ರವಿ
ಸಿ.ಟಿ.ರವಿ   

ಹುಬ್ಬಳ್ಳಿ: ‘ಕಾಂಗ್ರೆಸ್‌ನವರಿಗೂ ರಾಮನಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಕಾಂಗ್ರೆಸ್ ಟ್ರ್ಯಾಕ್ ರೆಕಾರ್ಡ್ ನೋಡಿದಾಗ ಇದು ಮನದಟ್ಟಾಗುತ್ತೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ದ್ದು ಒಂಥರಾ ಎಡಬಿಡಂಗಿ. ಆ ಕಡೆ ಬಾಬರ್‌ನ ಬಿಡುವಂಗಿಲ್ಲ, ಈ ಕಡೆ ರಾಮನನ್ನು ಹಿಡಿಯಂಗಿಲ್ಲ. ಬಾಬರ್‌ನ ಬಿಡದೇ ರಾಮ ಸಿಗೋದಿಲ್ಲ. ರಾಮ ಕಾಲ್ಪನಿಕ ವ್ಯಕ್ತಿ ಎಂದು ಕಾಂಗ್ರೆಸ್‌ ನ್ಯಾಯಾಲಯದಲ್ಲಿ ಅಫಿಡವಿಟ್‌ ಸಲ್ಲಿಸಿತ್ತು’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳನ್ನ ಹಾಗೂ ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಮೀಪಿಸುತ್ತಿರುವಾಗ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಲಾಗಿದೆ. ಇದೇನು ಕಾಕತಾಳೀಯವೋ ಅಥವಾ ದುರುದ್ದೇಶವೋ ಎನ್ನುವುದು ಪ್ರಶ್ನಾರ್ಹ. ಶ್ರೀಕಾಂತ್ ಪೂಜಾರಿ ದೇಶ ಬಿಟ್ಟೇನು ಹೋಗಿರಲಿಲ್ಲ. 31 ವರ್ಷ ಹುಬ್ಬಳ್ಳಿಯಲ್ಲಿಯೇ ಇದ್ದರೂ ಯಾಕೆ ಬಂಧಿಸಿರಲಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ಲೋಕಸಭೆ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಇದುವರೆಗೆ ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಜನವರಿಯ ನಂತರ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಪಕ್ಷ ನಿರ್ಣಯ ಕೈಗೊಳ್ಳೋ ಸಾಧ್ಯತೆಗಳಿವೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ದೇವಾಲಯಗಳ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಈಗ ಬಾಲರಾಮನ ಮಂದಿರ ಪೂರ್ಣಗೊಂಡಿದೆ. ಇನ್ನುಳಿದ ದೇವಾಲಯಗಳ ನಿರ್ಮಾಣ ಕಾರ್ಯವು 2025–26ರವರೆಗೂ ನಡೆಯುತ್ತದೆ. ರಾಮಮಂದಿರ ನಿರ್ಮಾಣ ಟ್ರಸ್ಟ್‌ ನಿರ್ಣಯದಂತೆ ಈಗ ಬಾಲರಾಮನ ದೇವಾಲಯ ಉದ್ಘಾಟನೆ ನಡೆಯುತ್ತಿದೆ. ಇಬ್ಬರು ಸ್ವಾಮೀಜಿಗಳನ್ನು ಹೊರತುಪಡಿಸಿದರೆ ಸಾವಿರಾರು ಸ್ವಾಮೀಜಿಗಳು ಬೆಂಬಲ ನೀಡಿದ್ದಾರೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.