ADVERTISEMENT

ಚನ್ನಕೇಶವ ನಗರ | ಸೌಕರ್ಯ ಮರೀಚಿಕೆ: ಆರೋಗ್ಯ ಸಮಸ್ಯೆ ಹೆಚ್ಚಳ

ಎಲ್‌.ಮಂಜುನಾಥ
Published 5 ಫೆಬ್ರುವರಿ 2025, 4:55 IST
Last Updated 5 ಫೆಬ್ರುವರಿ 2025, 4:55 IST
<div class="paragraphs"><p>ಹುಬ್ಬಳ್ಳಿಯ ಚನ್ನಕೇಶವ ನಗರದಲ್ಲಿನ ಚನ್ನಪ್ಪನ ಕೆರೆಯು ಕಳೆಗಿಡ, ತ್ಯಾಜದಿಂದ ತುಂಬಿರುವುದು </p></div>

ಹುಬ್ಬಳ್ಳಿಯ ಚನ್ನಕೇಶವ ನಗರದಲ್ಲಿನ ಚನ್ನಪ್ಪನ ಕೆರೆಯು ಕಳೆಗಿಡ, ತ್ಯಾಜದಿಂದ ತುಂಬಿರುವುದು

   

–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ‘ಒಳಚರಂಡಿ ಪೈಪ್‌ ಸಮಸ್ಯೆಯಿಂದಾಗಿ ಆಗಾಗ ಗಟಾರು ತುಂಬಿ ಮನೆ ಮುಂದೆಯೇ ಕೊಳಚೆ ನೀರು ಹರಿಯುತ್ತದೆ. ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಾಣ ಮಾಡಿ ಎರಡು ವರ್ಷಗಳಾದರೂ ಸ್ವಚ್ಛತೆ ಕಾರಣ ನೀಡಿ, ಜನರ ಬಳಕೆಗೆ ಕೊಡುತ್ತಿಲ್ಲ. ಬೀದಿ ದೀಪಗಳ ಸಮಸ್ಯೆಯಿಂದಾಗಿ ರಾತ್ರಿ ವೇಳೆ ಇಲ್ಲಿ ಓಡಾಡುವುದು ಕಷ್ಟವಾಗುತ್ತದೆ.’

ADVERTISEMENT

– ಹೀಗೆ ಅಳಲು ತೋಡಿಕೊಂಡವರು ಚನ್ನಕೇಶವ ನಗರದ ನಿವಾಸಿಗಳಾದ ವೀರಯ್ಯ ಹಿರೇಮಠ ಹಾಗೂ ಲಕ್ಷ್ಮಿ.

ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ ನಂ 36ರ ವ್ಯಾಪ್ತಿಗೆ ಒಳಪಡುವ ಚನ್ನಕೇಶವ ನಗರದಲ್ಲಿ 80ಕ್ಕೂ ಅಧಿಕ ಮನೆಗಳಿದ್ದು, ಬಹುತೇಕ 10X15 ಅಡಿ ಅಳತೆಯಲ್ಲಿಯೇ ನಿರ್ಮಾಣವಾಗಿವೆ. ಇಲ್ಲಿನ ನಿವಾಸಿಗಳು ಬಹುತೇಕರು ಕೂಲಿ ಕಾರ್ಮಿಕರು, ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರು, ಕಟ್ಟಡ ಕಾರ್ಮಿಕರು.  

ಆದರೆ, ಇಲ್ಲಿ ಸೌಕರ್ಯ ಎನ್ನುವುದು ಮರೀಚಿಕೆಯಾಗಿದೆ. ಚಿಕ್ಕ ಚಿಕ್ಕ ಮನೆಗಳಿರುವ ಈ ಪ್ರದೇಶದಲ್ಲಿ ಮನೆಯ ಮುಂದೆ ಚರಂಡಿ ವ್ಯವಸ್ಥೆಯಿಲ್ಲ. ಬಟ್ಟೆ, ಪಾತ್ರೆ ತೊಳೆದ ನೀರು ಮನೆಯ ಮುಂದೆಯೇ ಹರಿಯುತ್ತದೆ. ಆಗಾಗ ಗಟಾರು ಸಮಸ್ಯೆಯಿಂದಾಗಿ ಶೌಚದ ಗಲೀಜು ನೀರು ಮನೆಯ ಅಂಗಳದಲ್ಲಿಯೇ ನಿಲ್ಲುತ್ತದೆ. 

