
ಹುಬ್ಬಳ್ಳಿ: ಮೋಡ ಕವಿದ ಮತ್ತು ಚಳಿ ವಾತಾವರಣದಿಂದ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಅನಾರೋಗ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಒಂದು ವಾರದಿಂದ ಶೀತಗಾಳಿ ಹೆಚ್ಚಾಗಿದೆ. ಕೆಎಂಸಿಆರ್‌ಐ ಮತ್ತು ಚಿಟಗುಪ್ಪಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೀತ, ಕೆಮ್ಮು, ಜ್ವರ, ನೆಗಡಿ, ತಲೆನೋವು ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ.
ಮಕ್ಕಳು, ವೃದ್ಧರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ನಾಲ್ಕು ವರ್ಷದೊಳಗಿನ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ಆತಂಕಗೊಂಡಿರುವ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ.
ಚಳಿಯಿಂದ ರಕ್ಷಿಸಿಕೊಳ್ಳಲು ಜನತೆ ಸ್ಟೆಟರ್, ಮಂಕಿ ಕ್ಯಾಪ್, ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ನಸುಕಿನ ವೇಳೆ, ಸಂಜೆ ವಾಯುವಿಹಾರಕ್ಕೆ ತೆರಳುವವರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಅತಿಯಾದ ಚಳಿಯಿಂದಾಗಿ ಹೃದಯ ಸಂಬಂಧಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಯುವಿಹಾರಕ್ಕೆ ತೆರಳುವವರು ಆರೋಗ್ಯದ ಕಾಳಜಿ ವಹಿಸಬೇಕಾಗಿದೆ.
ಈ ಅವಧಿಯಲ್ಲಿ ಜನರು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಆರೋಗ್ಯದಿಂದಿರಲು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.
ಬೆಚ್ಚಗಿರುವ ಉಡುಪು ಧರಿಸುವುದು, ಬಿಸಿಯಾದ ಆರೋಗ್ಯಕರ ಆಹಾರ ಸೇವಿಸಬೇಕು ಮತ್ತು ಚಳಿ ಇರುವ ಸಂದರ್ಭದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಅತ್ಯಗತ್ಯ. ಡಿಸೆಂಬರ್, ಜನವರಿಯಲ್ಲಿ ಶೀತಗಾಳಿ ಹೆಚ್ಚುವ ಸಾಧ್ಯತೆಯಿದ್ದು, ಅನಾರೋಗ್ಯ ಉಂಟಾದಲ್ಲಿ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳುತ್ತಾರೆ.
ಮಕ್ಕಳಲ್ಲಿ ಆರೋಗ್ಯ ಸಮಸ್ಯೆ: ನಗರದ ಕಿಮ್ಸ್ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ಬರುತ್ತಿರುವಂತಹ ಮಕ್ಕಳಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮು ಲಕ್ಷಣಗಳಿರುವುದು ಕಂಡುಬರುತ್ತಿದೆ. ಸೊಳ್ಳೆಯಿಂದ ಹರಡುವಂತಹ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ವೈದ್ಯರು.
‘ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ವಿಪರೀತ ಚಳಿ ಬೀಳುತ್ತಿದ್ದು, ನನ್ನ ಮಗುವಿಗೆ ನೆಗಡಿ, ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರ ಬಳಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿದ್ದೇವೆ’ ಎಂದು ವಿದ್ಯಾನಗರದ ನಿವಾಸಿ ಮಂಜುನಾಥ ಬಡಿಗೇರ ತಿಳಿಸಿದರು.
ಕಿಮ್ಸ್‌ಗೆ ಬರುವ ರೋಗಿಗಳ ಸಂಖ್ಯೆ ನಿತ್ಯ 2 ಸಾವಿರಕ್ಕಿಂತ ಹೆಚ್ಚಿರುತ್ತದೆ. ಚಳಿಗಾಲ ಆಗಿದ್ದರಿಂದ ಜನರು ಆರೋಗ್ಯದ ಕಾಳಜಿ ವಹಿಸಬೇಕುಡಾ.ಈಶ್ವರ ಹೊಸಮನಿ ನಿರ್ದೇಶಕ ಕೆಎಂಸಿ–ಆರ್‌ಐ
ಚಳಿಗಾಲದ ಮುನ್ನೆಚರಿಕೆ ಕ್ರಮ
ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆ ಉಡುಪು ಧರಿಸಬೇಕು ಚಳಿ ಇರುವ ಸಂದರ್ಭದಲ್ಲಿ ಹೊರಗಡೆ ತೆರಳಬಾರದು ಸಮತೋಲಿತ ಆಹಾರ ಸೇವಿಸಬೇಕು ನಿದ್ರೆಗೆ ಆದ್ಯತೆ ನೀಡಿ ನಿತ್ಯ ವ್ಯಾಯಾಮ ಮಾಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.