ADVERTISEMENT

ಹಳೇಹುಬ್ಬಳ್ಳಿ: ಗಣೇಶಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 7:17 IST
Last Updated 28 ಸೆಪ್ಟೆಂಬರ್ 2023, 7:17 IST
ಹುಬ್ಬಳ್ಳಿ ಬಮ್ಮಾಪುರ ಓಣಿಯಲ್ಲಿ ಬುಧವಾರ ಗಣೇಶ ಮೆರವಣಿಗೆ ಹಾಗೂ ಸಂದಲ್‌ ಮೆರವಣಿಗೆ ಪರಸ್ಪರ ಎದುರಾಗಿದ್ದು, ಹಿಂದೂ–ಮುಸ್ಲಿಂ ಸಮುದಾಯದವರು ಶುಭಾಶಯ ವಿನಿಮಯ ಮಾಡಿಕೊಂಡರು
ಹುಬ್ಬಳ್ಳಿ ಬಮ್ಮಾಪುರ ಓಣಿಯಲ್ಲಿ ಬುಧವಾರ ಗಣೇಶ ಮೆರವಣಿಗೆ ಹಾಗೂ ಸಂದಲ್‌ ಮೆರವಣಿಗೆ ಪರಸ್ಪರ ಎದುರಾಗಿದ್ದು, ಹಿಂದೂ–ಮುಸ್ಲಿಂ ಸಮುದಾಯದವರು ಶುಭಾಶಯ ವಿನಿಮಯ ಮಾಡಿಕೊಂಡರು   

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ಬುಧವಾರ ತಡರಾತ್ರಿವರೆಗೂ ವಿಜೃಂಭಣೆಯಿಂದ ನಡೆಯಿತು.

ವಿವಿಧ ಗಣೇಶೋತ್ಸವ ಸಮಿತಿಗಳು ಡೋಲು, ಪಂಚವಾದ್ಯದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ನಡೆಸಿದವು. ಡಿಜೆ ಹಾಡಿಗೆ ಯುವಕರು, ಮಕ್ಕಳು ಕುಣಿದು ಕುಪ್ಪಳಿಸಿದರು. ಮನೆ ಎದುರು ಮೆರವಣಿಗೆ ಸಾಗುವಾಗ ಮಹಿಳೆಯರು ಕೈಮುಗಿದು ನಮಿಸಿದರು. ಮೆರವಣಿಗೆ ಮಾರ್ಗದುದ್ದಕ್ಕೂ ಪಟಾಕಿ, ಸಿಡಿಮದ್ದುಗಳ ಅಬ್ಬರ ಜೋರಾಗಿತ್ತು.

ನೂರಕ್ಕೂ ಹೆಚ್ಚು ಸಾರ್ವಜನಿಕ ಗಣೇಶಮೂರ್ತಿಗಳನ್ನು ಹೊಸೂರಿನ ಬಾವಿ ಹಾಗೂ ಇಂದಿರಾ ಗಾಜಿನ ಮನೆ ಹಿಂಭಾಗದ ಗಣೇಶ ಬಾವಿಯಲ್ಲಿ ಧಾರ್ಮಿಕ ವಿಧಿ–ವಿಧಾನದ ಮೂಲಕ ವಿಸರ್ಜಿಸಲಾಯಿತು. 200ಕ್ಕೂ ಹೆಚ್ಚು ಗಣೇಶಮೂರ್ತಿಗಳು ವಿಸರ್ಜನೆಯಾದವು. ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ADVERTISEMENT

ಮೆರವಣಿಗೆಗೆ ಅಬ್ಬಯ್ಯ ಚಾಲನೆ

ಇದಕ್ಕೂ ಪೂರ್ವ ಹಳೇಹುಬ್ಬಳ್ಳಿ ದುರ್ಗದಬೈಲ್‌ನಲ್ಲಿ ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಏರ್ಪಡಿಸಿದ್ದ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಗಣೇಶ ಹಬ್ಬ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿ ಆಚರಣೆ ಮಾಡುವುದಿಲ್ಲ. ಎಲ್ಲ ಜಾತಿ, ಧರ್ಮ, ಜನಾಂಗದವರು ಸೇರಿ ಜಾತ್ಯತೀತವಾಗಿ ಆಚರಿಸುವ ಭಾವೈಕ್ಯ ಹಬ್ಬ. ಹುಬ್ಬಳ್ಳಿ ಜನತೆಯ ಸೌಹಾರ್ದತೆಗೆ ಈ ಹಬ್ಬ ಸಾಕ್ಷಿಯಾಗಿದೆ. ಇದು ಎಲ್ಲರಲ್ಲೂ ಏಕತಾ ಮನೋಭಾವನೆ ಮೂಡಿಸಿ, ಅವಳಿನಗರ ಅಭಿವೃದ್ಧಿಗೆ ಸಹಕಾರಿಯಾಗಿದೆ’ ಎಂದರು.

‘ದೇಶದ ಸಾಂಸ್ಕೃತಿಕ, ಧಾರ್ಮಿಕ, ಸಹೋದರತ್ವದ ಭಾವ ಇಮ್ಮಡಿಗೊಳಿಸಲು ಗಣೇಶ ಹಬ್ಬ ಪೂರಕವಾಗಿದೆ. ಎಲ್ಲ ಹಬ್ಬಗಳನ್ನು ಧರ್ಮಾತೀತವಾಗಿ ಆಚರಿಸುವುದರಿಂದ ದೇಶಾಭಿಮಾನ ಮತ್ತಷ್ಟು ಬೆಳೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಅಶೋಕ ಕಾಟವೆ, ಅಲ್ತಾಫ್ ಹಳ್ಳೂರ, ರಾಧಾಬಾಯಿ ಸಫಾರೆ, ಮಹ್ಮದ್‌ಇಕ್ಬಾಲ್‌ ನವಲೂರ, ಅಲ್ತಾಫ್‌ ಕಿತ್ತೂರು, ಅನಿಲ ಕವಿಶೆಟ್ಟಿ, ಸುಮಿತ್ರಾ ಗುಂಜಾಳ, ಶೀಲಾ ಕಾಟಕರ, ಎಸ್.ಎಸ್. ಸಾಲಿಮಠ, ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ರೋಹನ ಗೊಂದಕರ, ಅನಿಲ ಬೇವಿನಕಟ್ಟಿ ಇದ್ದರು.

ಶುಭಾಶಯ ವಿನಿಮಯ

ಬಮ್ಮಾಪುರ ಓಣಿಯ ಗರಡಿ ಮನೆಯ ವಿಘ್ನೇಶ್ವರ ಉತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಪಿ.ಬಿ. ರಸ್ತೆಯ ಹಜರತ್‌ ಸೈಯ್ಯದ್‌ ಸಾದತ್‌ ದರ್ಗಾದ ಸಂದಲ್‌ ಮೆರವಣಿಗೆ ಎದುರಾಯಿತು. ಹಿಂದೂ–ಮುಸ್ಲಿಂ ಸಮುದಾಯದವರು ಪರಸ್ಪರ ಎದುರಾಗಿ ಶುಭಕೋರಿ ಮುಂದೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.