ADVERTISEMENT

ಮುಖ್ಯಮಂತ್ರಿಯಾಗಲು ಮಲ್ಲಿಕಾರ್ಜುನ ಖರ್ಗೆ ಸಮರ್ಥರು: ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 16 ಮೇ 2019, 9:21 IST
Last Updated 16 ಮೇ 2019, 9:21 IST
ಕೆ.ಎಚ್‌. ಮುನಿಯಪ್ಪ
ಕೆ.ಎಚ್‌. ಮುನಿಯಪ್ಪ    

ಹುಬ್ಬಳ್ಳಿ: ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು. ದಲಿತರೊಬ್ಬರು ಮುಖ್ಯಮಂತ್ರಿ ಆಗದೇ ಇರಲು ಹಲವಾರು ಕಾರಣಗಳಿವೆ. ಅವುಗಳನ್ನು ಉಪಚುನಾವಣೆಯ ಬಳಿಕ ಬಹಿರಂಗಪಡಿಸುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿಯಾಗದ ಕಾರಣ ಖರ್ಗೆ ಅವರಿಗೆ ಅನ್ಯಾಯವಾಗಿದೆ. ಮುಖ್ಯಮಂತ್ರಿ ಆಗಲು ಅವರು ಸಮರ್ಥರು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಐದು ವರ್ಷಗಳಿಂದ ರೈತರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಕೇಂದ್ರ ನಯಾಪೈಸೆಯೂ ಸಾಲಮನ್ನಾ ಮಾಡಿಲ್ಲ. ಮೋದಿ ಉದ್ಯಮಿಗಳ ₹ 2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದರಿಂದ ರೈತರು ಹಾಗೂ ಶ್ರಮಿಕ ವರ್ಗದವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಲೋಕಸಭೆಯ ಕೊನೆಯ ಹಂತದ ಚುನಾವಣೆಗಳಲ್ಲಿ ಮತ್ತು ಉತ್ತರ ಭಾರತದಲ್ಲಿ ಜನರ ಒಲವು ನಮ್ಮ ಮೇಲಿದೆ. ಎಲ್ಲ ಜಾತ್ಯತೀತ ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಲಿವೆ. ರಾಜ್ಯದಲ್ಲಿಯೂ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಕುಂದಗೋಳದಲ್ಲಿ ಶಿವಳ್ಳಿ ಅವರು ಮಾಡಿದ್ದ ಜನಪರ ಕೆಲಸಗಳು ನಮಗೆ ಶ್ರೀರಕ್ಷೆಯಾಗಿವೆ. ಇದರಿಂದ ಕುಸುಮಾವತಿ ಸುಲಭವಾಗಿ ಗೆಲ್ಲುತ್ತಾರೆ. ಕುಂದಗೋಳದಲ್ಲಿ ಯಾವುದೇ ಹಣ ಹಂಚಿಕೆ ನಡೆದಿಲ್ಲ. ಇದರ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್‌ ಪ್ರಮುಖರಾದ ಎಫ್‌.ಐ. ಜಕ್ಕಪ್ಪಗೌಡ್ರ ಮತ್ತು ಮಹೇಂದ್ರ ಸಿಂಘಿ ಇದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.