
ಹುಬ್ಬಳ್ಳಿ: ಶಿವರಾತ್ರಿ ಪ್ರಯುಕ್ತ ಭಾನುವಾರ ನಗರದ ಸಿದ್ಧಾರೂಢಮಠ, ಮೂರುಸಾವಿರಮಠ ಸೇರಿದಂತೆ ಶಿವ ಮಂದಿರಗಳಲ್ಲಿ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ತಡರಾತ್ರಿವರೆಗೂ ಭಕ್ತರು ತಂಡೋಪ ತಂಡವಾಗಿ ಹರಿದು ಬಂದರು.
ಸಿದ್ಧಾರೂಢ ಮಠವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಿದ್ಧಾರೂಢರ ಮತ್ತು ಗುರುನಾಥರೂಢರ ಗದ್ದುಗೆಯನ್ನು ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಗದ್ದುಗೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿಯಿಡೀ ಮಠದಲ್ಲಿ ಭಜನೆ, ಸಂಗೀತ ಆಲಿಸುತ್ತ ಜಾಗರಣೆ ಕೂತು ಉಪವಾಸ ಮಾಡಿದರು.
ಧಾರವಾಡ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಬಂದಿದ್ದರು. ವಿದೇಶದಲ್ಲಿ ನೆಲೆಸಿದ್ದ ಕೆಲವು ಭಕ್ತರು ಸಹ ಬಂದು, ಸರತಿ ಸಾಲಲ್ಲಿ ನಿಂತು ದರ್ಶನ ಪಡೆದರು. ವಿವಿಧ ಭಾಗಗಳಿಂದ ಬಂದ ರೈತರು ಹಾಗೂ ಸಂಘ–ಸಂಸ್ಥೆಯ ಸದಸ್ಯರು ಭಕ್ತರಿಗೆ ಮಠದ ಆವರಣದಲ್ಲಿ ಪ್ರಸಾದ ವಿತರಿಸಿದರು. ಮಠಕ್ಕೆ ಬರುವ ಮಾರ್ಗದುದ್ದಕ್ಕೂ ಕುಡಿಯುವ ನೀರು, ಮಜ್ಜಿಗೆ, ಶರಬತ್ ಹಾಗೂ ಹಣ್ಣುಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಸೋಮವಾರ ನಡೆಯಲಿರುವ ಸಿದ್ಧಾರೂಢ ರಥೋತ್ಸವದ ಪೂರ್ವ ಸಿದ್ಧತೆಯಾಗಿ, ಭಾನುವಾರ ರಥಕ್ಕೆ ಕಳಸ ಅಳವಡಿಸಲಾಯಿತು. ಧಾರವಾಡ ಜಿಲ್ಲೆ ಸೇರಿದಂತೆ ಬೆಳಗಾವಿ, ಗದಗ, ಹಾವೇರಿ, ವಿಜಯಪುರ, ಕೊಪ್ಪಳ ಜಿಲ್ಲೆಗಳಿಂದಲೂ ಭಕ್ತರು ಪಾದಯಾತ್ರೆ ಮೂಲಕ ಬಂದಿದ್ದು, ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಭಕ್ತರಿಂದ ಅಭಿಷೇಕ: ಕೆಲವು ಭಕ್ತರು ಬೆಳಿಗ್ಗೆಯೇ ಮನೆ ಎದುರು ರಂಗೋಲಿ ಬಿಡಿಸಿ, ಉಪವಾಸ ವೃತ ಕೈಗೊಂಡರು. ಪೂಜೆ ನೆರವೇರಿಸಿ, ಶಿವಮಂದಿರಕ್ಕೆ ತೆರಳಿ ಹಣ್ಣು–ಹಂಪಲ ನೈವೇದ್ಯ ಮಾಡಿದರು. ವಿದ್ಯಾನಗರದ ಶಿವಕೃಷ್ಣ ಮಂದಿರ, ವಿಶ್ವೇಶ್ವರನಗರದ ವಿಶ್ವನಾಥ ದೇವಸ್ಥಾನ, ಸ್ಟೇಷನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನಗಳಲ್ಲಿ ಭಕ್ತರಿಂದಲೇ ರುದ್ರಾಭಿಷೇಕ, ನಾರಿಕೇಳಾಭಿಷೇಕ, ಹಾಲಿನ ಅಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಭಕ್ತರು ಕುಟುಂಬ ಸಮೇತರಾಗಿ ಬಂದು ಸುಡುವ ಬಿಸಿಲನ್ನು ಲೆಕ್ಕಿಸದೆ, ಮೂರು–ನಾಲ್ಕು ತಾಸು ಸರತಿ ಸಾಕಿನಲ್ಲಿ ನಿಂತು ಅಭಿಷೇಕ ಮಾಡಿದರು.
