ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಸಾಧಾರಣ ಮಳೆ ಸುರಿದಿದ್ದು, ರೈತರಲ್ಲಿ ಸಂತಸ ಉಂಟುಮಾಡಿತು. ವಾರದಿಂದ ಮೋಡ ಕವಿದ ವಾತಾವರಣವಿದ್ದರೂ ಮಳೆ ಸುರಿದಿರಲಿಲ್ಲ. ಇದರಿಂದಾಗಿ, ಬಿತ್ತನೆ ಕೆಲಸ ಮುಗಿಸಿದ್ದ ರೈತರು ಚಿಂತೆಗೀಡಾಗಿದ್ದರು. ಅದರ ಬೆನ್ನಲ್ಲೇ, ಇಂದು ಸುರಿದ ಮಳೆಯು ರೈತರ ಮೊಗದಲ್ಲಿ ಕೊಂಚ ಸಂಭ್ರಮ ತಂದಿತು.
ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ, ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಜಿಟಿಜಿಟಿಯಾಗಿ ಆರಂಭಗೊಂಡ ಮಳೆಯು ನಂತರ ಕೆಲ ಹೊತ್ತು ಜೋರಾಗಿ ಸುರಿಯಿತು.
'ಹೊಲದಲ್ಲಿ ಜೋಳವನ್ನು ಬಿತ್ತನೆ ಮಾಡಿದ್ದೆವು. ಆದರೆ, ವಾರವಾದರೂ ಬಾರದ ಮಳೆಯಿಂದಾಗಿ ಚಿಂತೆಯಾಗಿತ್ತು. ಎಲ್ಲಿ ಬೀಜಗಳು ಒಣಗಿ ಹೋಗುತ್ತವೊ ಎಂಬ ಆತಂಕದಲ್ಲಿದ್ದೆವು. ಇದೀಗ ಮಳೆ ಬಂದಿದ್ದು ಸಮಾಧಾನ ತಂದಿದೆ' ಎಂದು ಉಣಕಲ್‌ನ ರೈತ ಸಿದ್ಧಯ್ಯ ಹಿರೇಮಠ ಸಂತಸ ವ್ಯಕ್ತಪಡಿಸಿದರು.
ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು. ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಜನ ತೊಂದರೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.