ಚರಂಡಿ ನಿರ್ಮಿಸಿಕೊಂಡಿ ಎಂದು ಸ್ಥಳೀಯರು ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮನೆಯಲ್ಲಿ ಶೌಚಾಲಯ ಇಲ್ಲದವರಿಗೆ ಅನುಕೂಲವಾಗಲಿ ಎಂದು ಪಾಲಿಕೆ ವತಿಯಿಂದ ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸಾರ್ವಜನಿಕ ಶೌಚಾಲಯ ಕಟ್ಟಡವು ಇಂದಿಗೂ ಜನರ ಬಳಕೆಗೆ ನೀಡದೇ ಬೀಗ ಹಾಕಲಾಗಿದೆ. 

‘ಚನ್ನಕೇಶವ ನಗರದಲ್ಲಿ 85 ಮನೆಗಳಿದ್ದು, 7 ಓಣಿಗಳಿವೆ. ಪ್ರತಿ ಓಣಿಯಲ್ಲಿನ ಮನೆಗಳ ಶೌಚದ ನೀರು ಹರಿದು ಹೋಗಲು ಅಲ್ಲಲ್ಲಿ ಚಿಕ್ಕ ಚಿಕ್ಕ ಗಟಾರುಗಳನ್ನು ನಿರ್ಮಾಣ ಮಾಡಲಾಗಿದೆ. ಒಳಚರಂಡಿ ಪೈಪ್‌ಗಳು ಚಿಕ್ಕದಿರುವ ಕಾರಣ, ಪದೇ ಪದೇ ಗಟಾರು ತುಂಬಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತದೆ. ಪಾಲಿಕೆಯವರು ತಾತ್ಕಾಲಿಕವಾಗಿ ಗಟಾರುಗಳನ್ನು ದುರಸ್ತಿ ಮಾಡುತ್ತಾರೆ. ಮತ್ತೇ ಅದೇ ಸಮಸ್ಯೆ ಉಂಟಾಗುತ್ತದೆ’ ಎಂದು ವೀರಯ್ಯ ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.

’ಒಳಚರಂಡಿ ಸಮಸ್ಯೆ ನಿವಾರಣೆಗಾಗಿ ಬೈರದೇವರಕೊಪ್ಪದ ಮುಖ್ಯ ರಸ್ತೆಯಿಂದ ಹೊಸದಾಗಿ ಒಳಚರಂಡಿ ಪೈಪ್‌ಗಳ ಅಳವಡಿಕೆ ಕಾಮಾಗಾರಿ ಹಮ್ಮಿಕೊಳ್ಳಲಾಗಿದ್ದು, ಇಂದಿಗೂ ಕಾಮಗಾರಿ ಮುಗಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು. 

‘ವಿದ್ಯುತ್‌ ಕಂಬಗಳಿಲ್ಲ. ಬೀದಿ ದೀಪಗಳ ಸಮಸ್ಯೆಯಿಂದಾಗಿ ರಾತ್ರಿ ವೇಳೆ ಇಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಮುಖ್ಯ ರಸ್ತೆಯೂ ಹಾಳಾಗಿದ್ದು, ವಾಹನಗಳ ಸಂಚಾರಕ್ಕೂ ಯೋಗ್ಯವಾಗಿಲ್ಲ. ರಸ್ತೆ ದುರಸ್ತಿ ಮಾಡಿಸಿ, ಬೀದಿ ದೀಪಗಳನ್ನು ಅಳವಡಿಸಿಕೊಡಿ ಎಂದು ಹಲವು ಬಾರಿ ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಸ್ಥಳಕ್ಕೆ ಬರುವ ಅಧಿಕಾರಿಗಳು ಸಮಸ್ಯೆ ಬರೆದುಕೊಂಡು ಹೋಗುತ್ತಾರೆ. ಆದರೆ, ಇಂದಿಗೂ ಬಗೆಹರಿದಿಲ್ಲ’ ಎಂದು ನಿವಾಸಿ ಗೋ‍ಪಿ ದೂರಿದರು. 

‘ಚನ್ನಕೇಶವ ನಗರದಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸಿಮೆಂಟ್ ರಸ್ತೆ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಸ್ವಚ್ಛತೆ ಸಮಸ್ಯೆಯಿಂದಾಗಿ ಶೌಚಾಲಯದ ಬೀಗ ಹಾಕಿರಬಹುದು. ಸ್ಥಳೀಯರು ಅದನ್ನು ಸ್ವಚ್ಛವಾಗಿಟ್ಟುಕೊಂಡು ಬಳಸಬೇಕು’ ಎನ್ನುತ್ತಾರೆ ಪಾಲಿಕೆ ಸದಸ್ಯ ರಾಜಣ್ಣ ಕೊರವಿ.  

