ADVERTISEMENT

ಹುಬ್ಬಳ್ಳಿ | ಟಿಕೆಟ್‌ ಗಿಟ್ಟಿಸಲು ತೆರೆಮರೆಯಲ್ಲಿ ಕಸರತ್ತು

ಸತೀಶ ಬಿ.
Published 26 ನವೆಂಬರ್ 2025, 5:34 IST
Last Updated 26 ನವೆಂಬರ್ 2025, 5:34 IST
ಮೋಹನ ಲಿಂಬಿಕಾಯಿ
ಮೋಹನ ಲಿಂಬಿಕಾಯಿ   

ಹುಬ್ಬಳ್ಳಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಸಿದ್ಧತೆ ಆರಂಭವಾಗಿದ್ದು, ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಹಲವು ಮುಖಂಡರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಮತದಾರರ ನೋಂದಣಿ ಮಾಡಿಸಲು ಆದ್ಯತೆ ನೀಡಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರ ಸದ್ಯ ಬಿಜೆಪಿ ತೆಕ್ಕೆಯಲ್ಲಿದೆ. 18 ವರ್ಷಗಳ ಬಳಿಕ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ.

ಈ ಬಾರಿ ಈ ಕ್ಷೇತ್ರದಿಂದ ‘ಹೊಸ ಮುಖ’ಕ್ಕೆ ಅವಕಾಶ ನೀಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಪಕ್ಷದ ವರಿಷ್ಠರು ಈಗಾಗಲೇ ಎಲ್ಲ ಆಕಾಂಕ್ಷಿಗಳು, ಕ್ಷೇತ್ರದ ವ್ಯಾಪ್ತಿಯ ಶಾಸಕರು, ಮುಖಂಡರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. 

ADVERTISEMENT

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಎಸ್.ವಿ.ಸಂಕನೂರ ಎದುರು ಪರಾಭವಗೊಂಡಿದ್ದ ಡಾ.ಆರ್.ಎಂ.ಕುಬೇರಪ್ಪ ಮತ್ತೊಮ್ಮೆ ಟಿಕೆಟ್‌ ಆಕಾಂಕ್ಷಿಯಾಗಿದ್ಧಾರೆ. ಅವರು 12,448 ಮತ ಗಳಿಸಿದ್ದರು. ಈ ಹಿಂದೆ ಅವರು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಎರಡು ಬಾರಿ ಬಿಜೆಪಿ, ಒಂದು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.  ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಮತ್ತು ಪದವೀಧರರ ಘಟಕದ ನಿಕಟಪೂರ್ವ ಅಧ್ಯಕ್ಷರಾಗಿದ್ಧಾರೆ. 

ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದ ಎಚ್‌.ಕೆ.ಪಾಟೀಲ ಅವರನ್ನು ಪರಾಭವಗೊಳಿಸಿ ಬಿಜೆಪಿಗೆ ಜಯ ತಂದುಕೊಟ್ಟಿದ್ದ ಮೋಹನ ಲಿಂಬಿಕಾಯಿ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ‌ಬಿಜೆಪಿ ತೊರೆದು ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಅವರು ಸಹ ಇನ್ನೊಮ್ಮೆ ಸ್ಪರ್ಧೆಗಿಳಿಯಲು ಉತ್ಸುಕರಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಬಸವರಾಜ ಗುರಿಕಾರ ಅವರು ಈ ಬಾರಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಅವರು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಸವರಾಜ ಹೊರಟ್ಟಿ ಎದುರು ಸೋಲು ಕಂಡಿದ್ದರು.