ವಿವಿಧ ಮಂದಿರಗಳಲ್ಲಿ ಶಿವಾಷ್ಟೋತ್ತರ ಶತನಾಮಾವಳಿ, ಲಕ್ಷ ಬಿಲ್ವಾರ್ಚನೆ, ದೀಪೋತ್ಸವ ನಡೆದವು. ‘ಓಂ ನಮಃ ಶಿವಾಯ’ ಸ್ಮರಣೆ ನಿರಂತರವಾಗಿ ಅನುರಣಿಸುತ್ತಿತ್ತು. ಶಿವ ಮಂದಿರಗಳಿಗೆ ತೆರಳುವ ಭಕ್ತರಿಗೆ ಉತ್ತರ ಕರ್ನಾಟಕ ಆಟೊ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೊ ರಿಕ್ಷಾ ಮಾಲಕರ ಚಾಲಕರ ಸಂಘದ ಸದಸ್ಯರು ನಗರದ ರೈಲ್ವೆ ಸ್ಟೇಷನ್ ಮುಂಭಾಗ, ಚನ್ನಮ್ಮ ವೃತ್ತ, ಇಂಡಿಪಂಪ್ ಬಳಿ ಉಪಹಾರ ವ್ಯವಸ್ಥೆ ಮಾಡಿದ್ದರು.
ಸಿಂಗಾರಗೊಂಡ ದೇಗುಲ: ಶಿವರಾತ್ರಿ ಪ್ರಯುಕ್ತ ನಗರದಲ್ಲಿರುವ ಎಲ್ಲ ಶಿವ ಮಂದಿರಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕೆಲವು ಕಡೆ ಮಾವಿನ ತಳಿರು ಹಗೂ ಅಡಿಕೆಗಳಿಂದ ತೋರಣ ಮಾಡಿ, ಸಿಂಗರಿಸಲಾಗಿತ್ತು. ದೀವಟೆಗಲ್ಲಿಯ ಈಶ್ವರ ದೇವಸ್ಥಾನ, ಉಣಕಲ್‌ನ ರಾಮಲಿಂಗೇಶ್ವರ ದೇವಸ್ಥಾನ, ಕೇಶ್ವಾಪುರದ ಪಾರಸ್ವಾಡಿ ಶಿವ ದೇವಸ್ಥಾನ, ಉಣಕಲ್‌ನ ಚಂದ್ರಮೌಳೇಶ್ವರ ದೇವಸ್ಥಾನ, ಹಳೇಹುಬ್ಬಳ್ಳಿ ಈಶ್ವರ ದೇವಸ್ಥಾನ, ನೇಕಾರ ನಗರದ ನೀಲಕಂಠೇಶ್ವರ ದೇವಸ್ಥಾನ, ಶಿವಪುರ ಕಾಲೊನಿಯ ಶಿವಮಂದಿರಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಭಕ್ತರ ಸಾಲು ಕಂಡುಬಂದಿತು.
ಸೋಮವಾರ ನಡೆಯಲಿರುವ ಸಿದ್ಧಾರೂಢರ ರಥೋತ್ಸವಕ್ಕೆ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯು ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ‘ಪಾಲಕರ ಅಜಾಗರೂಕತೆಯಿಂದ ಮಕ್ಕಳು ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದು ಜಾಗೃತೆಯಿಂದ ಇರಬೇಕು. ಮಕ್ಕಳು ತಪ್ಪಿಸಿಕೊಂಡರೆ ನಿಂತ ಜಾಗ ಬದಲಿಸದಂತೆ ಅಪರಿಚಿತ ವ್ಯಕ್ತಿಯ ಜೊತೆ ಹೋಗದಂತೆ ಪೋಷಕರ ದುರವಾಣಿ ಸಂಖ್ಯೆ ನೆನಪಲ್ಲಿ ಇಟ್ಟುಕೊಳ್ಳುವಂತೆ ಹಾಗೂ ಸ್ಥಳದಲ್ಲಿರುವ ಪೊಲೀಸ್ ಸಿಬ್ಬಂದಿಯ ಸಹಾಯ ಕೇಳುವಂತೆ ಜಾಗೃತರನ್ನಾಗಿಸಬೇಕು. ಪೋಷಕರು 112 ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.