ADVERTISEMENT

ಹುಬ್ಬಳ್ಳಿ ಗಣೇಶೋತ್ಸವ: 50ರ ಸಂಭ್ರಮದಲ್ಲಿ ಹುಬ್ಬಳ್ಳಿ ಕಾ ರಾಜಾ

ಪ್ರಥಮ ಬಾರಿಗೆ ಬೆಂಗಳೂರಿನಿಂದ ಬರಲಿರುವ ಗಣೇಶ ಮೂರ್ತಿ

ಪೂರ್ಣಿಮಾ ಗೊಂದೆನಾಯ್ಕರ
Published 26 ಆಗಸ್ಟ್ 2025, 6:17 IST
Last Updated 26 ಆಗಸ್ಟ್ 2025, 6:17 IST
ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಹುಬ್ಬಳ್ಳಿ ಕಾ ರಾಜಾ
ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಹುಬ್ಬಳ್ಳಿ ಕಾ ರಾಜಾ   

ಹುಬ್ಬಳ್ಳಿ: ಗಣೇಶೋತ್ಸವ ಎಂದರೆ ಇಡೀ ಹುಬ್ಬಳ್ಳಿ ರಂಗೇರುತ್ತದೆ. ಅದರಲ್ಲೂ ‘ಹುಬ್ಬಳ್ಳಿ ಕಾ ರಾಜಾ’ ಗಣಪತಿ ಸಡಗರ ನೋಡೋದೆ ಚೆಂದ.‌ 50ನೇ ವರ್ಷದ ಸಂಭ್ರಮದಲ್ಲಿರುವ ‘ಹುಬ್ಬಳ್ಳಿ ಕಾ ರಾಜಾ’ ಗಣಪತಿ ಈ ವರ್ಷ ಬೆಂಗಳೂರಿನಲ್ಲಿ ತಯಾರಾಗಿದೆ. 18 ವರ್ಷಗಳ ಬಳಿಕ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರಲಿದ್ದಾನೆ.

ದಾಜಿಬಾನಪೇಟೆಯಲ್ಲಿ ಶ್ರೀಗಜಾನನ ಉತ್ಸವ ಸಮಿತಿ 1975ರಿಂದ ಗಣೇಶೋತ್ಸವ ಆಚರಿಸುತ್ತಿದೆ. ಜೊತೆಗೆ ಸಾಮಾಜಿಕ ಕಾರ್ಯ ಮಾಡುತ್ತಿದೆ. ಈವರೆಗೆ 18 ಮಂದಿ ಅಧ್ಯಕ್ಷರು ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಬಾರಿ ಸಮಿತಿಗೆ ಸಂಜಯ ಮೆಹರವಾಡಿ ಅಧ್ಯಕ್ಷರು.

ಗಣೇಶೋತ್ಸವ ಸಮಿತಿ 1990ರಲ್ಲಿ ಮುತ್ತಿನ ಗಣಪತಿ, 1991ರಲ್ಲಿ ಗಾಜಿನ ಗಣಪತಿ, 1994ರಲ್ಲಿ ನಾಣ್ಯದ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಈ ವರ್ಷ 21 ಅಡಿಯ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ.

ADVERTISEMENT

1975ರಿಂದ ಗಜಾನನ ಉತ್ಸವ ಸಮಿತಿಯು ಪ್ರತಿ ವರ್ಷ ಹಲವು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತದೆ. 1997ರಲ್ಲಿ ಗುಟಕಾ ವಿರೋಧಿ ಚಳವಳಿ ಕುರಿತು ಸಂದೇಶ ನೀಡಿತ್ತು. ಮತ್ತೊಂದು ವರ್ಷ ದೇಶಭಕ್ತಿ ಮೂಡಿಸುವ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಹಾಕಲಾಗಿತ್ತು. 2008ರಿಂದ ಸಮಿತಿಯು ಅತಿ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಿತು. ಹೀಗಾಗಿ ಇದು ಹುಬ್ಬಳ್ಳಿ ಕಾ ರಾಜಾ ಎಂದು ಪ್ರಸಿದ್ಧಿ ಪಡೆಯಿತು.

ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿ  ಪ್ರತಿಷ್ಠಾಪನೆಯಾಗಲಿರುವ ಹುಬ್ಬಳ್ಳಿ ಕಾ ರಾಜಾ
ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿ 1975ರಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ

ಎಂದಿನಂತೆ ಪ್ರತಿ ವರ್ಷ 5ನೇ ದಿನದಿಂದ 11ನೇ ದಿನದವರೆಗೆ ಪ್ರಸಾದ ವ್ಯವಸ್ಥೆ ಇರಲಿದೆ. ಉತ್ಸವ ವಿಶಿಷ್ಟವಾಗಿ ಇರಲಿದೆ.

ಬಾಸ್ಕರ ಜಿತೂರಿ ಮಾಜಿ ಅಧ್ಯಕ್ಷ ಶ್ರೀಗಜಾನನ ಉತ್ಸವ ಸಮಿತಿ

ಮೊದಲ ಬಾರಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಕಾ ರಾಜಾ ಗಣೇಶ ಮೂರ್ತಿ ಸಿದ್ಧವಾಗಿದೆ. ಶೇ 100ರಷ್ಟು ಪರಿಸರ ಸ್ನೇಹಿ ಗಣೇಶ.

ರಾಕೇಶ ಬೆಂಗಳೂರಿನ ಗಣೇಶ ಮೂರ್ತಿ ತಯಾರಕರು

27 ಕೆಜಿ ಬೆಳ್ಳಿ ಉಡುಗೊರೆ

‘ಹುಬ್ಬಳ್ಳಿ ಕಾ ರಾಜಾ’ ಗಣಪತಿ ಮೂರ್ತಿಗೆ ಭಕ್ತರು ಈ ವರ್ಷ 27 ಕೆಜಿ ಬೆಳ್ಳಿ ಆಭರಣ ಕೊಡುಗೆಯಾಗಿ ನೀಡಿದ್ದಾರೆ. ಬೆಳ್ಳಿಯ 4 ಕೆಜಿಯ ಸೊಂಟದ ಪಟ್ಟಿ ಹಸ್ತ ಪಾದರಕ್ಷೆ ಸೊಂಡಿಲು ಪಟ್ಟಿ ದಂತ ಕಿವಿಯೋಲೆ ತ್ರಿಶೂಲ ಸ್ವಸ್ತಿಕ್ ಓಂ ಕಿರಿಟ್ ಸೇರಿ ವಿವಿಧ ಆಭರಣಗಳಿವೆ. 2025ರಲ್ಲಿ ಹೊಸದಾಗಿ 7 ಕೆಜಿ ಬೆಳ್ಳಿ ಗದೆ ಮಾಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.