ಕೆಪಿಸಿಸಿ ಉಪಾಧ್ಯಕ್ಷ ಮೋಹನ ಲಿಂಬಿಕಾಯಿ ಪ್ರತಿಕ್ರಿಯಿಸಿ, ‘ನನಗೆ ಈ ಕ್ಷೇತ್ರದ ಪರಿಚಯ ಇದೆ. ಕಾನೂನು ಕಾಲೇಜಿನಲ್ಲಿ 16 ವರ್ಷ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದು, ಎಲ್ಲ ಕಡೆ ನನ್ನ ವಿದ್ಯಾರ್ಥಿಗಳಿದ್ಧಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಒಂದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ್ದೇನೆ. ಮೂರು ಅವಧಿಯಿಂದ ಈ ಕ್ಷೇತ್ರದಲ್ಲಿ ಪಕ್ಷ ಗೆದ್ದಿಲ್ಲ. ಗೆಲುವುದು ತಂದು ಕೊಡುವುದು ನನ್ನ ಗುರಿ’ ಎಂದರು.

ಆರ್‌.ಎಂ.ಕುಬೇರಪ್ಪ, ‘ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗ ಶಿಕ್ಷಕರು, ಪದವೀಧರರ ವಿಭಾಗದ ಅಧ್ಯಕ್ಷನಾಗಿ ಸಂಘಟನೆ ಮಾಡಿದ್ಧೇನೆ. ನಾನು ಪಕ್ಷದ ಹಿರಿಯ ಕಾರ್ಯಕರ್ತ. ಈ ಬಾರಿ ಮತ್ತೊಮ್ಮೆ ಅವಕಾಶ ನೀಡುವಂತೆ ಕೇಳಿದ್ದೇನೆ. ಟಿಕೆಟ್ ನೀಡುವ ವಿಶ್ವಾಸ ಇದೆ’ ಎಂದು ಹೇಳಿದರು.  

‘ಕ್ಷೇತ್ರದ ನಾಲ್ಕೂ ಜಿಲ್ಲೆಗಳ ಕಾರ್ಯಕರ್ತರೊಂದಿಗೆ ಅವಿನಾಭಾವ ಸಂಬಂಧವಿದೆ. ಕಳೆದ ಮೂರು ದಶಕಗಳಿಂದ ಪಕ್ಷ ಸಂಘಟನೆಯಲ್ಲಿದ್ದೇನೆ. ರಾಜ್ಯ ಯುವ ಕಾಂಗ್ರೆಸ್‌, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸ ಗುರುತಿಸಿ ಟಿಕೆಟ್ ನೀಡುವ ವಿಶ್ವಾಸ ಇದೆ’ ಎನ್ನುತ್ತಾರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ. 

ಆರ್.ಎಂ.ಕುಬೇರಪ್ಪ
ಬಸವರಾಜ ಗುರಿಕಾರ 
ರಾಘವೇಂದ್ರ ಬಾಸೂರ
ಸದಾನಂದ ಡಂಗನವರ

ಪ್ರಮುಖ ಆಕಾಂಕ್ಷಿಗಳು ಸಿದ್ಧಪ್ಪ ಭಂಡಿ (ಗದಗ), ಸಲೀಂ ಸೋನೆಖಾನ್ (ಹು–ಧಾ), ರವಿ ಮಾಳಿಗೇರ (ಹು–ಧಾ), ಮೋಹನ್ ಲಿಂಬಿಕಾಯಿ (ಹು–ಧಾ), ಸದಾನಂದ ಡಂಗನವರ (ಹು–ಧಾ), ಬಸವರಾಜ ಗುರಿಕಾರ (ಹು–ಧಾ), ದೇವಿಕಾ ಬಸವರಾಜ (ಹು–ಧಾ), ಶರಣಪ್ಪ ಕೊಟಗಿ (ಹು–ಧಾ) ಆರ್‌.ಎಂ.ಕುಬೇರಪ್ಪ (ಹಾವೇರಿ), ರಾಘವೇಂದ್ರ ಬಾಸೂರ (ಹಾವೇರಿ), ರಾಜು ಕುನ್ನೂರ (ಹಾವೇರಿ), ರಾಜೇಶ್ವರಿ ಪಾಟೀಲ (ಹಾವೇರಿ).

ಕ್ಷೇತ್ರ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಆಕಾಂಕ್ಷಿಗಳು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ
ಅಲ್ತಾಫ್ ಹಳ್ಳೂರ ಅಧ್ಯಕ್ಷ ಹು–ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.