
ಧಾರವಾಡ: ಉದ್ದಿನಕಾಳಿಗೆ ಮಣ್ಣು ಅಂಟಿದೆ, ತೇವಾಂಶ ಅಧಿಕ ಇದೆ ಎಂದು ತಿರಸ್ಕರಿಸಬಾರದು, ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಬೇಕು ಎಂದು ಆಗ್ರಹಿಸಿ ಬೆಳೆಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಉದ್ದಿನಕಾಳು ಚೀಲಗಳನ್ನು ತುಂಬಿದ್ದ ಟ್ರ್ಯಾಕ್ಟರ್‌ಗಳನ್ನು ಜಿಲ್ಲಾಧಿಕಾರಿ ಕಚೇರಿ ಗೇಟಿನ ಮುಂಭಾಗದಲ್ಲಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿ, ‘ಉದ್ದಿನಕಾಳಿಗೆ ಮಣ್ಣು ಅಂಟಿದೆ, ತೇವಾಂಶ ಶೇ 14ಕ್ಕಿಂತ ಅಧಿಕ ಇದೆ ಎಂದು ಕೆಲವು ರೈತರ ಉದ್ದಿನಕಾಳು ತಿರಸ್ಕರಿಸಲಾಗಿದೆ. ರೈತರು ಬೆಳೆ ಬೆಳೆಯಲು, ಅದನ್ನು ಖರೀದಿ ಕೇಂದ್ರಕ್ಕೆ ಸಾಗಿಸಲು ಬಹಳಷ್ಟು ಖರ್ಚು ಮಾಡಿರುತ್ತಾರೆ. ರೈತರು ಖರೀದಿ ಕೇಂದ್ರಕ್ಕೆ ತಂದ ಉದ್ದಿನಕಾಳನ್ನು ತಿರಸ್ಕರಿಸದಂತೆ ಕೇಂದ್ರದವರಿಗೆ ಸರ್ಕಾರ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಮುಂಗಾರಿನಲ್ಲಿ ಸತತ ಮಳೆಯಿಂದಾಗಿ ಹಲವೆಡೆ ಬೆಳೆ ಹಾನಿ ಸಂಭವಿಸಿತ್ತು. ಬೆಳೆ ಹಾನಿ ಪರಿಹಾರ ಹಲವು ರೈತರಿಗೆ ಪಾವತಿಯಾಗಿಲ್ಲ. ಪರಿಹಾರ ಪಾವತಿಗೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
‘ಬಹಳಷ್ಟು ರೈತರು ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಮಳೆಯಿಂದಾಗಿ ಕೆಲವು ಬೆಳೆಗಳು ಹಾನಿಯಾಗಿವೆ. ಬೆಳೆ ವಿಮೆ ಪರಿಹಾರವನ್ನು ಈವರೆಗೆ ರೈತರಿಗೆ ಪಾವತಿಸಿಲ್ಲ’ ಎಂದು ದೂರಿದರು.
ಮಾಜಿ ಶಾಸಕ ಅಮೃತ್ ದೇಸಾಯಿ ಮಾತನಾಡಿದರು. ಜಿ.ಆರ್.ಜವಳಗಿ, ಈರಪ್ಪ ಗಂಟಿ, ಶಿವಾನಬಂದ ಹಟ್ಟಿ, ಪರಮೇಶ್ವರ ಕೊಯಪ್ಪನವರ, ಶಂಕರ ಕುಮಾರ ದೇಸಾಯಿ,ಶಂಕರ ಶೇಳಕೆ, ಮೋಹನ ರಾಮದುರ್ಗ, ಪುಷ್ಪಾ ನವಲಗುಂದ, ರಾಜೇಶ್ವರಿ ಅಳಗವಾಡಿ, ಮಂಜಳಾ ಪಳೂಟ್ಟಿ, ಭಾರತಿ ದಳವಾಯಿ ಪ‍್ರತಿಭಟನೆಯಲ್ಲಿದ್ದರು.
ರೈತರಿಗೆ ತೊಂದರೆ ಮಾಡಬಾರದು. ತಾಂತ್ರಿಕ ಸಮಸ್ಯೆ ಕಾರಣ ನೀಡದೆ ಉದ್ದಿನಕಾಳು ಖರೀದಿಸಬೇಕು. ಖರೀದಿ ಕೇಂದ್ರಗಳಲ್ಲಿ ಗ್ರೇಡರ್ ಇತ್ಯಾದಿ ವ್ಯವಸ್ಥೆ ಮಾಡಬೇಕುಸೀಮಾ ಮಸೂತಿ ಮಾಜಿ ಶಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.