ADVERTISEMENT

ಕ್ರಿಸ್‌ಮಸ್‌: ಶಾಂತಿದೂತನ ಆರಾಧನೆಗೆ ಭರದ ಸಿದ್ಧತೆ

ಕ್ರಿಸ್‌ಮಸ್‌; ಚರ್ಚ್‌ಗಳಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ, ಕ್ರೈಸ್ತರ ಮನೆಗಳಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:21 IST
Last Updated 25 ಡಿಸೆಂಬರ್ 2025, 3:21 IST
ಹುಬ್ಬಳ್ಳಿಯ ಮೈಯರ್ ಮೆಮೋರಿಯಲ್ ಚರ್ಚ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯೇಸು ಜೀವನ ಕುರಿತು ಮಕ್ಕಳು ನೃತ್ಯ ಮಾಡಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಮೈಯರ್ ಮೆಮೋರಿಯಲ್ ಚರ್ಚ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯೇಸು ಜೀವನ ಕುರಿತು ಮಕ್ಕಳು ನೃತ್ಯ ಮಾಡಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಯೇಸುವಿನ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಕ್ರಿಸ್‌ಮಸ್‌ಗೆ ಕ್ಷಣಗಣನೆ ಆರಂಭವಾಗಿದೆ. ನಗರದೆಲ್ಲೆಡೆ ಹಬ್ಬದ ಆಚರಣೆಗೆ ಭರದ ಸಿದ್ಧತೆಗಳು ನಡೆದಿವೆ.   

ಕಾರವಾರ ರಸ್ತೆಯ ಮೈಯರ್ ಮೆಮೋರಿಯಲ್ ಚರ್ಚ್‌, ಕೇಶ್ವಾಪುರದ ಸೇಂಟ್‌ ಜೋಸೆಫ್‌ ಚರ್ಚ್‌, ಶಾಂತಿನಗರದ ಇನ್‌ಫೆಂಟ್‌ ಜೀಸಸ್‌ ಚರ್ಚ್‌, ಗದಗ ರಸ್ತೆಯ ಡಿಡಿಎಂ ಚರ್ಚ್‌, ಉಣಕಲ್‌ನ ಮುಲ್ಲರ್ ಮೆಮೋರಿಯಲ್ ಚರ್ಚ್‌, ಘಂಟಿಕೇರಿಯ ಹೋಲಿ ನೇಮ್ ಕೆಥೆಡ್ರಲ್ ಚರ್ಚ್‌ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಎಲ್ಲ ಚರ್ಚ್‌ಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಚರ್ಚ್‌ಗಳ ಆವರಣದಲ್ಲಿ ನಿರ್ಮಿಸಿರುವ ಗೋದಲಿಗಳು, ಕ್ರಿಸ್‌ಮಸ್‌ ಟ್ರೀಗಳು ಗಮನ ಸೆಳೆಯುತ್ತಿವೆ.  

ADVERTISEMENT

ಕ್ರೈಸ್ತ ಸಮುದಾಯದವರು ತಮ್ಮ ಮನೆಗಳ ಎದುರು ಸ್ಟಾರ್‌ಗಳನ್ನು ತೂಗು ಹಾಕಿದ್ದಾರೆ. ನಗುಮೊಗದ, ಡೊಳ್ಳು ಹೊಟ್ಟೆಯ ಸಾಂಟಾಕ್ಲಾಸ್‌ ವೇಷದಾರಿಗಳು ಮನೆಮನೆಗೂ ತೆರಳಿ ಮಕ್ಕಳನ್ನು, ಹಿರಿಯರನ್ನು ಕ್ರಿಸ್‌ಮಸ್‌ಗೆ ಆಹ್ವಾನಿಸಿದರು.

ಕಾರವಾರ ರಸ್ತೆಯ ಮೈಯರ್ ಮೆಮೋರಿಯಲ್‌ ಚರ್ಚ್‌ನಲ್ಲಿ ಬುಧವಾರ ಸಂಜೆ ಮಕ್ಕಳ ಕ್ರಿಸ್‌ಮಸ್‌ ನಡೆಯಿತು. ಮಕ್ಕಳು ಸಾಂಟಾಕ್ಲಾಸ್ ಮೇಷಭೂಷಣದಲ್ಲಿ ಕಂಗೊಳಿಸಿದರು. ಯೇಸುವಿನ ಜೀವನ ಕುರಿತು ನೃತ್ಯರೂಪಕ ಪ್ರದರ್ಶಿಸಿದರು. ಕ್ಯಾರಲ್ ಗೀತೆಗಳ ಗಾಯನ ಗಮನ ಸೆಳೆಯಿತು. ಕೇಕ್‌ ವಿತರಣೆ ನಡೆಯಿತು.

ಹಬ್ಬದ ಸಡಗರ ಒಂದೆಡೆಯಾದರೆ, ಇನ್ನೊಂದೆಡೆ ಕ್ರೈಸ್ತರ ಮನೆಗಳಲ್ಲಿ ಹಬ್ಬಕ್ಕಾಗಿ ಸಿದ್ಧಪಡಿಸುವ ಸಿಹಿತಿಂಡಿಗಳು, ಕೇಕ್‌ಗಳು ಬಾಯಲ್ಲಿ ನೀರೂರಿಸುತ್ತಿವೆ.  

