
ಹುಬ್ಬಳ್ಳಿ: ‘ನಗರದ ಹೊರವಲಯದ ಕುಸಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜು ಬಳಿಯ ಬೃಹತ್ ಮೈದಾನದಲ್ಲಿ ಫೆ.7 ಮತ್ತು 8ರಂದು ಸಂಸದ ಸಾಂಸ್ಕೃತಿಕ, ಕ್ರೀಡಾ ಮಹೋತ್ಸವ ಹಾಗೂ ಅಂತರರಾಷ್ಟ್ರೀಯಮಟ್ಟದ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಉತ್ಸವದ ಅಂಗವಾಗಿ ಕಾರ್ಯಕ್ರಮದ ವೇದಿಕೆ ಬಳಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ನಡೆಯುವ 7ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಫೆ.7ರಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಎಸ್.ವಿ.ಸಂಕನೂರು ಉತ್ಸವಕ್ಕೆ ಚಾಲನೆ ನೀಡುವರು’ ಎಂದು ತಿಳಿಸಿದರು.
’ಫೆ.7ರಂದು ಬೆಳಿಗ್ಗೆ 10.30ಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 11.30ಕ್ಕೆ ಸಂಸದ ಕ್ರೀಡಾ ಮಹೋತ್ಸವದ ಲೋಕಸಭಾ ಮಟ್ಟದ ದೇಶಿ ಕ್ರೀಡೆಗಳು ನಡೆಯಲಿವೆ. ಶಾಸಕ ಎಂ.ಆರ್.ಪಾಟೀಲ ಚಾಲನೆ ನೀಡುವರು. ಮಹಿಳಾ ಕ್ರೀಡೆಗಳಿಗೆ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಚಾಲನೆ ನೀಡುವರು’ ಎಂದರು.
‘ಇದೇ ವೇಳೆ ಸಮೂಹ ನೃತ್ಯ, ಗಾಳಿಪಟ ತಯಾರಿಕೆ, ಸಣ್ಣಕಥೆ ಹೇಳುವುದು, ಫ್ರೀ ಹ್ಯಾಂಡ್ ಮೆಹಂದಿ, ಮುಖವರ್ಣ ಕಲೆ, ಲಗೋರಿ, ಹಗ್ಗ ಜಗ್ಗಾಟ, ಯೋಗ, ಮಲ್ಲಕಂಬ, ಚಿನ್ನಿ-ದಾಂಡು ಹಾಗೂ ಗೋಣಿಚೀಲ ಜಿಗಿತ ಸೇರಿದಂತೆ ವಿವಿಧ ದೇಶಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ’ ಎಂದು ಹೇಳಿದರು.
‘ಎರಡು ದಿನ ನಡೆಯುವ ಗಾಳಿಪಟ ಉತ್ಸವದಲ್ಲಿ ಕರ್ನಾಟಕ, ಗುಜರಾತ್, ಗೋವಾ ಸೇರಿದಂತೆ ದೇಶದ ವಿವಿಧೆಡೆಯಿಂದ ಹಾಗೂ ವಿದೇಶಗಳಿಂದಲೂ ಗಾಳಿಪಟ ಆಟಗಾರರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಸಂಗೀತ ಸಂಭ್ರಮ: ‘ಫೆ.7ರಂದು ಸಂಜೆ ಗಾಯಕ ಜಸ್ಕರನ್ ಸಿಂಗ್, ದಿವ್ಯಾ ರಾಮಚಂದ್ರ ತಂಡ ಹಾಗೂ ಫೆ.8ರಂದು ಸಂಜೆ ಬಾಲಿವುಡ್ ಗಾಯಕ ಸೋನು ನಿಗಮ್ ತಂಡ ಹಾಗೂ ನಗರದ ಗಾಯಕಿ ಮಹನ್ಯ ಪಾಟೀಲ ತಂಡದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ್ ಚವ್ಹಾಣ್, ಶಾಸಕ ಎಂ.ಆರ್.ಪಾಟೀಲ, ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ, ಪಾಲಿಕೆ ಸದಸ್ಯ ಶಿವಕುಮಾರ ಮೆಣಸಿನಕಾಯಿ ಹಾಗೂ ಪ್ರಮುಖರು ಹಾಜರಿದ್ದರು.
ಎರಡು ದಿನ ನಡೆಯುವ ಸಾಂಸ್ಕೃತಿಕ ದೇಶಿ ಕ್ರೀಡೆ ಅಂತರರಾಷ್ಟ್ರೀಯಮಟ್ಟದ ಗಾಳಿಪಟ ಉತ್ಸವದಲ್ಲಿ 20 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನೀರಿಕ್ಷೆ ಇದೆ.ಮಹೇಶ ಟೆಂಗಿನಕಾಯಿ ಶಾಸಕ
ಆಕರ್ಷಕ ಟ್ರೋಪಿ ನಗದು ಬಹುಮಾನ
‘ಫೆ.7 8ರಂದು ನಡೆಯುವ ದೇಶಿ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಆಕರ್ಷಕ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ₹10 ಸಾವಿರ ನಗದು ದ್ವಿತೀಯ ಬಹುಮಾನ ₹7500 ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನ ತಲಾ ₹5 ಸಾವಿರ ನೀಡಲಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.