
ಹುಬ್ಬಳ್ಳಿ: ಅನ್ಯ ಜಾತಿಯ ಹುಡುಗನ ಜೊತೆ ಮಗಳು ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ಪಾಲಕರು, ಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದೂ ಅಲ್ಲದೆ, ಹುಡುಗನ ಕುಟುಂಬದವರ ಮೇಲೂ ಹಲ್ಲೆ ನಡೆಸಿರುವ ಪ್ರಕರಣ ತಾಲ್ಲೂಕಿನ ಬೆಳಗಲಿಯ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದ ಆರು ತಿಂಗಳ ಗರ್ಭಿಣಿ ಮಾನ್ಯಾ ದೊಡ್ಡಮನಿ (19) ಅವರನ್ನು ಚಿಕಿತ್ಸೆಗಾಗಿ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮಾನ್ಯಾ ಹಾಗೂ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹುಡುಗನ ತಾಯಿ ರೇಣವ್ವ ಹಾಗೂ ದೊಡ್ಡಪ್ಪ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಡಿವೈಎಸ್‌ಪಿ ಕಟಗಿ, ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಗಾಯಾಳುಗಳ ಮಾಹಿತಿ ಪಡೆದರು. ಆಸ್ಪತ್ರೆ ಸುತ್ತ ಹಾಗೂ ಇನಾಂ ವಿರಾಪುರ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಗುಂಜನ್ ಆರ್ಯ, ‘ಪ್ರಕರಣಕ್ಕೆ ಸಂಬಂಧಿಸಿ ಪ್ರಕಾಶಗೌಡ ಪಾಟೀಲ, ವೀರನಗೌಡ ಪಾಟೀಲ ಮತ್ತು ಅರುಣಗೌಡ ಪಾಟೀಲ ಅವರನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಏಳು–ಎಂಟು ಮಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮಾನ್ಯಾ ಮೃತಪಟ್ಟಿದ್ದು, ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.
‘ಕಳೆದ ಮೇ ತಿಂಗಳಲ್ಲಿ ಮಾನ್ಯಾ ಪಾಟೀಲ ಅವರು, ತನ್ನದೇ ಗ್ರಾಮದ ಅನ್ಯ ಜಾತಿಯ ಹುಡುಗನೊಂದಿಗೆ ಮದುವೆಯಾಗಿದ್ದರು. ಅದಕ್ಕೆ ಅವರ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಯಾವ ಕಾರಣಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ತನಿಖೆ ನಂತರವೇ ತಿಳಿದು ಬರಲಿದೆ’ ಎಂದು ತಿಳಿಸಿದರು.
ಏನಿದು ಪ್ರಕರಣ: ಎಂಟು ತಿಂಗಳ ಹಿಂದೆ ಯುವತಿ ಮಾನ್ಯಾ, ತನ್ನದೇ ಗ್ರಾಮದ ಅನ್ಯ ಜಾತಿಯ ಯುವಕ ವಿವೇಕಾನಂದ ದೊಡ್ಡಮನಿ ಅವರ ಜೊತೆ ಮದುವೆಯಾಗಿದ್ದರು. ಯುವತಿ ಕುಟುಂಬದವರು ವಿರೋಧಿಸಿದ್ದಕ್ಕೆ ತಹಶೀಲ್ದಾರ್ ಹಾಗೂ ಪೊಲೀಸರು ಎರಡು ಕುಟುಂಬದವರನ್ನು ಕರೆಸಿ ಬುದ್ಧಿ ಹೇಳಿ, ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಿದ್ದರು. ನಂತರ ಪ್ರಾಣ ಭಯದಿಂದ ದಂಪತಿ ಹಾವೇರಿಗೆ ಹೋಗಿ ವಾಸವಿದ್ದರು.
‘ಡಿ. 8ರಂದು ಇನಾಂ ವೀರಾಪುರಕ್ಕೆ ದಂಪತಿ ಮರಳಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಅವರ ತಂದೆ ಮೇಲೆ ಭಾನುವಾರ ಯುವತಿಯ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ನಂತರ ಅವರ ಮನೆಗೆ ತೆರಳಿ ಮಾನ್ಯಾ, ರೇಣವ್ವ ಹಾಗೂ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ’ ಎಂದು ಕರ್ನಾಟಕ ದಲಿತಾ ವಿಮೋಚನ ಸಮಿತಿಯ ಶ್ರೀಧರ ಕಂದಗಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.