
ಹುಬ್ಬಳ್ಳಿ ನಗರದ ಕೇಶ್ವಾಪುರ ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: 'ಬಿಜೆಪಿ ಕಾರ್ಯಕರ್ತೆ ಸುಜಾತಾ ಅವರನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಲಾಗಿದೆ' ಎಂದು ಆರೋಪಿಸಿ ಹು-ಧಾ ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಕೇಶ್ವಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಮಹಿಳೆಯನ್ನು ಅವಮಾನಿಸಿದ ಠಾಣಾಧಿಕಾರಿ ಕೆ.ಎಸ್. ಹಟ್ಟಿ ಹಾಗೂ ಅದರಲ್ಲಿ ಭಾಗಿಯಾಗಿರುವ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಕಾರಣರಾದ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲಕುಂಟ್ಲ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮೇಯರ್ ಜ್ಯೋತಿ ಪಾಟೀಲ ಮತ್ತು ಉಪಮೇಯರ್ ಸಂತೋಷ ಚವ್ಹಾಣ್ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಡಿಸಿಪಿ ಮಹಾನಿಂಗ ನಂದಗಾವಿ ಮನವೊಲಿಸಲು ಸಾಕಷ್ಟು ಯತ್ನಿಸಿದರೂ, ಕಾರ್ಯಕರ್ತರ ವಾಗ್ವಾದ ಜೋರಾಗಿತ್ತು.
ಪರಿಸ್ಥಿತಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕಮಿಷನರ್ ಸ್ಥಳಕ್ಕೆ ಬಂದು, ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ಮೇಯರ್, ಉಪಮೇಯರ್ ಅವರನ್ನು ಮಾತ್ರ ಒಳಗೆ ಕರೆದು ಚರ್ಚಿಸಲು ಮುಂದಾದರು. ಆಗ ಇಬ್ಬರು ಪೊಲೀಸರು ಮೇಯರ್ ಹಾಗೂ ಉಪಮೇಯರ್ ಅವರನ್ನು ಠಾಣೆ ಪ್ರವೇಶಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮೇಯರ್, ಉಪಮೇಯರ್ ಠಾಣೆ ಮೆಟ್ಟಿಲಿನ ಮೇಲೆ ಕೂತು ಧರಣಿ ನಡೆಸಿದರು.
'ಮಹಿಳೆಗೆ ಆದ ಅನ್ಯಾಯದ ಕುರಿತು ನ್ಯಾಯ ಕೇಳಲು ಬಂದ ಮಹಿಳೆಯರನ್ನು ಅಪರಾಧಿಯ ಹಾಗೆ ನೋಡುತ್ತಿರುವುದು ಅಕ್ಷಮ್ಯ. ಸ್ವತಃ ಮೇಯರ್, ಉಪಮೇಯರ್ ಬಂದರೂ ಠಾಣೆ ಪ್ರವೇಶಿಸಲು ಅವಕಾಶ ನೀಡದೆ, ಅಡ್ಡಗಟ್ಟಿದ್ದು ಕಾನೂನು ಉಲ್ಲಂಘನೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ತಿಳಿಸುತ್ತೇನೆ' ಎಂದು ಮೇಯರ್ ಜ್ಯೋತಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮೇಯರ್, ಉಪಮೇಯರ್ ಜೊತೆ ಠಾಣೆಯಲ್ಲಿ ಚರ್ಚಿಸುತ್ತಿದ್ದು, ಹೊರಗಡೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ. ಠಾಣೆ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.