ADVERTISEMENT

ಹುಬ್ಬಳ್ಳಿ | ಸೈಬರ್‌ ಕ್ರೈಂ: ಒಂದೇ ವರ್ಷ ₹32.70 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 6:47 IST
Last Updated 23 ಡಿಸೆಂಬರ್ 2024, 6:47 IST
<div class="paragraphs"><p>ವಂಚನೆ (ಪ್ರಾತಿನಿಧಿಕ ಚಿತ್ರ)</p></div>

ವಂಚನೆ (ಪ್ರಾತಿನಿಧಿಕ ಚಿತ್ರ)

   

ಹುಬ್ಬಳ್ಳಿ: ಪ್ರಸ್ತುತ ವರ್ಷ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಘಟಕ ಮತ್ತು ಧಾರವಾಡ ಜಿಲ್ಲೆಯಲ್ಲಿ ಒಟ್ಟು 285 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ ₹32.70 ಕೋಟಿ ವಂಚಕರ ಪಾಲಾಗಿದೆ.

ಹುಬ್ಬಳ್ಳಿ–ಧಾರವಾಡ ಮಹಾನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 229 ಪ್ರಕರಣಗಳು ದಾಖಲಾಗಿ, ₹30.76 ಕೋಟಿ ವಂಚನೆಯಾಗಿದೆ. ಧಾರವಾಡ ಜಿಲ್ಲಾ ವಿವಿಧ ಪೊಲೀಸ್‌ ಠಾಣೆಗಳಲ್ಲಿ 61 ಪ್ರಕರಣಗಳಿಗೆ ಸಂಬಂಧಿಸಿ ₹1.93 ಕೋಟಿ ವಂಚನೆಯಾಗಿವೆ. ವಂಚನೆಯಾದ ಒಟ್ಟು ಮೊತ್ತದಲ್ಲಿ ₹1.31 ಕೋಟಿಯಷ್ಟು, ಅಂದರೆ ಶೇ 4ರಷ್ಟು ಹಣ ಮಾತ್ರ ತಡೆ ಹಿಡಿಯಲು (ಫ್ರೀಜ್) ಸಾಧ್ಯವಾಗಿದೆ.

ADVERTISEMENT

2023ರಲ್ಲಿ ಹು–ಧಾ ಕಮಿಷನರೇಟ್‌ ಘಟಕದಲ್ಲಿ 423 ಪ್ರಕರಣಗಳು ದಾಖಲಾಗಿ ₹10.26 ಕೋಟಿ ವಂಚನೆಯಾಗಿತ್ತು. ಅದರಲ್ಲಿ ₹6.42 ಕೋಟಿ ಫ್ರೀಜ್ ಮಾಡಲಾಗಿದೆ. ಈ ಮೊತ್ತದಲ್ಲಿ ₹4.59 ಕೋಟಿಯಷ್ಟನ್ನೇ ಹಣ ಕಳೆದುಕೊಂಡವರಿಗೆ ಮರಳಿಸಲಾಗಿದೆ. ಉಳಿದ ಮೊತ್ತ ಬ್ಯಾಂಕ್‌ನಿಂದ ಪಡೆಯಲು ಕೋರ್ಟ್‌ ಮೂಲಕ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.