‘ಹಬ್ಬದ ಪ್ರಯುಕ್ತ ಪ್ರತಿ ವರ್ಷ ವಿಶೇಷ ಸಿಹಿ ತಿನಿಸು ತಯಾರಿಸುವುದು ವಾಡಿಕೆ. ಈ ಬಾರಿ ರೋಜ್‌ ಕುಕ್ಸ್, ಡೋನಸ್‌, ಕರ್ಜಿಕಾಯಿ, ಲಾಡು, ಚಕ್ಕುಲಿ ತಯಾರಿಸಲಾಗಿದೆ. ಅಲ್ಲದೆ, ಕಪ್ ಕೇಕ್, ಪ್ಲಂಬ್ ಕೇಕ್, ಚಾಕೊಲೇಟ್ ಕೇಕ್‌ಗಳನ್ನು ಸಿದ್ಧಪಡಿಸಲಾಗಿದೆ’ ಎಂದು ಶಾಂತಿನಗರದ ನಿವಾಸಿಯೊಬ್ಬರು ಹೇಳಿದರು.

ಹಬ್ಬಕ್ಕಾಗಿ ಮನೆಗೆ ಅತಿಥಿಗಳಉನ್ನು ಆಹ್ವಾನಿಸುತ್ತೇವೆ. ಅವರಿಗೆ ವಿಶೆಷ ತಿನಿಸು ನೀಡುವ ಜತೆಗೆ ಅಕ್ಕಪಕ್ಕದ ಮನೆಗಳಿಗೂ ಕೇಕ್‌ಗಳನ್ನು ಹಂಚುತ್ತೇವೆ ಎಂದರು.

ಖರೀದಿ ಜೋರು: ನಗರದ ಗದಗ ರಸ್ತೆ, ದುರ್ಗದಬೈಲ್, ಕೇಶ್ವಾಪುರ ರಸ್ತೆ ಸೇರಿದಂತೆ  ಚರ್ಚ್‌ಗಳ ರಸ್ತೆ ಬದಿಯಲ್ಲಿ ಆಲಂಕಾರಿಕ ಕ್ರಿಸ್‌ಮಸ್‌ ಟ್ರೀ, ವಿವಿಧ ವಿನ್ಯಾಸದ ಆಕಾಶಬುಟ್ಟಿ, ಬಲೂನ್, ಬಗೆ ಬಗೆಯ ವಿದ್ಯುತ್‌ ದೀಪ,  ಸಾಂಟಾಕ್ಲಾಸ್ ಟೋಪಿ ಹಾಗೂ ಉಡುಪುಗಳ ಮಾರಾಟ ಜೋರಾಗಿತ್ತು.

‘ಕ್ರಿಸ್‌ಮಸ್ ಟ್ರೀ’ ಸದಾ ಹಸಿರಾಗಿರುತ್ತದೆ. ಇದು ದೇವರು ಸರ್ವಾಂತರ್ಯಾಮಿ ಹಾಗೂ ಸದಾ ನಮ್ಮ ಜತೆಗೆ ಇರುತ್ತಾನೆ ಎಂಬುದನ್ನು ಹೇಳುತ್ತದೆ. ಹೀಗಾಗಿ ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀಗಳನ್ನು ನಿರ್ಮಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ’ ಎಂದು ಕೇಶ್ವಾಪುರದ ಸೇಂಟ್ ಜಾನ್‌ ಚರ್ಚ್‌ನ ಸ್ಟೀಫನ್ ಹೇಳಿದರು.

ಕ್ರಿಸ್‌ಮಸ್ ಅಂಗವಾಗಿ ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್‌ ಜೋಸೆಫ್‌ ಕಥೋಲಿಕ್‌ ಚರ್ಚ್ ಅನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು 

ಕ್ರಿಸ್‌ಮಸ್‌; ದಿನವಿಡೀ ಕಾರ್ಯಕ್ರಮ

ಕ್ರಿಸ್‌ಮಸ್‌ ಕ್ರೈಸ್ತರ ಪವಿತ್ರ ಹಬ್ಬ. ಗುರುವಾರ ಬೆಳಿಗ್ಗೆ 6 ಗಂಟೆಯಿಂದಲೇ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಯೇಸುವಿನ ಜನನ ಕುರಿತು ಧರ್ಮಗುರುಗಳಿಂದ ಸಂದೇಶ ಕೇಕ್ ವಿತರಣೆ ಹಬ್ಬದ ಶುಭಾಶಯ ವಿನಿಮಯ ಸೇರಿದಂತೆ ರಾತ್ರಿ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ  ಸತ್ಯಬಾಬು ಸ್ಯಾಮ್ಯುಯಲ್‌ ಮೈಯರ್ ಮೆಮೋರಿಯಲ್ ಚರ್ಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.