ADVERTISEMENT

ಹಾಲು ಕುಡಿದವರೇ ಬದುಕಲ್ಲ, ವಿಷ ಕುಡಿದವರು ಬದುಕುತ್ತಾರಾ?: ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಒಂದು ವರ್ಷ ಇದ್ದರೆ ಹೆಚ್ಚು: ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 6:13 IST
Last Updated 26 ಆಗಸ್ಟ್ 2019, 6:13 IST
   

ಹುಬ್ಬಳ್ಳಿ: ‘ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದವರು ಬದುಕುತ್ತಾರಾ...?’ – ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಸ್ತಿತ್ವದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದು ಹೀಗೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಂಡಾಯ ಶಾಸಕರನ್ನು ಇಟ್ಟುಕೊಂಡು ಸರ್ಕಾರ ಮುನ್ನಡೆಸುವುದಕ್ಕೆ ಆಗುತ್ತದೆಯೇ? ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತರನ್ನು ನಂಬಿಕೊಂಡು ರಚಿಸಿರುವ ಈ ಸರ್ಕಾರ ಒಂದು ವರ್ಷ ಇದ್ದರೆ ಹೆಚ್ಚು’ ಎಂದರು.

‘ರಾಜ್ಯದ ಮತದಾರರು ಬಿಜೆಪಿಗೆ ಬಹುಮತ ಕೊಟ್ಟಿಲ್ಲ. ಆದರೂ, ಕುದುರೆ ವ್ಯಾಪಾರ ಮಾಡಿ ವಾಮಮಾರ್ಗದಿಂದ ಸರ್ಕಾರ ರಚಿಸಿದ್ದಾರೆ. ಹಾಗಾಗಿ, ಜನರೇ ಅವರಿಗೆ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

‘ಬೆಂಗಳೂರು–ದೆಹಲಿ ಮಧ್ಯೆ ಸಚಿವರ ಟೂರ್‌’

‘ಸಚಿವರು ಈಗಾಗಲೇ ನೆರೆಪೀಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಪ್ರವಾಹ ಹಾನಿಯನ್ನು ಪರಿಶೀಲಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಿತ್ತು. ಆದರೆ, ಬೆಂಗಳೂರು– ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ಆದರೂ, ಕೇಂದ್ರದಿಂದ ಪರಿಹಾರ ತರಲು ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ಪ್ರವಾಹ ಸಂಭವಿಸಿ 20 ದಿನವಾದರೂ, ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಹಿಂದೆ ಯಾವತ್ತೂ ಹೀಗಾಗಿರಲಿಲ್ಲ. ಹಾನಿ ಸಮೀಕ್ಷೆಗೆ ಇದೀಗ ಅಧಿಕಾರಿಗಳ ತಂಡವನ್ನು ಕಳಿಸಿದ್ದಾರೆ. ಅವರು ವರದಿ ಕೊಟ್ಟ ನಂತರ, ಪರಿಹಾರ ಕೊಡುತ್ತಾರಂತೆ. ರಾಜ್ಯದಲ್ಲಿ ಸಂಭವಿಸಿದ ಪ್ರವಾಹವನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಿ, ಇಷ್ಟೊತ್ತಿಗಾಗಲೇ ತುರ್ತಾಗಿ ₹ 5 ಸಾವಿರ ಕೋಟಿ ಕೊಡಬೇಕಿತ್ತು’ ಎಂದರು.

‘ನನ್ನ ಪ್ರಕಾರ ಪ್ರವಾಹದಿಂದಾಗಿ ₹ 1 ಲಕ್ಷ ಕೋಟಿ ನಷ್ಟವಾಗಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗರಿಷ್ಠ ₹ 50 ಸಾವಿರ ಕೋಟಿ, ಮತ್ತೊಮ್ಮೆ ₹ 40 ಕೋಟಿ ನಷ್ಟವಾಗಿದೆ ಎನ್ನುತ್ತಿದ್ದಾರೆ’ ಎಂದು ಹೇಳಿದರು.

