ಹುಬ್ಬಳ್ಳಿ: ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡಿ ಸರ್ಕಾರ ಏನು ಸಾಧಿಸಲು ಹೊರಟಿದೆ. ಅವೈಜ್ಞಾನಿಕ ಎಂಬ ಕಾರಣಕ್ಕಾಗಿಯೇ ಕಾಂತರಾಜು ಅಯೋಗದ ವರದಿಯನ್ನು ತಿರಸ್ಕರಿಸಲಾಗಿದೆ. ಹೀಗಾಗಿ ಈಗ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನನಂದ ಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಬೇಕು. ಆ ನಂತರ ಕಾನೂನು ತಜ್ಞರ ಸಮಿತಿ ರಚಿಸಿ, ಸಮಾಜದ ಹಿರಿಯರ ಜತೆ ಚರ್ಚಿಸಿ ಸಮೀಕ್ಷೆ ನಡೆಸಬೇಕು.ಇದು ಏಳು ಕೋಟಿ ಕನ್ನಡಿಗರ ಭವಿಷ್ಯದ ಪ್ರಶ್ನೆ. ಗೊಂದಲ ನಿವಾರಿಸುವಂತೆ ಮುಖ್ಯಮಂತ್ರಿ ಮತ್ತು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಆಯೋಗವು ಜಾತಿ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಲಿಂಗಾಯತ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂಬ ದೋಷಗಳನ್ನು ಉಳಿಸಿದೆ. ಒಳಪಂಗಡಗಳಲ್ಲಿ, ಲಿಂಗಾಯತ ಅಗಸಕ್ಕೆ ಒಂದು ಕೋಡ್ , ಅಗಸ ಲಿಂಗಾಯಕ್ಕೆ ಇನ್ನೊಂದು ಕೋಡ್ ನೀಡಲಾಗಿದೆ. ಅಗಸ ಕ್ರಿಶ್ಚಿಯನ್ ಎಂದು ಬರೆಸಿದವರನ್ನು ಯಾವ ಧರ್ಮದವರೆಂದು ಪರಿಗಣಿಸಲಾಗುತ್ತದೆ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಏಕತಾ ಸಮಾವೇಶಕ್ಕೂ, ಪಂಚಮಸಾಲಿ ಸಮಾಜಕ್ಕೂ ಸಂಬಂಧ ಇಲ್ಲ. ಶಾಸಕ ವಿಜಯಾನಂದ ಕಾಶನವರ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಪಂಚಮಸಾಲಿ ಪೀಠಗಳು ಹೇಳುವುದನ್ನು ಮಾತ್ರ ಸಮಾಜದವರು ಕೇಳಬೇಕು ಎಂದರು.
ಅದು ಸಣ್ಣ ಸಮುದಾಯದವರ ಸಮಾವೇಶ. ಅಲ್ಲಿ ಕೇವಲ ಏಳು ಸಾವಿರ ಜನ ಮತ್ತು ಕೆಲವೇ ಸ್ವಾಮೀಜಿಗಳು ಭಾಗವಹಿಸಿದ್ದರು. ಉಳಿದಂತೆ ಪುರೋಹಿತರಿಗೆ ಕಾವಿ ಬಟ್ಟೆ ಹಾಕಿ ಕೂರಿಸಿದ್ದರು. ಸಮಾವೇಶದಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಅವರು ಗೊಂದಲದಲ್ಲಿದ್ದಾರೆ. ನಮ್ಮಲ್ಲಿ ಸ್ಪಷ್ಟತೆ ಇದೆ ಎಂದು ಹೇಳಿದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸುವಂತೆ ಪಂಚಮಸಾಲಿ ಪೀಠ, ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ನಿರ್ಣಯ ಕೈಗೊಂಡಿದೆ. 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಸಮಾಜದವರ ಅಭಿಪ್ರಾಯ ಆಲಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮಠದಲ್ಲಿ ಕುಳಿತು ನಿರ್ಧಾರ ಮಾಡಿಲ್ಲ. ಈ ಬಗ್ಗೆ ಸಮುದಾಯದವರ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.
ಆಯಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯದ ಪ್ರಮುಖರು ಜಾಗೃತಿ ಮೂಡಿಸಲಿದ್ದಾರೆ. ಮತ್ತೆ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುವುದು. ನಮ್ಮಸಮಾಜದ ಮೂರು ಪೀಠಗಳು ಒಮ್ಮತದ ನಿರ್ಣಯ ಕೈಗೊಂಡಿದ್ದೇವೆ. ಎಲ್ಲ ಮುಖಂಡರು ಅದನ್ನು ಒಪ್ಪುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.