ADVERTISEMENT

ಕಟ್ಟಡ ಕುಸಿದು ಇಬ್ಬರು ಸಾವು, 47 ಜನರ ರಕ್ಷಣೆ, ಹಲವರು ಮೃತಪಟ್ಟಿರುವ ಶಂಕೆ

ಇನ್ನೂ ಕೆಲವರು ಅವಶೇಷದಡಿ ಸಿಲುಕಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 20:21 IST
Last Updated 19 ಮಾರ್ಚ್ 2019, 20:21 IST
ಧಾರವಾಡದ ಹೊಸ ಬಸ್ ನಿಲ್ದಾಣ ಬಳಿಯ ಕುಮಾರೇಶ್ವರ ಬಡಾವಣೆಯಲ್ಲಿನ ಬಹುಮಹಡಿ ಕಟ್ಟಡ ಕುಸಿದಿದ್ದರಿಂದ ಅವುಗಳ ಅವಶೇಷಗಳಡಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ          ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಹೊಸ ಬಸ್ ನಿಲ್ದಾಣ ಬಳಿಯ ಕುಮಾರೇಶ್ವರ ಬಡಾವಣೆಯಲ್ಲಿನ ಬಹುಮಹಡಿ ಕಟ್ಟಡ ಕುಸಿದಿದ್ದರಿಂದ ಅವುಗಳ ಅವಶೇಷಗಳಡಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ:ಇಲ್ಲಿನ ಹೊಸ ಬಸ್‌ ನಿಲ್ದಾಣದ ಬಳಿ ಇರುವ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ವಾಣಿಜ್ಯ ಸಂಕೀರ್ಣವೊಂದು ಮಂಗಳವಾರ ಏಕಾಏಕಿ ಕುಸಿದಿದ್ದರಿಂದ ಇಬ್ಬರು ಮೃತಪಟ್ಟು 36 ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನೂ ಅಂದಾಜು 35 ಮಂದಿ ಸಿಲುಕಿರುವ ಶಂಕೆ ಇದ್ದು, ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಮೃತಪಟ್ಟವರ ಪೈಕಿ ಒಬ್ಬರನ್ನು ಹುಬ್ಬಳ್ಳಿಯ ಸಲೀಂ ಮಕಾಂದಾರ್ (28) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆ, ಎಸ್‌ಡಿಎಂ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಳ ಅಂತಸ್ತು ಸೇರಿ ಒಟ್ಟು 4 ಅಂತಸ್ತಿನ ಕಟ್ಟಡ ಇದಾಗಿದ್ದು, ಕೆಳ ಅಂತಸ್ತಿನ ಹಲವು ಮಳಿಗೆಗಳು ಕಾರ್ಯಾರಂಭ ಮಾಡಿದ್ದವು. ಮಂಗಳವಾರ ಮಧ್ಯಾಹ್ನ 3.20ರ ಸುಮಾರಿಗೆ ಹಠಾತ್ತನೇ ನೆಲಕಚ್ಚಿದ್ದರಿಂದ ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ. ಇವರ ರಕ್ಷಣೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣವೇ ಮುಂದಾದರೂ ತಡರಾತ್ರಿಯವರೆಗೆ 47 ಜನರನ್ನು ಹೊರತೆಗೆದು ರಕ್ಷಣೆ ಮಾಡಲು ಸಾಧ್ಯವಾಯಿತು.

ADVERTISEMENT

ಅವಶೇಷಗಳ ಅಡಿ ಇಬ್ಬರು ಪುರುಷರ ದೇಹಗಳು ಇವೆ ಎಂದು ತಡ ರಾತ್ರಿಯೂ ಕಾರ್ಯಾಚರಣೆ ನಡೆಸಿದ ರಕ್ಷಣಾ ಕಾರ್ಯಾಚರಣೆ ತಂಡ ಹೇಳಿದೆ.

ಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಪರಿಹಾರ ಕಾರ್ಯದಲ್ಲಿ ತೊಡಗಿದ್ದರು. ಸ್ಥಳದಲ್ಲಿ ಜನಜಂಗುಳಿ ಉಂಟಾಗಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅರೆಸೇನಾ ಪಡೆಯ ಸಹಕಾರವನ್ನೂ ಜಿಲ್ಲಾಡಳಿತ ಪಡೆಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ತಡರಾತ್ರಿ ನಗರಕ್ಕೆ ಬಂತು.

ಮಧ್ಯಾಹ್ನದ ಸಮಯವಾದ್ದರಿಂದ ಕಟ್ಟಡದೊಳಗೆ ಇದ್ದ ಹೋಟೆಲ್‌ಗೆ ಊಟಕ್ಕೆ ಬಂದ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಕಾರ್ಮಿಕರು ಮತ್ತು ಕಟ್ಟಡದೊಳಗಿನ ಅಂಗಡಿ ಮಾಲೀಕರು ಇದ್ದರು.

ನೆರವಿಗೆ ದೌಡಾಯಿಸಿದ ಸ್ಥಳೀಯರು

ಕಟ್ಟಡ ಕುಸಿಯುತ್ತಿದ್ದಂತೆಯೇ ಪರಿಹಾರಕ್ಕೆ ಸ್ಥಳೀಯರು ಮುಂದಾದರು. ಪೊಲೀಸರು ಬರುವುದರೊಳಗಾಗಿ ಒಂದಿಬ್ಬರು ತಾವಾಗಿಯೇ ಅವಶೇಷಗಳ ಅಡಿಯಿಂದ ಹೊರಬಂದರು. ಉಳಿದವರ ರಕ್ಷಣೆಗೆ ಜೆಸಿಬಿ, ಕ್ರೇನ್, ಕಟ್ಟರ್ ಯಂತ್ರ ಬಳಸಲಾಗುತ್ತಿದ್ದು, ಒಳಗೆ ಸಿಲುಕಿರುವವರಿಗೆ ಆಮ್ಲಜನಕ, ನೀರು, ಆಹಾರ ಪೂರೈಸಲಾಗಿದೆ. ಒಳಗೆ ಸಿಲುಕಿರುವ ಕೆಲವರು ಫೋನ್ ಕರೆ ಮಾಡಿ ತಿಳಿಸಿದ್ದಾಗಿ ಅವರ ಸಂಬಂಧಿಕರು ತಿಳಿಸಿದರು.

ಕಳಪೆ ಕಾಮಗಾರಿ ಕಾರಣ?

ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಅವರ ಮಾವ ಗಂಗಪ್ಪ ಶಿಂತ್ರಿ, ಬಿ.ಡಿ.ನಿಗದಿ, ರವಿ ಸೊಬರದ, ಮಹಾಬಲೇಶ್ವರ ಕುರಬಗುಡಿ ಎಂಬುವವರ ಜಂಟಿ ಮಾಲೀಕತ್ವದ ಈ ಕಟ್ಟಡದ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ರೇಣುಕಾ ಕನ್ಸ್‌ಟ್ರಕ್ಷನ್ಸ್‌ ಸಂಸ್ಥೆ ಪಡೆದಿತ್ತು.

ಕಟ್ಟಡ ಕುಸಿಯಲು ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಶಿವಳ್ಳಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ, ಶಾಸಕ ಅರವಿಂದ ಬೆಲ್ಲದ ಸಂಶಯ ವ್ಯಕ್ತಪಡಿಸಿದ್ದಾರೆ.

‘ಈಗಾಗಲೇ ಹಲವು ಕಟ್ಟಡಗಳ ವೈಫಲ್ಯತೆಗೆ ಕಾರಣವಾಗಿರುವ ವಿವೇಕ ಪವಾರ್ ಎಂಬ ಎಂಜಿನಿಯರ್‌ ಅವರೇ ಈ ಕಟ್ಟಡ ಎಂಜಿನಿಯರ್‌ ಆಗಿದ್ದು, ವಿನ್ಯಾಸದಲ್ಲಿನ ಕೆಲ ದೋಷಗಳಿಂದಾಗಿ ಕಟ್ಟಡ ಕುಸಿದಿದೆ. ಈ ಹಿಂದೆಯೇ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಪಾಲಿಕೆಗೆ ಪತ್ರ ಬರೆದಿದ್ದೆ. ಹೀಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗುಳ ನಿರ್ಲಕ್ಷ್ಯವೂ ಇದರಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿದೆ’ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆಗೆ ರಾತ್ರಿ ಜನರೇಟರ್ ಬೆಳಕಿನಲ್ಲಿ ಕಾರ್ಯಾಚರಣೆ ನಡೆಯಿತು.

