
ಹುಬ್ಬಳ್ಳಿ: ರಾಜ್ಯದಲ್ಲಿ ಅನಾಥ, ಪರಿತ್ಯಕ್ತ, ನಿರ್ಗತಿಕ ಮಕ್ಕಳನ್ನು ದತ್ತು ಪಡೆಯಲು ಎರಡು ಸಾವಿರಕ್ಕೂ ಹೆಚ್ಚು ದಂಪತಿ ಕಾಯುತ್ತಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಲ್ಲಿ 590 ಮಕ್ಕಳದ್ದು ಮಾತ್ರ ದತ್ತು ಪ್ರಕ್ರಿಯೆ ಪೂರ್ಣಗೊಂಡಿದೆ.
ಅನಾಥ, ಪರಿತ್ಯಕ್ತ, ಮಾರಣಾಂತಿಕ ಕಾಯಿಲೆಗಳಿಂದ ಬಳಲುವ ಮಕ್ಕಳ ಪೋಷಣೆಗಾಗಿ ರಾಜ್ಯದ 31 ಜಿಲ್ಲೆಗಳಲ್ಲೂ ತಲಾ ಒಂದರಂತೆ ಸರ್ಕಾರಿ ಮತ್ತು 724 ಸರ್ಕಾರೇತರ ಸಂಸ್ಥೆಗಳ ಬಾಲಮಂದಿರಗಳಿವೆ. ಮಕ್ಕಳನ್ನು ದತ್ತು ರೂಪದಲ್ಲಿ ಪಡೆಯಲು ಪೋಷಕರು ಸಿದ್ಧರಿದ್ದಾರೆ. ಆದರೆ, ಆನ್‌ಲೈನ್‌ನಲ್ಲೇ ಮಾಹಿತಿ ಸಂಗ್ರಹಣೆ, ದಾಖಲೆಪತ್ರಗಳ ವಿವರಣೆ, ಸಲ್ಲಿಕೆ ಸೇರಿ ಹಲವು ನಿಯಮಗಳಿವೆ. ಎಲ್ಲವನ್ನೂ ಸಕಾಲಕ್ಕೆ ಒದಗಿಸಲು ಪೋಷಕರಿಗೆ ಕಷ್ಟವಾಗುತ್ತಿದೆ.
ರಾಜ್ಯದ ಬಾಲಮಂದಿರಗಳಲ್ಲಿ 14,013 ಮಕ್ಕಳಿದ್ದಾರೆ. 2023–24ರಲ್ಲಿ 284 ಮತ್ತು 2024–25ರಲ್ಲಿ 306 ಮಕ್ಕಳ ದತ್ತು ಪ್ರಕ್ರಿಯೆ ನಡೆದಿದ್ದು, ಅವರಲ್ಲಿ 33 ಮಕ್ಕಳನ್ನು ವಿದೇಶದವರು ದತ್ತು ಪಡೆದಿದ್ದಾರೆ. ಸದ್ಯ ಪೋಷಕರನ್ನು ಹೊಂದಿರದ ಸಾಮಾನ್ಯ ಆರೋಗ್ಯದ 26 ಮಕ್ಕಳು ಹಾಗೂ ವಿಶೇಷ ಅಗತ್ಯವುಳ್ಳ 63 ಮಕ್ಕಳು ದತ್ತು ಪಡೆಯಲು ಅರ್ಹರಿದ್ದಾರೆ. ದತ್ತು ಮಕ್ಕಳಿಗಾಗಿ 2,187 ಅರ್ಜಿಗಳು ಸಲ್ಲಿಕೆಯಾಗಿವೆ.