ಪ್ರಸ್ತುತ ವರ್ಷ ಡಿಜಿಟಲ್‌ ಅರೆಸ್ಟ್‌ ಹಾಗೂ ಆನ್‌ಲೈನ್‌ ಹೂಡಿಕೆಯಲ್ಲಿಯೇ ಅಂದಾಜು ₹8 ಕೋಟಿಯಿಂದ ₹10 ಕೋಟಿವರೆಗೂ ಕಳೆದುಕೊಂಡಿದ್ದಾರೆ. ಉಳಿದಂತೆ ಬಿಟ್‌ ಕಾಯಿನ್‌ ಕಂಪನಿಯಲ್ಲಿ ಹಣ ಹೂಡಿಕೆ, ಒಟಿಪಿ, ಡೆಬಿಟ್‌–ಕ್ರೆಡಿಟ್‌ ಕಾರ್ಡ್‌ ಸ್ಕಿಮ್ಮಿಂಗ್‌, ಲಿಂಕ್‌ ಕಳುಹಿಸಿ ವಂಚನೆ, ಉಡುಗೊರೆ ಆಮಿಷ, ಎನಿಡೆಸ್ಕ್‌, ಟೀಮ್‌ ವ್ಯೂವರ್‌ ಸಪೋರ್ಟ್‌, ಆನ್‌ಲೈನ್‌ ಲೋನ್‌ ಸೇರಿ ವಿವಿಧ ಸ್ವರೂಪಗಳಲ್ಲಿ ವಂಚಕರು ಹಣ ಸುಲಿಗೆ ಮಾಡಿದ್ದಾರೆ. ಎಐ ಎಪಿಕೆ ಕುತಂತ್ರಾಂಶದ ಫೈಲ್ ಮೂಲಕ ವಾಟ್ಸ್‌ಆ್ಯಪ್ ಗ್ರೂಪ್‌ ಹ್ಯಾಕ್ ಮಾಡಿ ವೈಯಕ್ತಿಕ ಹಾಗೂ ಬ್ಯಾಂಕ್ ಮಾಹಿತಿ ಕಳವು ಮಾಡಿ, ಕೋಟ್ಯಾಂತರ ರೂಪಾಯಿ ವರ್ಗಾಯಿಸಿಕೊಂಡ ಪ್ರಕರಣಗಳು ಸಹ ದಾಖಲಾಗಿವೆ.

‘2024ರಲ್ಲಿಯೇ ರಾಜ್ಯದಾದ್ಯಂತ ₹2047 ಕೋಟಿ ವಚನೆಯಾಗಿದ್ದು, ಕೇವಲ ₹43.90 ಕೋಟಿಯಷ್ಟೇ ಫ್ರೀಜ್ ಮಾಡಲಾಗಿದೆ. ಬೆಂಗಳೂರು ನಗರವೊಂದರಲ್ಲಿಯೇ ₹1,568 ಕೋಟಿ ವಂಚನೆಯಾಗಿದೆ. ಡಿಜಿಟಲ್‌ ಅರೆಸ್ಟ್‌ ವಂಚನೆ ಪ್ರಕರಣ ಹೆಚ್ಚುತ್ತಿದ್ದಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ದೇಶದಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ, ಶಾಲಾ–ಕಾಲೇಜುಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸೈಬರ್‌ ವಂಚಕರ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ. ಆದರೂ, ನಗರ ಪ್ರದೇಶದ ಸುಶಿಕ್ಷತರು ಸುಲಭವಾಗಿ ವಂಚಕರ ಜಾಲಕ್ಕೆ ಸಿಲುಕುತ್ತಿದ್ದಾರೆ’ ಎಂದು ಪೊಲೀಸರು ಬೇಸರ ವ್ಯಕ್ತಪಡಿಸುತ್ತಾರೆ.

'ಉದ್ಯಮಿ, ವೈದ್ಯ, ಎಂಜಿನಿಯರ್‌, ಪ್ರಾಧ್ಯಾಪಕ, ಪೊಲೀಸ್‌, ಪತ್ರಕರ್ತ, ಬ್ಯಾಂಕ್‌ ಅಧಿಕಾರಿ, ವ್ಯಾಪಾರಸ್ಥರು ಸೇರಿ ಬೇರೆ ಬೇರೆ ಕ್ಷೇತ್ರದವರು ವಂಚಕರ ಜಾಲದಲ್ಲಿ ಸಿಲುಕಿ ಮೋಸಕ್ಕೆ ಒಳಗಾಗಿದ್ದಾರೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್‌, ಎಕ್ಸ್‌ ಖಾತೆಗಳಿಂದ ವೈಯಕ್ತಿಕ ಮಾಹಿತಿ ಕದಿಯುವ ವಂಚಕರು, ತಮ್ಮದೇ ಸಂಪರ್ಕ ಜಾಲದ ಮೂಲಕ ವಿವಿಧ ರೀತಿಯಲ್ಲಿ ಹಣ ವರ್ಗಾಯಿಸಿಕೊಳ್ಳುತ್ತಾರೆ. ವಾಟ್ಸ್‌ಆ್ಯಪ್‌ ಹಾಗೂ ಮೊಬೈಲ್‌ ನಂಬರ್‌ಗೆ ಕಳುಹಿಸುವ ಲಿಂಕ್‌ ಮೂಲಕವೂ, ಬ್ಯಾಂಕ್‌ ಮಾಹಿತಿ  ಪಡೆದು ತಾವೇ ಹಣ ವರ್ಗಾಯಿಸಿಕೊಳ್ಳುತ್ತಾರೆ. ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ, ವಂಚಕರು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ’ ಎಂದು ಸೈಬರ್‌ ಕ್ರೈಂ ಇನ್‌ಸ್ಪೆಕ್ಟರ್‌ ಬಿ.ಕೆ. ಪಾಟೀಲ ಹೇಳುತ್ತಾರೆ.

