ADVERTISEMENT

ಹುಬ್ಬಳ್ಳಿ: ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:27 IST
Last Updated 13 ನವೆಂಬರ್ 2025, 5:27 IST
<div class="paragraphs"><p>ಹುಬ್ಬಳ್ಳಿ–ಧಾರವಾಡ ಅವಳಿನಗರ ಬೈಪಾಸ್‌ ಮಾರ್ಗದಲ್ಲಿ (ಎನ್‌ಎಚ್‌–24) ಷಟ್ಪಥ ನಿರ್ಮಾಣ ಕಾಮಗಾರಿಯನ್ನು ಬುಧವಾರ ಜಿಲ್ಲಾಧಿಕಾರಿ ದಿವ್ಯಪ್ರಭು ವೀಕ್ಷಿಸಿದರು</p></div>

ಹುಬ್ಬಳ್ಳಿ–ಧಾರವಾಡ ಅವಳಿನಗರ ಬೈಪಾಸ್‌ ಮಾರ್ಗದಲ್ಲಿ (ಎನ್‌ಎಚ್‌–24) ಷಟ್ಪಥ ನಿರ್ಮಾಣ ಕಾಮಗಾರಿಯನ್ನು ಬುಧವಾರ ಜಿಲ್ಲಾಧಿಕಾರಿ ದಿವ್ಯಪ್ರಭು ವೀಕ್ಷಿಸಿದರು

   

ಧಾರವಾಡ: ‘ಹುಬ್ಬಳ್ಳಿ–ಧಾರವಾಡ ಬೈಪಾಸ್‌ ಮಾರ್ಗದಲ್ಲಿ (ರಾಷ್ಟ್ರೀಯ ಹೆದ್ದಾರಿ 74) ಷಟ್ಪಥ ನಿರ್ಮಾಣ ಕಾಮಗಾರಿ ಶೇ 75ರಷ್ಟು ಮುಗಿದಿದೆ. ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ (ಎನ್‌ಎಚ್ಎಐ) ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ನರೇಂದ್ರ ಬೈಪಾಸ್‌ ಕ್ರಾಸ್‌ನಿಂದ ಯರಿಕೊಪ್ಪ ಸಮೀಪ ಮನಸೂರು ಕ್ರಾಸ್‌ವರೆಗೆ ಕಾಮಗಾರಿ ಸ್ಥಿತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

ಅವಳಿನಗರ ಭಾಗದಲ್ಲಿ ಈ ಬೈಪಾಸ್‌ ಮಾರ್ಗದ 59 ಕಿಲೋ ಮೀಟರ್‌ ಷಟ್ಪಥ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಪೈಕಿ 34 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟಾರೆ ₹ 580 ಕೋಟಿ ಯೋಜನೆ ಇದು. ಬಾಕಿ ಇರುವ ಶೇ 25ರಷ್ಟು ಕಾಮಗಾರಿಯನ್ನು 2026 ಮಾರ್ಚ್‌ ಹೊತ್ತಿಗೆ ಮುಗಿಸುವುದಾಗಿ ಗುತ್ತಿಗೆದಾರ ಎನ್‌ಎಚ್‌ಎಐಗೆ ಕೋರಿಕೆ ಸಲ್ಲಿಸಿದ್ದಾರೆ’ ಎಂದರು.

‘ಕಾಮಗಾರಿ 2023 ಮಾರ್ಚ್‌ನಲ್ಲಿ ಆರಂಭವಾಗಿದೆ. 2025 ಸೆಪ್ಟೆಂಬರ್‌ಗೆ ಮು‌ಗಿಯಬೇಕಿತ್ತು. ಇನ್ನು ಆರು ತಿಂಗಳ ಕಾಮಗಾರಿ ಅವಧಿ ವಿಸ್ತರಿಸುವಂತೆ ಗುತ್ತಿಗೆದಾರ ಮನವಿ ಸಲ್ಲಿಸಿದ್ದಾರೆ. ಕೆಲವೆಡೆ ಸರ್ವಿಸ್‌ ರಸ್ತೆ ವಿಸ್ತರಣೆ, ಅಂಡರ್‌ಪಾಸ್‌ ನಿರ್ಮಾಣ, ಮಳೆ ನೀರು ಹರಿಯಲು ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳು ಇವೆ. ಯೋಜನೆಗೆ ಹೊಸದಾಗಿ 23 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಣೆಗೆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ಮುಂದಿನ ಆರು ತಿಂಗಳಲ್ಲಿ ನಡೆಯುವ ಈ ಕಾಮಗಾರಿ ವಿವಿಧ ಹಂತಗಳ ವಿವರ ಪಡೆಯಲಾಗಿದೆ. ಸತತವಾಗಿ ಕಾಮಗಾರಿ ಮೇಲುಸ್ತುವಾರಿ ಮಾಡಲಾಗುವುದು. ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ನಿಗಾ ವಹಿಸಲಾಗುವುದು’ ಎಂದರು.

‘ಕೆಲವೆಡೆ ತಡೆಗೋಡೆ (ರಿಟೇನಿಂಗ್ ವಾಲ್‌) ಸುಸಜ್ಜಿತವಾಗಿ ನಿರ್ಮಿಸದೆ ಮಳೆಗಾಲದಲ್ಲಿ ಅವು ಹಾನಿಯಾಗಿವೆ ಎಂದು ಕೆಲವರು ಮಾಹಿತಿ ನೀಡಿದ್ಧಾರೆ. ಹಾನಿಯಾಗಿರುವ ತಡೆಗೋಡೆಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲಾಗಿದೆ. ಬೇರೆ ಏನಾದರೂ ದೂರುಗಳು ಸಲ್ಲಿಕೆಯಾದರೂ ಪ‍ರಿಶೀಲಿಸಿ ಪರಿಹರಿಸಲು ಕ್ರಮ ವಹಿಸುತ್ತೇವೆ’ ಎಂದು ಉತ್ತರಿಸಿದರು.

‘ತಾಂತ್ರಿಕ ಅಥವಾ ನಿರ್ಮಾಣಕ್ಕೆ ಸಂಬಂಧಿತ ಸಮಸ್ಯೆಗಳು ಎದುರಾದಲ್ಲಿ, ಅವುಗಳನ್ನು ತಕ್ಷಣವೇ ಸರಿಪಡಿಸಲು ಸೂಚನೆ ನೀಡಿದ್ದೇವೆ. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅಗತ್ಯ’ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ದೇವರಾಜ ಆರ್, ಯೋಜನಾ ನಿರ್ದೇಶಕ ಭುವನೇಶಕುಮಾರ, ತಹಶೀಲ್ದಾರ್‌ ಡಾ.ಡಿ.ಎಚ್.ಹೂಗಾರ, ಗುತ್ತಿಗೆದಾರ ಕಂಪನಿಯ ಯೋಜನಾ ನಿರ್ದೇಶಕ ಮನೋಜ ತಿವಾರಿ ಉಪಸ್ಥಿತರಿದ್ದರು.