ಘಟನಾ ಸ್ಥಳದಲ್ಲಿ ಮೂರು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಕಲಂ 144ರ ಅಡಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂದುಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎಮ್‌.ಎನ್‌. ನಾಗರಾಜ್ ಹೇಳಿದರು.

ಕಟ್ಟಡದ ಕೆಳಗೆ ಎಲ್ಲೆಲ್ಲಿ ಧ್ವನಿ ಕೇಳಿಸುತ್ತಿದೆ ಅಲ್ಲಿ ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ಎನ್‌ಡಿಆರ್‌ಎಫ್ ಬಂದ ತಕ್ಷಣ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ.ಅವಶೇಷಗಳನ್ನು ಸಂಪೂರ್ಣ ತೆರವು ಮಾಡುವವರೆಗೆ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ. ನಂತರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ಅವಶೇಷಗಳ ಅಡಿ ಸಿಲುಕಿದ್ದ ವ್ಯಕ್ತಿಯನ್ನು ಹೊರ ತೆಗೆಯಲಾಯಿತು.

ಲಕ್ನೋದಿಂದ ಎನ್‌ಡಿಆರ್‌ಎಫ್‌ ತಂಡ
ಬೆಂಗಳೂರು:
ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಧಾರವಾಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ.

ಎನ್‌ಡಿಆರ್‌ಎಫ್‌ತಂಡ

ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಸೂಚಿಸಲಾಗಿದೆ.
ಲಕ್ನೋದಿಂದ 25 ಜನರ ಎನ್‌ಡಿಆರ್‌ಎಫ್‌ತಂಡ ವಿಶೇಷ ವಿಮಾನದಲ್ಲಿ ಆಗಮಿಸಲಿದೆ.

ಈಗಾಗಲೇ ಬೆಂಗಳೂರಿನಿಂದ ಐವರು ತಜ್ಞರ ತಂಡ ವಿಶೇಷ ವಿಮಾನದಲ್ಲಿ ತೆರಳಿದ್ದು ಈಗಾಗಲೇ ರಕ್ಷಣಾ ಕಾರ್ಯಾಚರಣೆ ಯಲ್ಲಿ ತೊಡಗಿಕೊಂಡಿದೆ. 25 ಜನರ ಇನ್ನೊಂದು ತಂಡವನ್ನು ಬಸ್ ನಲ್ಲಿ ಕಳುಹಿಸಲಾಗಿದ್ದು ಇನ್ನು ಎರಡು ಗಂಟೆಗಳಲ್ಲಿ ತಲುಪುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ದಿಗ್ಭ್ರಮೆ

ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಕಾರ್ಮಿಕರು ಸಾವನ್ನಪ್ಪಿರುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಅವರು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ರಕ್ಷಣಾ ಕಾರ್ಯಾಚರಣೆ ಕುರಿತು ಚರ್ಚಿಸಿದರು. ಬೆಂಗಳೂರಿನಿಂದ ವಿಶೇಷ ತಂಡವೊಂದನ್ನು ಸಂಜೆ ವಿಶೇಷ ವಿಮಾನದಲ್ಲಿ ಕಳುಹಿಸುವಂತೆ ಸೂಚನೆ ನೀಡಿದರು.
ಅಲ್ಲದೆ ಸುತ್ತಮುತ್ತಲಿನ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳಿಗೆ ವೈದ್ಯಕಿಯ ತಂಡಗಳನ್ನು ನಿಯೋಜಿಸಿ, ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ಒದಗಿಸಲು ಕ್ರಮವಹಿಸುವಂತೆ ಅವರು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.