ತನಿಖೆ ವಿಳಂಬ ಯಾಕೆ?
ದೂರುದಾರರು 5–10 ಖಾತೆಗಳಿಂದ ವಂಚಕರಿಗೆ ಹಣ ವರ್ಗಾವಣೆ ಮಾಡುವುದರಿಂದ ಬ್ಯಾಂಕ್‌ನಿಂದ ಮಾಹಿತಿ ಪಡೆಯಲು ವಿಳಂಬವಾಗುತ್ತದೆ. ಆರೋಪಿಗಳು ಒಂದನೇ ಹಂತದಿಂದ ಎರಡನೇ ಹಂತಕ್ಕೆ ಹಣ ವರ್ಗಾವಣೆ ಮಾಡಿ, ಅದನ್ನು ಸೆಲ್ಫ್‌ಚೆಕ್‌ ಅಥವಾ ಎಟಿಎಂ ಕಾರ್ಡ್‌ ಮೂಲಕ ಪಡೆಯುವುದರಿಂದ ಖಾತೆಯಲ್ಲಿ ಹಣ ಕಡಿಮೆಯಾಗಿರುತ್ತದೆ. ಕೆಲವು ಪ್ರಕಣಗಳಲ್ಲಿ ಆರೋಪಿಗಳು ಅಬುದಾಬಿ ಮತ್ತು ಮಧ್ಯ ಏಷ್ಯಾಗಳಲ್ಲಿನ ಎಟಿಎಂ ಕೇಂದ್ರಗಳಿಂದ ಹಣ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ವಂಚಕರು ವಾಟ್ಸ್‌ಆ್ಯಪ್‌, ಟೆಲಿಗ್ರಾಮ್‌ನಿಂದ ಕರೆ ಮಾಡುತ್ತಾರೆ. ತನಿಖೆ ಕೈಗೊಂಡಾಗ ಅವು ಬಿಹಾರ, ಮಧ್ಯಪ್ರದೇಶ ಹಾಗೂ ಕೆಲವು ಕರೆಗಳು ವಿದೇಶಗಳಿಂದ ಬಂದಿರುವುದು ಗಮನಕ್ಕೆ ಬಂದಿವೆ. ನಕಲಿ ಆ್ಯಪ್‌, ಸಿಮ್‌ ಕಾರ್ಡ್‌, ವೆಬ್‌ಸೈಟ್‌ ಬಳಕೆ ಮಾಡುವುದರಿಂದ ಪತ್ತೆ ಕಾರ್ಯ ವಿಳಂಬವಾಗುತ್ತಿವೆ’ ಎನ್ನುವುದು ಪೊಲೀಸರ ಅಭಿಪ್ರಾಯ.
ಸೈಬರ್‌ ವಂಚನೆಯಿಂದ ಪಾರಾಗಲು ಜಾಗೃತ ಆಗುವುದೊಂದೇ ಪರಿಹಾರ. ವಂಚನೆ ಯತ್ನ ಪ್ರಕರಣಗಳು ನಡೆದಾಗ 1930ಗೆ ಕರೆ ಮಾಡಬೇಕು. www.cybercrime.gov.in ಸಂಪರ್ಕಿಸಿ
ಬಿ.ಕೆ.ಪಾಟೀಲ ಇನ್‌ಸ್ಪೆಕ್ಟರ್‌, ಸೈಬರ್‌ ಕ್ರೈಂ ಠಾಣೆ, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.