ADVERTISEMENT

ರಣಜಿ ಟ್ರೋಫಿ ಫೈನಲ್ ವೀಕ್ಷಿಸಲು ಇಂಗ್ಲೆಂಡ್‌ನಿಂದ ಬಂದ ಕ್ರಿಕೆಟ್‌ ಪ್ರೇಮಿಗಳು

ಸತೀಶ ಬಿ.
Published 27 ಫೆಬ್ರುವರಿ 2026, 8:13 IST
Last Updated 27 ಫೆಬ್ರುವರಿ 2026, 8:13 IST
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಿದ ಇಂಗ್ಲೆಂಡ್‌ನ ನೇಲ್ ಫಿಶ್ ಮತ್ತು ಕೇತ್ ಪ್ಲೆಡ್ಜರ್
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಿದ ಇಂಗ್ಲೆಂಡ್‌ನ ನೇಲ್ ಫಿಶ್ ಮತ್ತು ಕೇತ್ ಪ್ಲೆಡ್ಜರ್ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಗುರುವಾರ ರಣಜಿ ಕ್ರಿಕೆಟ್ ಪಂದ್ಯವನ್ನು ಕರ್ನಾಟಕ ಮತ್ತು ಜಮ್ಮು–ಕಾಶ್ಮೀರದವರು ಅಷ್ಟೇ ಅಲ್ಲ; ಇಂಗ್ಲೆಂಡ್‌ನ ಮೂವರು ಕ್ರಿಕೆಟ್ ಪ್ರೇಮಿಗಳೂ ವೀಕ್ಷಿಸಿದರು. ಎಯಾನ್ ಜೋನ್ಸ್, ಕೇತ್ ಪ್ಲೆಡ್ಜರ್ ಮತ್ತು ನೇಲ್ ಫಿಶ್ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿ, ಕ್ರಿಕೆಟ್ ಕುರಿತು ಪ್ರೀತಿ ಮತ್ತು ಅಭಿಮಾನ ಹಂಚಿಕೊಂಡರು.

 ‘ಆರು ತಿಂಗಳಿನಿಂದ ಗೋವಾದಲ್ಲಿದ್ದೇನೆ. ರಣಜಿ ಪಂದ್ಯ ನೋಡಲೆಂದೇ ಅಲ್ಲಿಂದ ರೈಲಿನಲ್ಲಿ ಮಂಗಳವಾರವೇ ಹುಬ್ಬಳ್ಳಿಗೆ ಬಂದೆ. ಪ್ರತಿ ದಿನ ₹100 ಕೊಟ್ಟು ಟಿಕೆಟ್ ಖರೀದಿಸಿ, ಪಂದ್ಯ ವೀಕ್ಷಿಸುತ್ತೇನೆ. ಪ್ರಸಕ್ತ‌ ರಣಜಿ ಋತುವಿಯನಲ್ಲಿ 50 ಪಂದ್ಯಗಳನ್ನು ವೀಕ್ಷಿಸಿದ್ದೇನೆ’ ಎಂದು 66 ವರ್ಷದ ಎಯಾನ್ ಜೋನ್ಸ್ ಹೇಳಿದರು. 

‘ನಾನು ಸಹ ಗೋವಾದಿಂದ ಬಂದಿದ್ದೇನೆ. ಈ ಹಿಂದೆ ಕೋಲ್ಕತ್ತದ ಈಡನ್ ಗಾರ್ಡನ್, ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದ್ದ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ವೀಕ್ಷಿಸಿದ್ದೆ. ಟಿ–20 ಕ್ರಿಕೆಟ್‌ಗಿಂತ ಟೆಸ್ಟ್ ಕ್ರಿಕೆಟ್‌ ನೋಡುವುದು ಹೆಚ್ಚು ಖುಷಿ ಕೊಡುತ್ತದೆ. ಟೆಸ್ಟ್ ಕ್ರಿಕೆಟ್‌ ಯಾವಾಗಲೂ ಬೆಸ್ಟ್‌' ಎಂದು 58 ವರ್ಷದ ಕೇತ್ ಪ್ಲೆಡ್ಜರ್ ತಿಳಿಸಿದರು.