‘ಜನರಿಗೆ ಮನಬಂದಂತೆ ಪರಿಹಾರ ನೀಡದೆ, ವಾಸ್ತವವಾಗಿ ಆಗಿರುವ ನಷ್ಟವನ್ನು ಲೆಕ್ಕ ಹಾಕಿ ಪರಿಹಾರ ಕೊಡಬೇಕು. ಎನ್‌ಡಿಆರ್‌ಎಫ್ ಮಾನದಂಡಗಳಿಗೂ ನಷ್ಟಕ್ಕೂ ಸಂಬಂಧವಿಲ್ಲ. ಬೇಕಿದ್ದರೆ ಎನ್‌ಡಿಆರ್‌ಎಫ್ ಮಾನದಂಡಗಳನ್ನು ಸಡಿಲಿಸಿ, ಎಸ್‌ಡಿಆರ್‌ಎಫ್‌ನಿಂದ ಪರಿಹಾರ ಕೊಡಬಹುದು’ ಎಂದ ಅವರು, ‘ಸಂತ್ರಸ್ತರಿಗೆ ಮೊದಲು ತಾತ್ಕಾಲಿಕವಾಗಿ ಶೆಡ್ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಕೇಂದ್ರದ ನಾಯಕರಾದ ಗುಲಾಂ ನಬಿ ಆಜಾದ್ ರಾಜ್ಯಕ್ಕೆ ಇಂದು ಬರುತ್ತಿದ್ದಾರೆ ಎಂಬುದಷ್ಟೇ ಗೊತ್ತು. ಆದರೆ, ನಾನು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಬಾದಾಮಿಗೆ ಹೋಗುತ್ತಿದ್ದೇನೆ’ ಎಂದರು.

ಬಿಜೆಪಿ ಸರ್ಕಾರ ಮೂವರು ಉಪ ಮುಖ್ಯಮಂತ್ರಿಗಳನ್ನು ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಅವರು ಎಷ್ಟು ಜನ ಉಪ ಮುಖ್ಯಮಂತ್ರಿಗಳನ್ನು ಬೇಕಾದರೂ ಮಾಡಿಕೊಳ್ಳಲಿ. ಅದಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಶಾಸಕರಾದ ಎಂ.ಬಿ. ಪಾಟೀಲ ಹಾಗೂ ಪ್ರಸಾದ ಅಬ್ಬಯ್ಯ ಇದ್ದರು.

‘ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲಿಲ್ಲ: ಸರ್ಕಾರ ಬಿದ್ದೊಯ್ತು’

‘ಅತೃಪ್ತ ಬೈರತಿ ಬಸವರಾಜ್ ಸೇರಿದಂತೆ ಕೆಲವರನ್ನು ನಾನೇ ಮುಂಬೈಗೆ ಕಳಿಸಿದ್ದೇನೆ ಎಂದು ಜೆಡಿಎಸ್ ನಾಯಕ ಎಚ್.ಡಿ. ದೇವೆಗೌಡರು ಆರೋಪಿಸಿದ್ದರು. ಹಾಗಾದರೆ, ಅವರ ಪಕ್ಷದ ಎಚ್‌. ವಿಶ್ವನಾಥ್‌, ನಾರಾಯಣಗೌಡ ಹಾಗೂ ಗೋಪಾಲಯ್ಯನನ್ನು ಕಳಿಸಿದ್ದು ಯಾರು? ದೇವೆಗೌಡರಿಗೆ ತಮ್ಮ ಪಕ್ಷದ ಶಾಸಕರನ್ನೇ ಹಿಡಿತದಲ್ಲಿ ಇಟ್ಟುಕೊಳ್ಳಲು ಆಗಲಿಲ್ಲ. ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ, ಸರ್ಕಾರ ಬಿದ್ದೊಯ್ತು’ ಎಂದು ಸಿದ್ದರಾಮಯ್ಯ ಹೇಳಿದರು.

‘ದೇವೆಗೌಡರು ನನ್ನ ಮೇಲೆ ಗೂಬೆ ಕೂರಿಸಿ, ರಾಜಕೀಯ ಲಾಭ ಪಡೆದುಕೊಳ್ಳಲು ನೋಡಿದರು. ಅದು ಸಾಧ್ಯವಾಗಲಿಲ್ಲ. ರಾಜ್ಯದ ಜನ ಪ್ರಬುದ್ಧರಿದ್ದು, ಅವರಿಗೆ ಎಲ್ಲವೂ ಗೊತ್ತಾಗುತ್ತದೆ’ ಎಂದರು.

