ADVERTISEMENT

ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್‌ ಕೈವಾಡವಿದ್ದರೆ ಕ್ರಮಕೈಗೊಳ್ಳಿ: ಡಿಕೆಶಿ ಸವಾಲು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 15:26 IST
Last Updated 19 ಏಪ್ರಿಲ್ 2022, 15:26 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್‌ನವರ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆಪಾದಿಸುತ್ತಿದ್ದಾರೆ. ಅವರದ್ದೇ ಸರ್ಕಾರವಿದ್ದು, ಕ್ರಮಕೈಗೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ಮಂಗಳವಾರ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಲಾಭೂರಾಮ್‌ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ನಿರತರನ್ನು ಸಮಾಧಾನಗೊಳಿಸಲು ಹು–ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಯತ್ನಿಸಿದ್ದಾರೆ. ಈಗ ಅವರನ್ನೇ ಆರೋಪಿಯನ್ನಾಗಿಸಲಾಗುತ್ತಿದೆ. ತಪ್ಪು ಮಾಡಿದ್ದರೆ ಬಂಧಿಸಲಿ ಎಂದರು.

ಹುಬ್ಬಳ್ಳಿ ಗಲಭೆಯಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಕಾಂಗ್ರೆಸ್‌ ಮಧ್ಯ ಪ್ರವೇಶ ಮಾಡುವುದಿಲ್ಲ. ಆದರೆ, ಅಮಾಯಕರ ವಿರುದ್ಧ ಕ್ರಮ ಆಗಬಾರದು. ಪೊಲೀಸರು ಹೆಚ್ಚಿನ ಅನಾಹುತ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ಅವರು ಕಠಿಣ ಪದ ಪ್ರಯೋಗ ಮಾಡಿದ್ದರೆ, ಪೊಲೀಸರಿಗೆ ಹೆಚ್ಚಿನ ಶಕ್ತಿ ಬರುತ್ತಿತ್ತು ಎಂದು ಹೇಳಿದರು.

ADVERTISEMENT

ಮಾಧ್ಯಮದಲ್ಲಿ ಬರುತ್ತಿರುವುದಕ್ಕೂ, ವಾಸ್ತವಕ್ಕೂ ದೂರ ಇದೆ. ಮಾಧ್ಯಮದವರನ್ನು ಹುಬ್ಬಳ್ಳಿಯನ್ನು ಕೊಲ್ಲುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು, ಕಾನೂನು ಕೈಗೆತ್ತಿಕೊಳ್ಳುವುದನ್ನು ಖಂಡಿಸುತ್ತೇನೆ. ರಾಜ್ಯ ಶಾಂತಿಯ ತೋಟ ಆಗಬೇಕು. ಯಾವುದೇ ಧರ್ಮದವರು ಅಶಾಂತಿ, ಪ್ರಚೋದನೆಗೆ ಅವಕಾಶ ಕೊಡಬಾರದು ಎಂದರು.

ಹುಬ್ಬಳ್ಳಿ ವಾಣಿಜ್ಯ ನಗರವಾಗಿದೆ. ವ್ಯಾಪಾರ ನಡೆಯುವಂತಾಗಬೇಕು. ಕಾನೂನು ಕೈಗೆತ್ತಿಕೊಳ್ಳಬೇಡಿ. ಸರ್ಕಾರ, ಪೊಲೀಸರಿಗೆ ಬಿಡಿ. ಸಮಸ್ಯೆ ಇದ್ದರೆ ಹೇಳಿ, ಕಾಂಗ್ರೆಸ್‌ ಹೋರಾಟ ಮಾಡಲಿದೆ. ದೇಶದೆಲ್ಲೆಡೆ ಕೋಮುಗಲಭೆ ಹುಟ್ಟುಹಾಕುವ ವ್ಯವಸ್ಥಿತ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ದೇಶ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಚರ್ಚ್‌ ಮೇಲೆ ದಾಳಿ, ಕಲ್ಲಂಗಡಿ ಒಡೆಯುವುದು, ಜಾತ್ರೆಯಲ್ಲಿ ಒಂದು ಧರ್ಮದವರ ವ್ಯಾಪಾರಕ್ಕೆ ನಿಷೇಧದಂತಹ ಕ್ರಮಗಳಿಂದ ಕೋಳಿ, ಕುರಿಗಳ ಬೆಲೆ ಕಡಿಮೆಯಾಗಿದೆ. ರೈತರು ತೊಂದರೆಗೆ ಸಿಲುಕಿದ್ದಾರೆ. ಎಲ್ಲ ಧರ್ಮದವರ ವಹಿವಾಟಿಗೆ ತೊಂದರೆಯಾಗಿದೆ. ಒಂದಕ್ಕೊಂದು ಸಂಬಂಧವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.