ಹುಬ್ಬಳ್ಳಿಯ ಚನ್ನಕೇಶವ ನಗರ ಮಾರ್ಗದ ಹಾಳಾಗಿರುವ ರಸ್ತೆಯಲ್ಲಿಯೇ ದ್ವಿಚಕ್ರ ವಾಹನ ಸವಾರರು ಸಾಗಿದರು

ಚನ್ನಕೇಶವ ನಗರದ ನೋಟ

ಚನ್ನಪ್ಪನ ಕೆರೆಯನ್ನು ಸ್ಥಳೀಯರು ತ್ಯಾಜ್ಯದ ಗುಂಡಿಯಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಡೀ ಕೆರೆ ಹಾಳಾಗಿದೆ. ಕೆರೆ ಸ್ವಚ್ಛತೆಯಲ್ಲಿ ಸ್ಥಳೀಯರ ಹೊಣೆಗಾರಿಕೆಯೂ ಇದೆ. ₹75 ಲಕ್ಷ ವೆಚ್ಚದಲ್ಲಿ ಒಳಚರಂಡಿ ಪೈಪ್‌ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಬೇಗನೆ ಕಾಮಗಾರಿ ಮುಗಿಸಲಾಗುವುದು.
  –ರಾಜಣ್ಣ ಕೊರವಿ ಪಾಲಿಕೆ ಸದಸ್ಯ 36ನೇ ವಾರ್ಡ್‌.
ಚನ್ನಕೇಶವ ನಗರದ ಕೆಲವೆಡೆ ಸಿಮೆಂಟ್‌ ರಸ್ತೆ ನಿರ್ಮಿಸಲಾಗಿದೆ. ಒಳಚರಂಡಿ ನಿರ್ಮಾಣ ಬೀದಿ ದೀಪಗಳನ್ನು ಅಳವಡಿಸಲಾಗುವುದು. ನಾಲ್ಕು ತಿಂಗಳ ಹಿಂದೆ ಚನ್ನಪ್ಪನ ಕೆರೆ ಸ್ವಚ್ಛ ಮಾಡಲಾಗಿತ್ತು. ಮತ್ತೊಮ್ಮೆ ಕೆರೆಯಲ್ಲಿನ ಕಳೆ ತೆಗೆಯಲಾಗುವುದು
–ಈಶ್ವರ ಉಳ್ಳಾಗಡ್ಡಿ ಆಯುಕ್ತರು. ಹು–ಧಾ ಮಹಾನಗರ ಪಾಲಿಕೆ.

ಚನ್ನಪ್ಪನ ಕೆರೆಯಲ್ಲಿ ತುಂಬಿದ ಕಳೆ-ಕೊಳೆ

ಚನ್ನಕೇಶವ ನಗರಕ್ಕೆ ತಾಗಿಕೊಂಡಿರುವ ಚನ್ನಪ್ಪನ ಕೆರೆಯು ಪಾಚಿ ರಾಶಿ ರಾಶಿ ಕಳೆ ಗಿಡಗಳಿಂದ ತುಂಬಿದ್ದು ಇಡೀ ಕೆರೆಯು ತ್ಯಾಜ್ಯದ ಗುಂಡಿಯಾಗಿ ಪರಿವರ್ತನೆಯಾಗಿದೆ.  ‘ನಾಲ್ಕು ತಿಂಗಳ ಹಿಂದೆ ಕೆರೆಯಲ್ಲಿನ ಕಳೆಗಿಡ ತ್ಯಾಜ್ಯವನ್ನು ತೆಗೆಯಲಾಗಿತ್ತು. ಮತ್ತೆ ಮತ್ತೆ ಕಳೆ ಗಿಡಗಳು ಬೆಳೆಯುತ್ತಿದ್ದು ಇಡೀ ಕೆರೆಯು ದುರ್ವಾಸನೆಯಿಂದ ಕೂಡಿದೆ. ಸೊಳ್ಳೆಗಳ ಸಮಸ್ಯೆ ಹೇಳತೀರದು. ರಾತ್ರಿ ವೇಳೆಯಲ್ಲಿ ನೆಮ್ಮದಿಯಾಗಿ ಮಲಗಲು ಸಾಧ್ಯವಾಗುತ್ತಿಲ್ಲ. ಸೊಳ್ಳೆಗಳ ಕಡಿತದಿಂದಾಗಿ ಹಲವು ಬಾರಿ ಆರೋಗ್ಯ ಸಮಸ್ಯೆಯೂ ಉಂಟಾಗಿದೆ’ ಇಲ್ಲಿನ ನಿವಾಸಿ ಗೃಹಿಣಿ ಸಕ್ಕೂಬಾಯಿ ಅಳಲು ತೋಡಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.