ಹುಬ್ಬಳ್ಳಿ: ಇಲ್ಲಿನ ದುರ್ಗದಬೈಲ್ ಮಾರುಕಟ್ಟೆಯಲ್ಲಿ ದೀಪಾವಳಿ ಸಂಭ್ರಮ ವಿಶೇಷ ಕಳೆ ತಂದಿದೆ. ಎಲ್ಲಿ ನೋಡಿದ್ದಲ್ಲಿ, ಜನರೇ ಕಾಣಸಿಗುತ್ತಾರೆ. ಕಾಲಿಡಲು ಆಗದಷ್ಟು ದಟ್ಟಣೆ, ಸುಲಭವಾಗಿ ಓಡಾಡಲು ಜನಸಂದಣಿ. ಎಲ್ಲರೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಂದವರೇ. ಬಗೆಬಗೆಯ ಹಣತೆಗಳನ್ನು, ಬಟ್ಟೆಗಳನ್ನು ಕೊಳ್ಳಲು ಈ ಮಾರುಕಟ್ಟೆಗೆ ಜನರು ಮುಗಿ ಬಿದ್ದಿದ್ದಾರೆ.
ಕಳೆದ ವರ್ಷಕ್ಕಿಂತ ಈ ವರ್ಷ ಜನದಟ್ಟಣೆ ಕೊಂಚ ಹೆಚ್ಚೇ ಇದೆ. ಎಲ್ಲೆಡೆ ಬೆಳಕಿನ ಝಗಮಗ ಇದ್ದರೆ, ಮತ್ತೊಂದೆಡೆ ಬೀದಿ ವ್ಯಾಪಾರಸ್ಥರು ಆಕರ್ಷಕ ಆಕಾಶಬುಟ್ಟಿ ಮತ್ತು ದೀಪಾವಳಿಗೆ ಸಂಬಂಧಿಸಿದ ವಸ್ತುಗಳನ್ನು ಮಾರುತ್ತಿದ್ದಾರೆ. ಖರೀದಿಯಲ್ಲಿ ಎಲ್ಲರೂ ಮಗ್ನರಾಗಿದ್ದಾರೆ.
ಇಡೀ ಮಾರುಕಟ್ಟೆಯು ಬಣ್ಣ ಬಣ್ಣದ ದೀಪಗಳು, ಆಕಾಶಬುಟ್ಟಿಗಳು, ಪರಿಯಾಣಗಳು, ಮಣ್ಣಿನ ಮಡಿಕೆಗಳು ಹಾಗೂ ಆಲಂಕಾರಿಕ ವಸ್ತುಗಳಿಂದ ಮಿನುಗುತ್ತಿದೆ. ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬೆಳಕಿನಿಂದ ಅಲಂಕರಿಸಿ, ಗ್ರಾಹಕರನ್ನು ಆಕರ್ಷಿಸಲು ವಿಶೇಷ ರಿಯಾಯಿತಿ ಮತ್ತು ಹೊಸ ವಿನ್ಯಾಸದ ವಸ್ತುಗಳನ್ನು ಪ್ರದರ್ಶಿಸುತ್ತಿದ್ದಾರೆ
‘ಕಳೆದ ವರ್ಷಕ್ಕಿಂತ ಈ ವರ್ಷ ಖರೀದಿಸುವವರ ಸಂಖ್ಯೆ ಹೆಚ್ಚಿದೆ. ಈ ವರ್ಷವೂ ಆಂಧ್ರಪ್ರದೇಶದಿಂದ ಮಣ್ಣಿನಿಂದ ಮಾಡಿದಂತ ಎಲ್ಲ ಅಲಂಕೃತ ವಸ್ತುಗಳನ್ನು ತರಿಸಿಕೊಂಡಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗುತ್ತಿರುವುದು ಖುಷಿ ತಂದಿದೆ’ ಎಂದು ಮಾರಾಟಗಾರ
ಮಮ್ಮದ್ ಅಸಿಮ್ ತಿಳಿಸಿದರು.
‘ಪ್ರತಿವರ್ಷ ದೀಪಗಳ ಹಾಗೂ ಅಲಂಕಾರ ವಸ್ತುಗಳ ಖರೀದಿಗಾಗಿ ದುರ್ಗದಬೈಲ್ ಮಾರುಕಟ್ಟೆಗೆ ಬರುತ್ತೇವೆ. ಇಲ್ಲಿ ಮಣ್ಣಿನಿಂದ ಮತ್ತು ಗಾಜಿನಿಂದ ತಯಾರಿಸಿದ ಸುಂದರ ದೀಪಗಳು ಸಿಗುತ್ತವೆ. ಜೊತೆಗೆ ತೋರಣ, ಲೈಟ್ ಸರಪಳಿ, ರಂಗೋಲಿ ಬಣ್ಣಗಳು ಮತ್ತು ಹಬ್ಬಕ್ಕೆ ಅಗತ್ಯವಿರುವ ಎಲ್ಲಾ ವಸ್ತುಗಳೂ ಲಭ್ಯ’ ಎಂದು ನವನಗರದ ನಿವಾಸಿ ರೇಖಾ ಸಾವಳಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.