ADVERTISEMENT

ಸಮ್ಮೇಳನ: ಆಗದ ನೋಂದಣಿ, ಶಿಕ್ಷಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 6:05 IST
Last Updated 4 ಜನವರಿ 2019, 6:05 IST
ಸಾಹಿತ್ಯ ಸಮ್ಮೇಳನದಲ್ಲಿ ಹೊಸ  ನೊಂದಾವಣಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಯಿತು.
ಸಾಹಿತ್ಯ ಸಮ್ಮೇಳನದಲ್ಲಿ ಹೊಸ ನೊಂದಾವಣಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಯಿತು.   

ಧಾರವಾಡ: ಮುಂಚಿತವಾಗಿ ನೋಂದಣಿ ಮಾಡಿಕೊಳ್ಳದೇ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿತರಿಸಿದ ಟೋಕನ್ ಪಡೆದ ಶಿಕ್ಷಕರಿಗೆ ಸಮ್ಮೇಳನದಲ್ಲಿ ನೋಂದಣಿ ನಿರಾಕರಿಸಿದ ಕಾರಣ, ನೂರಾರು ಶಿಕ್ಷಕರು ಸಮ್ಮೇಳನದ ನೋಂದಣಿ ಕೌಂಟರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೃಷಿ ವಿ.ವಿ.ಯ ಮುಖ್ಯದ್ವಾರದ ಆರಂಭದಲ್ಲೇ ನೋಂದಣಿ ಮಳಿಗೆಗಳನ್ನು ತೆರೆಯಲಾಗಿದೆ. ಶುಕ್ರವಾರ ಮುಂಜಾನೆ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ರಾಯಚೂರು ಹೀಗೆ ವಿವಿಧ ಜಿಲ್ಲೆಗಳಿಂದ ಶಿಕ್ಷಕರು ಬಂದಿದ್ದರು. ಇವರಿಗೆಲ್ಲಾ ಆಯಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಭಾಗವಹಿಸಲು ಟೋಕನ್‌ಗಳನ್ನು ನೀಡಿತ್ತು. ಆದರೆ, ಶಿಕ್ಷಕರು ಸಮ್ಮೇಳನದ ಸ್ಥಳದಲ್ಲಿ ನೋಂದಣಿಗೆ ಕೇಳಿದಾಗ ನೋಂದಣಿ ನಿರಾಕರಿಸಲಾಯಿತು. ಇದರಿಂದ ಆಕ್ರೋಶಭರಿತರಾದ ಶಿಕ್ಷಕರು ಸ್ಥಳದಲ್ಲೇ ದಿಢೀರ್ ಪ್ರತಿಭಟನೆ ನಡೆಸಿ, ಕಸಾಪ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು.

ಟೋಕನ್ ನೀಡಿರುವುದು ಬರೀ ಕಸಾಪದ ಮುಂಬರುವ ಚುನಾವಣೆಯ ಗಿಮಿಕ್ ಆಗಿದೆ. ಕೆಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಶಿಕ್ಷಕರಿಗಾಗಿಯೇ 100 ಕೂಪನ್‌ಗಳನ್ನು ನೀಡಲಾಗಿದೆ. ಇಲ್ಲಿ ಬಂದರೆ ನಮಗೆ ನೋಂದಣಿ ನಿರಾಕರಿಸಲಾಗುತ್ತಿದೆ ಎಂದು ಶಿಕ್ಷಕರಾದ ತುಮಕೂರಿನ ಲಕ್ಷ್ಮೀನಾರಾಯಣ, ಶಿವಮೊಗ್ಗದ ಕುಮಾರ್, ಮಸ್ಕಿಯ ಸುಮಯ್ಯಾ ದಂಪತಿ ಹೇಳಿದರು.

ADVERTISEMENT

‘ನನಗೆ ವಿಶೇಷ ಆಹ್ವಾನಿತರು ಎಂದು ಕಸಾಪ ಆಹ್ವಾನ ಪತ್ರಿಕೆ ಕಳುಹಿಸಿದೆ. ಇಲ್ಲಿ ನೋಡಿದರೆ ನನಗೆ ನೋಂದಣಿಗೆ ಅವಕಾಶ ನೀಡುತ್ತಿಲ್ಲ’ ಎಂದು ಮೂಡಿಗೆರೆ ಶಾಲೆಯ ಮುಖ್ಯಶಿಕ್ಷಕ ಚಂದ್ರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

‘ನಮಗೆ ರೂಂ ಬೇಡ, ಯಾವ ಸೌಲಭ್ಯವೂ ಬೇಡ, ಆದರೆ, ಕನಿಷ್ಠ ಓಓಡಿಯಾದರೂ ಕೊಡಿ. ಅಷ್ಟು ದೂರದಿಂದ ಬಸ್‌ಚಾರ್ಚ್ ಇಟ್ಟುಕೊಂಡು ಬಂದಿದ್ದೇವೆ’ ಎಂದು ಶಿಕ್ಷಕರು ನೊಂದು ನುಡಿದರು.

--

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.