ADVERTISEMENT

ಧಾರವಾಡ |ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ: ಉದ್ಯೋಗಾಕಾಂಕ್ಷಿಗಳ ವಶ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:50 IST
Last Updated 1 ಡಿಸೆಂಬರ್ 2025, 5:50 IST
   

ಧಾರವಾಡ: ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಸೋಮವಾರ ಪ್ರತಿಭಟಿಸುತ್ತಿದ್ದ ಉದ್ಯೋಗಾಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಬಿಡುಗಡೆಗೊಳಿಸಿದರು.

ಜನಸಾಮಾನ್ಯರ ವೇದಿಕೆ, ಉದ್ಯೋಗಾಕಾಂಕ್ಷಿಗಳ ವೇದಿಕೆ ಸೇರಿ ವಿವಿಧ ಸಂಘಟನೆಯವರು ಮತ್ತು ಉದ್ಯೋಗಾಕಾಂಕ್ಷಿಗಳು ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನ ಜಾಥಾ ಕೈಗೊಳ್ಳಲು ಶ್ರೀನಗರ ವೃತ್ತದಲ್ಲಿ (ಬಸವರಾಜ ಕಟ್ಟಿಮನಿ ವೃತ್ತ) ಜಮಾಯಿಸಿದ್ದರು.

‘ಪ್ರತಿಭಟನ ಜಾಥಾಗೆ ಅನುಮತಿಯಿಲ್ಲ. ಇಲ್ಲಿಯೇ ಮನವಿಪತ್ರ ನೀಡಿದರೆ ಅಥವಾ ನಾಲ್ವರು ಮುಖಂಡರು ಡಿ.ಸಿ ಕಚೇರಿಗೆ ತೆರಳಿ ಸಲ್ಲಿಸಿದರೆ, ಸರ್ಕಾರಕ್ಕೆ ತಲುಪಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಭಟನಕಾರರು, ‘ಮೆರವಣಿಗೆಗೆ ಅವಕಾಶ ನೀಡಿ. ನಮಗೆ ನ್ಯಾಯ ಬೇಕು’ ಎಂದು ಪಟ್ಟು ಹಿಡಿದರು. ಪೊಲೀಸರು 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆದೊಯ್ದರು.

ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಇತರರು ‘ನೇಮಕಾತಿ ನಡೆಸಲು ಆಗ್ರಹಿಸಿದರೆ, ಪೊಲೀಸರು ಹೋರಾಟ ಹತ್ತಿಕ್ಕುತ್ತಾರೆ’ ಎಂದರು. ಈ ಹಂತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಪೊಲೀಸರು ಚದುರಿಸಿದರು.

‘ವಶಕ್ಕೆ ಪಡೆದ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಿ, ಶ್ರೀನಗರ ವೃತ್ತಕ್ಕೆ ಕರೆತರಬೇಕು’ ಎಂದು ರೈತ ಸಂಘಟನೆ, ಕನ್ನಡ ಸಂಘಟನೆ, ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್‌), ಮಹಿಳಾ ಸಾಂಸ್ಖೃತಿಕ ಸಂಘಟನೆಯವರು ಸಂಜೆಯವರೆಗೂ ಪ್ರತಿಭಟನೆ ಮುಂದುವರೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಅವರು ಸಂಜೆ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಪತ್ರ ಸ್ವೀಕರಿಸಿದರು.

ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಲು ಆಗ್ರಹ

ಧಾರವಾಡ: ಪೊಲೀಸರು ವಶಕ್ಕೆ ಪಡೆದಿರುವ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಿ ಶ್ರೀನಗರ ವೃತ್ತಕ್ಕೆ ಕರೆ ತರಬೇಕು ಎಂದು ರೈತ ಸಂಘ ಸಹಿತ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಶ್ರೀನಗರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೋರಾಟ ಹತ್ತಿಕ್ಕುವುದು ಸರಿಯಲ್ಲ. ಪ್ರತಿಭಟನಕಾರರನ್ನ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ರೈತ ಮುಖಂಡ ಶಂಕರಪ್ಪ ಅಂಬಲಿ ಒತ್ತಾಯಿಸಿದರು.

ಶರಣು ಗೊನವರ, ಎಐಎಂಎಸ್‌ಎಸ್ ಸಂಘಟನೆಯ ಅನಸೂಯಾ, ಬಸವರಾಜ ಧರ್ಮ ಇದ್ದರು.

ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವವರೆಗೆ ಹೋರಾಟ ಕೈಬಿಡುವುದಿಲ್ಲ. ಹೋರಾಟವನ್ನು ರಾಜ್ಯವ್ಯಾಪಿ ಆಂದೋಲನವಾಗಿ ವಿಸ್ತರಿಸುತ್ತೇವೆ
ಯಲ್ಲಪ್ಪ ಹೆಗಡೆ, ಸಂಚಾಲಕ, ಜನಸಾಮಾನ್ಯರ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.