ಹುಬ್ಬಳ್ಳಿ: ‘ಲಿಂಗಾಯತ ಧರ್ಮ ಸ್ಥಾಪನೆ ನಾಟಕ ಕಂಪನಿ ನಡೆಸಿದಷ್ಟು ಸುಲಭವಲ್ಲ. ‘ಬಸವ ಸಂಸ್ಕೃತಿ ಯಾತ್ರೆ’ ಎಂಬ ನಾಟಕ ಕಂಪನಿಯ ಪಾತ್ರದಾರಿಗಳನ್ನು ಅದರ ಮ್ಯಾನೇಜರ್ ಎಸ್.ಎಂ. ಜಾಮದಾರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದರು.
‘ಮಹಾವೀರ, ಬುದ್ಧನ ರೀತಿ ಬಸವ ಧರ್ಮ ಸ್ಥಾಪನೆ ಮಾಡಬೇಕು. ಅದಕ್ಕೆ ಯಾರ ವಿರೋಧವಿಲ್ಲ. ಆದರೆ, ಬಸವಣ್ಣನವರ ಹೆಸರು ಹೇಳಿಕೊಂಡ ವೀರಶೈವ ಲಿಂಗಾಯತರು, ಅಖಂಡ ಸಮಾಜವನ್ನು ಒಡೆಯಲು ಮುಂದಾಗಿರುವುದು ಸರಿಯಲ್ಲ’ ಎಂದು ಹೇಳಿದರು.
ಅವರು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು.
‘ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು ಸೇರಿ ಇತರ ಶ್ರೀಗಳು ಇಂಗ್ಲಿಷ್ ಸಂಸ್ಕೃತಿಯ ನಿವೃತ್ತ ಐಎಎಸ್ ಅಧಿಕಾರಿ ಮಾರ್ಗದರ್ಶನದಲ್ಲಿ ಹೋಗಿ ಸಮಾಜ ಸರ್ವನಾಶ ಮಾಡುತ್ತಿದ್ದಾರೆ.
‘ಜಾತ್ಯತೀತ ಧರ್ಮ ಸ್ಥಾಪನೆ ಮಾಡುತ್ತೇವೆ ಎಂದು ಬಸವ ಸಂಸ್ಕೃತಿ ಯಾತ್ರೆಯಲ್ಲಿ ಹೇಳಿದ್ದಾರೆ. ಅದರಲ್ಲಿದ್ದ ಸ್ವಾಮೀಜಿಗಳು ಒಂದೊಂದು ಜಾತಿ ಪ್ರತಿನಿಧಿಸುವ ಮಠಗಳ ಪೀಠಾಧಿಪತಿಗಳು. ಸಾಣೇಹಳ್ಳಿ ಶ್ರೀ ಅವರ ಮಠಕ್ಕೆ ಯಾವ ಜಾತಿ ವಟುವನ್ನು ಉತ್ತರಾಧಿಕಾರಿಯಾಗಿ ಮಾಡಿಕೊಳ್ಳುತ್ತಾರೆ
‘ಪಂಚಪೀಠಗಳು ಬಸವಣ್ಣನನ್ನು ವಿರೋಧಿಸಿದ್ದು ಸತ್ಯ. ಪಂಚಾಚಾರ್ಯರು, ಪಂಚಪೀಠಗಳು ಬದಲಾವಣೆಯಾಗಲು ಈಗ ಕಾಲ ಸನ್ನಿಹಿತವಾಗಿದೆ.
‘ನಾನು ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತೇನೆ’ ಎಂದಿರುವ ಪಂಡಿತಾರಾಧ್ಯ ಶಿವಾಚಾರ್ಯರಿಗೆ, ‘ತಾವು ಇಡೀ ಸಮಾಜದ ದಾರಿ ತಪ್ಪಿಸುತ್ತಿದ್ದೇವೆ ಎಂಬುದು ಅರಿವಿಗೆ ಬರಬೇಕು.
2017–18ರಲ್ಲಿ ಎಂಟು ಜನ ಸಚಿವರು ವಿವಿಧ ಸ್ವಾಮೀಜಿಗಳಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ. ಈಗ ‘ಚಿಯಾ ಮಿಯಾ’ಗಳಿಂದ ಅದು ಅಸಾಧ್ಯದಿಂಗಾಲೇಶ್ವರ ಸ್ವಾಮೀಜಿ, ಶಿರಹಟ್ಟಿ
‘ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ಒಡೆಯುವ ಹುಚ್ಚು ಸಾಹಸ ಬೇಡ. ಅಲ್ಲಿ ಭೀಷ್ಮನಂತೆ ಶಾಮನೂರು ಶಿವಶಂಕರಪ್ಪ, ಅರ್ಜುನನಂತೆ ಈಶ್ವರ ಖಂಡ್ರೆ, ಭೀಮನಂತಹ ಶಂಕರ ಬಿದರಿ ಸೇರಿ ಅನೇಕ ಸ್ವಾಮೀಜಿಗಳಿದ್ದಾರೆ. ಅವರು ನಿಮ್ಮಂತಹ ಕೌರವರ ಪಾತ್ರಕ್ಕೆ ಅವಕಾಶ ನೀಡುವುದಿಲ್ಲ.
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವಾದರೂ ನಾವೆಲ್ಲ ಹಿಂದೂ ಧರ್ಮದವರು. ಸೌಲಭ್ಯಗಳಿಗಾಗಿ ಇತ್ತೀಚೆಗೆ ಧರ್ಮಗಳು ಸ್ಥಾಪನೆಯಾಗಿವೆ‘ ಎಂದು ಸ್ವಾಮೀಜಿ ಹೇಳಿದರು.
ವೀರಶೈವ-ಲಿಂಗಾಯತ ಒಂದೇ: ಚರಂತಿಮಠ
ಬಾಗಲಕೋಟೆ: ‘ವೀರಶೈವ-ಲಿಂಗಾಯತ ಎರಡೂ ಒಂದೆ. ಬೇರೆ ಬೇರೆ ಎನ್ನುವವರಿಗೆ ನಾವೇನು ಹೇಳಲಾಗದು’ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಧರ್ಮ ಹಿಂದೂ ಎಂದು, ಜಾತಿ ವೀರಶೈವ ಲಿಂಗಾಯತ ಎಂದು ಬರೆಸಲಾಗುವುದು’ ಎಂದರು.
‘ಕೆಲ ಸ್ವಾಮೀಜಿಗಳು ಲಿಂಗಾಯತ ಪ್ರತ್ಯೇಕ ಧರ್ಮ, ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಲು ಕರೆ ನೀಡಿರುವ ಪ್ರಶ್ನೆಗೆ, ‘ಹೊತ್ತು ಬಂದಾಗೊಂದು ಹೇಳುವವರಿಗೆ ಉತ್ತರ ಕೊಡುವುದು ಅಸಾಧ್ಯ‘ ಎಂದರು.
‘ವೀರಶೈವ ಪದಕ್ಕೆ ನೂರಾರು ವರ್ಷದ ಇತಿಹಾಸವಿದೆ. ಗದುಗಿನ ಮಠದಲ್ಲಿ ಹಿಂದೆ ವೀರಶೈವ ಅಧ್ಯಯನ ಸಂಸ್ಥೆ, ವೀರಶೈವ ಪ್ರಗತಿಶೀಲ ಸಂಘ, ವೀರಶೈವ ಪುಣ್ಯವಂತರ ಸಾಹಿತ್ಯ ರತ್ನಮಾಲೆ ಇತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.