ADVERTISEMENT

ಹುಬ್ಬಳ್ಳಿ | ಶಿಕ್ಷಣದಿಂದ ದೇಶದ ಪ್ರಗತಿ: ಶಾಸಕ ಅಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 15:17 IST
Last Updated 9 ಫೆಬ್ರುವರಿ 2025, 15:17 IST
ಹಳೇ ಹುಬ್ಬಳ್ಳಿಯ ಇಂಡಿಪಂಪ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ–19 ರಲ್ಲಿ   ಭಾನುವಾರ ಏರ್ಪಡಿಸಿದ್ದ ಶಾಲೆಯ ‘ಶತಮಾನೋತ್ತರ ಸಂಭ್ರಮಾಚರಣೆ’ ಕಾರ್ಯಕ್ರಮದಲ್ಲಿ ಗಣ್ಯರು ಸ್ಮರಣಸಂಚಿಕೆ ಬಿಡುಗಡೆ ಮಾಡಿದರು
ಹಳೇ ಹುಬ್ಬಳ್ಳಿಯ ಇಂಡಿಪಂಪ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ–19 ರಲ್ಲಿ   ಭಾನುವಾರ ಏರ್ಪಡಿಸಿದ್ದ ಶಾಲೆಯ ‘ಶತಮಾನೋತ್ತರ ಸಂಭ್ರಮಾಚರಣೆ’ ಕಾರ್ಯಕ್ರಮದಲ್ಲಿ ಗಣ್ಯರು ಸ್ಮರಣಸಂಚಿಕೆ ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಹೀಗಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಅನಕ್ಷರತೆ ಪ್ರಮಾಣ ಇಂದು ಕಡಿಮೆಯಾಗಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹಳೇ ಹುಬ್ಬಳ್ಳಿಯ ಇಂಡಿಪಂಪ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ನಂ.19) ಆರಂಭಗೊಂಡು 115 ವರ್ಷವಾದ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಶತಮಾನೋತ್ತರ ಸಂಭ್ರಮಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ, ಆರೋಗ್ಯ ಸೇವೆಯನ್ನು ರಾಷ್ಟ್ರೀಕರಣ ಮಾಡಿದ್ದರಿಂದ ಬಡವರು, ಶೋಷಿತರು, ಹಿಂದುಳಿದ ವರ್ಗದವರು ಶಿಕ್ಷಣದಿಂದ ವಂಚಿತವಾಗುವುದು ತಪ್ಪಿತು. ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಅಲ್ಲಿ ಓದಿದವರು ಇಂದು ಉನ್ನತ ಸ್ಥಾನಗಳಲ್ಲಿದ್ದಾರೆ’ ಎಂದರು.

ADVERTISEMENT

‘ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕು’ ಎಂಬ ಶಿಕ್ಷಕರ ಮನವಿಗೆ ಪ್ರತಿಕ್ರಿಯಿಸಿ, ‘ನೂತನ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ ಪ್ರಸಾದ್‌ ಮಾತನಾಡಿ, ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸವಾಗಬೇಕು ಎಂದರು.

ವಿ.ಎಸ್.ವಿ. ಪ್ರಸಾದ ಅವರು ನೀಡಿದ ದೇಣಿಗೆ ಹಣದಿಂದ ನಿರ್ಮಿಸಿದ ಕಂಪ್ಯೂಟರ್ ಲ್ಯಾಬ್‌, ಸಿ.ಸಿ ಟಿ.ವಿ ಕ್ಯಾಮೆರಾ, ಶುದ್ಧ ನೀರಿನ ಘಟಕ, ವೈಟ್ ಬೋರ್ಡ್‌ಗಳನ್ನು ಉದ್ಘಾಟಿಸಲಾಯಿತು.

ಮೇಯರ್‌ ರಾಮಪ್ಪ ಬಡಿಗೇರ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಹು–ಧಾ ಪೊಲೀಸ್‌ ಕಮಿಷನರ್‌ ಎನ್.ಶಶಿಕುಮಾರ್‌ ಮಾತನಾಡಿದರು. ಶಾಲೆಯ ಹಳೆಯ ವಿದ್ಯಾರ್ಥಿ ಗುರುನಾಥ ಉಳ್ಳಿಕಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಸಿದ್ಧಾರೂಢ ಮಠದಿಂದ ಶಾಲೆಯವರೆಗೆ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಹಾಗೂ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. 

ಬಿಜೆಪಿ ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ, ಮಹಾನಗರ ಪಾಲಿಕೆ ಸದಸ್ಯ ಅರ್ಜುನ ಪಾಟೀಲ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಶಿವಾಜಿ ಗಾಂವ್ಕರ, ಪ್ರಭು ಪ್ರಭಾಕರ, ದಶರಥ ವಾಲಿ, ಸಿಆರ್‌ಪಿ ಮುತ್ತಪ್ಪ ವಡ್ಡರ, ಮುಖ್ಯಶಿಕ್ಷಕ ಎಚ್.ಎಂ. ಕುಂದರಗಿ ಇದ್ದರು. ತಬ್ಸುಮ್ ಪಟ್ಟಣದವರ ನಿರೂಪಿಸಿದರು.

‘ಶಾಲೆಗಳಲ್ಲಿ ರಾಜಕೀಯ ಬೇಡ’

‘ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಶಾಲೆಗಳ ಅಭಿವೃದ್ಧಿಗೆ ಕೆಲಸ ಮಾಡುವುದನ್ನು ಬಿಟ್ಟು ರಾಜಕೀಯ ಮಾಡಬಾರದು. ಶಾಲೆಯಲ್ಲಿ ರಾಜಕೀಯ ಮಾಡಿ ವಾತಾವರಣ ಹಾಳು ಮಾಡದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು. ‘ಗುಣಮಟ್ಟದ ಬೋಧನೆಗೆ ಶಿಕ್ಷಕರು ಒತ್ತು ನೀಡಬೇಕು. ರಾಜಕೀಯ ಮುಖಂಡರ ಕೈಗೊಂಬೆಗಳಂತೆ ವರ್ತಿಸಬಾರದು. ಈ ಬಗ್ಗೆ ಅಧಿಕಾರಿಗಳು ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.