ADVERTISEMENT

‘1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ– ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಿದ್ದೆ. ಎರಡು ಬಾರಿ ಹಂಪಿಗೆ ಭೇಟಿ ನೀಡಿದ್ದೆ. ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕಾಗಿ ಮೊದಲ ಸಲ ಹುಬ್ಬಳ್ಳಿಗೆ ಬಂದಿದ್ದೇನೆ’ ಎಂದು ನೇಲ್ ಫಿಶ್ ಹೇಳಿದರು.

ಮಯಂಕ್ ಅಗರವಾಲ್ ಕಳೆದ ವರ್ಷ ಇಂಗ್ಲೆಂಡ್‌ನ ಯಾರ್ಕ್ ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ನನಗೆ ಕ್ರಿಕೆಟ್ ಎಂದರೆ ತುಂಬಾ ಪ್ರೀತಿ.
- ಎಯಾನ್ ಜೋನ್ಸ್, ಇಂಗ್ಲೆಂಡ್

‘40 ಓವರ್‌ಗಿಂತ 4 ದಿನಗಳ ಪಂದ್ಯಗಳ ಇಷ್ಟ

‘ಕಳೆದ ಗುರುವಾರದವರೆಗೆ ನನಗೆ ಹುಬ್ಬಳ್ಳಿಯ ಬಗ್ಗೆ ಗೊತ್ತಿರಲಿಲ್ಲ. ರಣಜಿ ಫೈನಲ್ ವೀಕ್ಷಣೆಗೆ ಹುಬ್ಬಳ್ಳಿಗೆ ಬರುವ ಮಾರ್ಗ ತಿಳಿಯಲು ಗೂಗಲ್‌ನಲ್ಲಿ 20 ಸಾವಿರ ಸರ್ಚ್‌ಗಳನ್ನು ಮಾಡಿದೆ. ಕೊನೆಗೆ ಏರ್‌ ಇಂಡಿಯಾ ವಿಮಾನದ ಮೂಲಕ ಸೋಮವಾರ ಬಂದಿಳಿದೆ’ ಎಂದು ಇಂಗ್ಲೆಂಡ್‌ನ ಪಾವ್ ಗಾರ್ವುಡಲ್ ತಿಳಿಸಿದರು.

‘ನಾನು ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಭಾರತಕ್ಕೆ ಬಂದೆ. ಆದರೆ ಟಿ20 ಪಂದ್ಯಗಳನ್ನು ನೋಡಲು ಆಗಲಿಲ್ಲ. ರಣಜಿ ಟ್ರೋಫಿ ಫೈನಲ್ ಇರುವುದು ಗೊತ್ತಾಯಿತು. 40 ಓವರ್‌ಗಳ ಆಟ ನೋಡುವ ಬದಲು ನಾಲ್ಕು ದಿನಗಳ ದೇಶಿ ಕ್ರಿಕೆಟ್‌ನ ಸೊಬಗು ಸವಿಯಲು ನಿರ್ಧರಿಸಿದೆ. ಮೂರು–ರ್ನಾಲ್ಕು ವರ್ಷಗಳ ಹಿಂದೆ ಇಂದೋರ್ ಮತ್ತು ಧರ್ಮಶಾಲಾಗೆ ಹೋಗಿ ಪಂದ್ಯಗಳನ್ನು ವೀಕ್ಷಿಸಿದ್ದೆ. ಆಗಿನಿಂದ ಭಾರತಕ್ಕೆ ಬರುತ್ತಿದ್ದೇನೆ’ ಎಂದರು. ಪಾವ್ ಅವರು ಇಂಗ್ಲೆಂಡ್‌ನಲ್ಲಿ ಬ್ಯಾಂಕರ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.