‘ಅನೈತಿಕ ಸಂಬಂಧ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಜನಿಸುವ ಮಕ್ಕಳು ಅನಾಥವಾಗುತ್ತಿವೆ. ಕಸದ ತೊಟ್ಟಿ, ಬಸ್ ನಿಲ್ದಾಣ, ಮಾರುಕಟ್ಟೆ, ದೇವಸ್ಥಾನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಕಿ ಹೋಗಿರುತ್ತಾರೆ. ಅಂತಹ ಮಕ್ಕಳನ್ನು ರಕ್ಷಿಸಿ ಆರೈಕೆ ಮಾಡುತ್ತೇವೆ. ಅಲ್ಲದೆ, ಪೋಷಕರ ಸಾವಿನ ಬಳಿಕ ಅನಾಥರಾಗುವ ಮಕ್ಕಳನ್ನು ಸಾರ್ವಜನಿಕರು ಮಕ್ಕಳ ರಕ್ಷಣಾ ಘಟಕಕ್ಕೆ ತಂದು ಬಿಡುವ ಘಟನೆಗಳು ನಡೆದಿವೆ. ಅಂತಹ ಮಕ್ಕಳ ಪಾಲನೆ, ಪೋಷಣೆಗೆ ದತ್ತು ನೀಡಲಾಗುತ್ತಿದೆ’ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ಅನಾಥ, ಪರಿತ್ಯಕ್ತ ಮಕ್ಕಳನ್ನು ರಕ್ಷಿಸಿ ಮಕ್ಕಳ ರಕ್ಷಣಾ ಘಟಕದಲ್ಲಿ ಆರೈಕೆ ಮಾಡಲಾಗುತ್ತದೆ. 2 ವರ್ಷದೊಳಗಿನ ಮಗು ಇದ್ದರೆ ವಾರಸುದಾರರು ಬಂದು ಒಯ್ಯಲು 60 ದಿನ ಮತ್ತು 2 ವರ್ಷದಿಂದ 18 ವರ್ಷದೊಳಗಿದ್ದರೆ 120 ದಿನ ಕಾಯುತ್ತೇವೆ. ವಾರಸುದಾರರು ಬಾರದಿದ್ದರೆ ಅಂತಹ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಬಳಿಕ ದತ್ತು ನೀಡಲು ಅರ್ಹ ಎಂದು ಪರಿಗಣಿಸಲಾಗುತ್ತದೆ’ ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ತಿಳಿಸಿದರು.
ದತ್ತು ಪಡೆಯುವ ಅರ್ಜಿದಾರರ ಜ್ಯೇಷ್ಠತೆ, ಆರೋಗ್ಯ, ಅಪರಾಧ ಹಿನ್ನೆಲೆ, ಉದ್ಯೋಗ, ಆದಾಯ, ವಯಸ್ಸು ಪರಿಶೀಲಿಸಲಾಗುತ್ತದೆ.
‘ಪತಿ, ಪತ್ನಿ ಇಬ್ಬರ ವಯಸ್ಸು 85ರೊಳಗೆ ಇದ್ದರೆ 2 ವರ್ಷದೊಳಗಿನ ಮಕ್ಕಳನ್ನು ದತ್ತು ನೀಡಲಾಗುತ್ತದೆ. ದಂಪತಿಯ ಒಟ್ಟು ವಯಸ್ಸು 85–90 ಇದ್ದರೆ 2ರಿಂದ 4 ವರ್ಷದೊಳಗಿನ ಮಕ್ಕಳನ್ನು ದತ್ತು ನೀಡಬೇಕು ಎಂಬ ನಿಯಮ ಇದೆ’ ಎಂದು ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ
ತಿಳಿಸಿದರು.
ದತ್ತು ಪ್ರಕ್ರಿಯೆ ಕುರಿತ ಹೆಚ್ಚಿನ ಮಾಹಿತಿಗೆ ವೆಬ್ ವಿಳಾಸ:
https://missionvatsalya.wcd.gov.in ವೀಕ್ಷಿಸಬಹುದು.
ಆನ್‌ಲೈನ್‌ನಲ್ಲಿ ಮೊದಲು ಅರ್ಜಿ ಸಲ್ಲಿಸಿದವರನ್ನು ದತ್ತು ನೀಡಲು ಪರಿಗಣಿಸಲಾಗುವುದು. ಮಗುವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು.–ಅರುಂಧತಿ, ಕಾರ್ಯಕ್ರಮ ವ್ಯವಸ್ಥಾಪಕಿ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ
ದತ್ತು ನೀಡಲು ಕಾನೂನು ಪ್ರಕ್ರಿಯೆಗಳಿವೆ. ನಿಯಮಬಾಹಿರವಾಗಿ ಮಗು ಮಾರಿದರೆ, ಜನ ಸಾಮಾನ್ಯರಿಗೆ 5 ವರ್ಷ ಮತ್ತು ಅಧಿಕಾರಿಗಳು, ಸಿಬ್ಬಂದಿಗೆ 8 ವರ್ಷ ಜೈಲು ಶಿಕ್ಷೆವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.–ಶಶಿಧರ ಕೋಸಂಬೆ, ಸದಸ್ಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.