‘ಅನೈತಿಕ ಮಾರ್ಗದ ಮೂಲಕ‌ ಅಧಿಕಾರ ಹಿಡಿದವರಿಗೆ ಜನರ ಕಾಳಜಿಯಿಲ್ಲ’

ಬೆಂಗಳೂರು:ಅನೈತಿಕ ಮಾರ್ಗದ ಮೂಲಕ ಅಧಿಕಾರ ಹಿಡಿದವರಿಗೆ ಜನರ ಕಷ್ಟಗಳು ಅರ್ಥವಾಗುವುದಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಯಾವುದೇ ಸಮಯದಲ್ಲಿಯೂ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರವಾಹ ಪರಿಹಾರಕ್ಕೆ ಸಂಬಂಧಿಸಿ ಬಿಜೆಪಿ ಸರ್ಕಾರವನ್ನು ಟೀಕಿಸಿ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಮುಖ್ಯಮಂತ್ರಿಗಳು ಒಳಗೊಂಡಂತೆ ಸರ್ಕಾರದ ಎಲ್ಲ ಮಂತ್ರಿಗಳು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಇದನ್ನು ಬಿಟ್ಟು ನಿತ್ಯ ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ಬೆಂಗಳೂರಿಗೆ ಓಡಾಡುತ್ತಿದ್ದರೆ ಜನರ ಕಷ್ಟ ಕೇಳುವವರಾರು?’ ಎಂದು ಪ್ರಶ್ನಿಸಿದ್ದಾರೆ.

‘ಪ್ರವಾಹ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ತಾಣ ಒದಗಿಸುವಂತೆ ಕಳೆದ ವಾರವೇ ಆಗ್ರಹಿಸಿದ್ದೆ, ಸರ್ಕಾರ ಇನ್ನೂ ಕಣ್ಣುಮುಚ್ಚಿ ಕೂತಿದೆ. ಎರಡ್ಮೂರು ಸಾವಿರ ಪರಿಹಾರ ನೀಡಿದರೆ ಕಷ್ಟ ದೂರಾಗುವುದಿಲ್ಲ. ನಷ್ಟವನ್ನು ಸರಿಯಾಗಿ ಅಂದಾಜಿಸಿ, ಪರಿಹಾರ ಒದಗಿಸಬೇಕು. ಇದಕ್ಕೆ ಬೇಕಾದ ಅನುದಾನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಭರಿಸಲಿ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರವಾಹ ಪರಿಸ್ಥಿತಿ ಸಮೀಕ್ಷೆಗೆ ಕೇಂದ್ರದ ತಂಡ ಆಗಮಿಸಿದೆ. ಪ್ರವಾಹದಿಂದಾಗಿ ಸುಮಾರು 20 ಲಕ್ಷ ಎಕರೆ ಬೆಳೆ ಹಾನಿ, 80 ಜನರ ಪ್ರಾಣ ಹಾನಿಯಾಗಿದೆ, ಲಕ್ಷಾಂತರ ಮನೆಗಳು ನೆಲಸಮಗೊಂಡಿವೆ, ಸಾವಿರಾರು ಜಾನುವಾರುಗಳು ಸಾವಿಗೀಡಾಗಿವೆ. ಇದನ್ನೆಲ್ಲ ಸೂಕ್ತವಾಗಿ ಸಮೀಕ್ಷೆ ನಡೆಸಿ, ನ್ಯಾಯಯುತ ಪರಿಹಾರ ಒದಗಿಸಲಿ’ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮಧ್ಯಂತರ ಚುನಾವಣೆ ಯಾವ ಸಮಯದಲ್ಲಾದರೂ ಬರಬಹುದು, ಈ ಉದ್ದೇಶಕ್ಕಾಗಿ ಪಕ್ಷ ಬಲಪಡಿಸುವಂತೆ ನಮ್ಮವರಿಗೆ ಕರೆ ನೀಡಿದ್ದೇನೆ. ಯಡಿಯೂರಪ್ಪನವರ ಸರ್ಕಾರ ಹೆಚ್ಚು ಕಾಲ ನಿಲ್ಲುವುದು ಕಷ್ಟ. ಬಂಡಾಯ ಶಾಸಕರನ್ನು ಸೇರಿಸಿಕೊಂಡು ಸರ್ಕಾರ ನಡೆಸುವುದು ಸುಲಭದ ಮಾತಲ್ಲ, ‘ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟವಿರುವಾಗ, ವಿಷ ಕುಡಿದ ಮಕ್ಕಳು ಬದುಕುತ್ತವಾ?’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.