ಬಸ್
– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ 2–3 ಪಟ್ಟು ಹೆಚ್ಚಳವಾಗಿದೆ. ಕೆಲ ಮಾರ್ಗಗಳಲ್ಲಿ ದರ ಅದಕ್ಕಿಂತಲೂ ಹೆಚ್ಚಾಗಿದ್ದು, ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿವೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಮಾನ್ಯ ದಿನಗಳಲ್ಲಿ ಎ.ಸಿ ಸಹಿತ ಪ್ರಯಾಣಕ್ಕೆ ₹700 ರಿಂದ ₹800 ಇದೆ. ಆದರೆ, ಅ.16ರಿಂದ 20ರವರೆಗೆ ಪ್ರಮುಖ ನಗರಗಳಿಂದ ಬಸ್ ಪ್ರಯಾಣ ದರವನ್ನು ₹4,500 ರವರೆಗೆ ಏರಿಸಲಾಗಿದೆ. ₹600 ರಿಂದ ₹700 ಇದ್ದ ಎಸಿ ರಹಿತ ಪ್ರಯಾಣದ ದರ ₹3,000ಕ್ಕೆ ಏರಿಕೆಯಾಗಿದೆ.
ಹುಬ್ಬಳ್ಳಿ, ಮಂಗಳೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಕಾರವಾರ ಸೇರಿ ಪ್ರಮುಖ ಸ್ಥಳಗಳಿಗೆ ತೀವ್ರ ಏರಿಕೆ ಆಗಿದೆ. ಮುಂಗಡ ಟಿಕೆಟ್ ಕಾಯ್ದಿರಿಸಲು ಮುಂದಾದವರಿಗೆ ದರ ಹೆಚ್ಚಳದ ಬಿಸಿ ಎದುರಾಗಿದೆ.
‘ಬೆಂಗಳೂರಿನಿಂದ ಬೆಳಗಾವಿಗೆ ಖಾಸಗಿ ಎ.ಸಿ ಬಸ್ ದರ ₹750 ಇದೆ. ಅ. 17ರಂದು ಅದೇ ಬಸ್ ದರ, ₹2,750 ತೋರಿಸುತ್ತದೆ. ಕೆಲವು ಬಸ್‌ಗಳ ದರ ಕಡಿಮೆ ತೋರಿಸಿ, ಈಗಾಗಲೇ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ ಎಂದು ತೋರಿಸುತ್ತಿದ್ದಾರೆ’ ಎಂದು ಬೆಂಗಳೂರಿನಲ್ಲಿ ನೆಲೆಸಿರುವ ಶರಣಪ್ಪ ಪಾಟೀಲ ಬೇಸರ ವ್ಯಕ್ತಪಡಿಸಿದರು.
‘ಪ್ರತಿವರ್ಷವೂ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳವರು ಬೇಕಾಬಿಟ್ಟಿಯಾಗಿ ದರ ಹೆಚ್ಚಿಸುತ್ತಾರೆ. ಸರ್ಕಾರ ಕಾಟಾಚಾರಕ್ಕೆ ಎಚ್ಚರಿಕೆ ನೀಡುತ್ತಿದೆ. ದರ ಹೆಚ್ಚಳ ಕಂಡರೂ ಕ್ರಮಗಳು ಆಗುತ್ತಿಲ್ಲ. ಅನುಮತಿಯಿಲ್ಲದ ಮಾರ್ಗಗಳಲ್ಲೂ ಖಾಸಗಿ ಬಸ್‌ಗಳನ್ನು ರಾಜಾರೋಷವಾಗಿ ಓಡಿಸಿ, ಹಗಲು ದರೋಡೆ ಮಾಡುತ್ತಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ ಕಂದಗಲ್ ಹೇಳಿದರು.
‘ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್‌ಗಳನ್ನು ಎಲ್ಲಾ ಮಾರ್ಗಗಳಲ್ಲೂ ಓಡಿಸುತ್ತಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ, ಆಯಾಯ ಮಾರ್ಗಗಳಲ್ಲಿ ಬಸ್ ಸಂಚರಿಸಲಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.