ADVERTISEMENT

ಹುಬ್ಬಳ್ಳಿ: ಕಲಾವಿದೆ ಸುಜಾತಾ ಪವಾರ ಅವರ ’ಮೈ ಜರ್ನಿ’ ಚಿತ್ರಕಲೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 3:09 IST
Last Updated 10 ನವೆಂಬರ್ 2025, 3:09 IST
ಹುಬ್ಬಳ್ಳಿಯ ವಿದ್ಯಾನಗರದ ಮಿಣಜಿಗಿ ಆರ್ಟ್‌ ಆಗ್ಯಾಲರಿಯಲ್ಲಿ ‘ಮೈ ಜರ್ನಿ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿದ ಸಂಸದ ಜಗದೀಶ ಶೆಟ್ಟರ್ ಅವರು ಕಲಾಕೃತಿಗಳನ್ನು ವೀಕ್ಷಿಸಿದರು
ಹುಬ್ಬಳ್ಳಿಯ ವಿದ್ಯಾನಗರದ ಮಿಣಜಿಗಿ ಆರ್ಟ್‌ ಆಗ್ಯಾಲರಿಯಲ್ಲಿ ‘ಮೈ ಜರ್ನಿ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿದ ಸಂಸದ ಜಗದೀಶ ಶೆಟ್ಟರ್ ಅವರು ಕಲಾಕೃತಿಗಳನ್ನು ವೀಕ್ಷಿಸಿದರು   

ಹುಬ್ಬಳ್ಳಿ: ‘ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆ ಮಾದರಿಯಲ್ಲಿ, ಇಲ್ಲಿಯೂ ಚಿತ್ರಸಂತೆ ನಡೆಸಿ ಕಲಾವಿದರಿಗೆ ಪ್ರೋತ್ಸಾಹ ನೀಡಲು ಕಲಾವಿದರ ಸಂಘಟನೆ ಮುಂದಾಗಬೇಕು’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿನ ವಿದ್ಯಾನಗರದ ಕುಂಚಬ್ರಹ್ಮ ಡಾ. ಎಂ‌.ವಿ. ಮಿಣಜಿಗಿ ಆರ್ಟ್ ಗ್ಯಾಲರಿಯಲ್ಲಿ ನ. 23ರವರೆಗೆ ನಡೆಯಲಿರುವ ಕಲಾವಿದೆ ಸುಜಾತಾ ಪವಾರ ಅವರ ‘ಮೈ ಜರ್ನಿ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕ ಭಾಗದ ಕಲಾವಿದರನ್ನು ಒಂದೆಡೆ ಸೇರಿಸಿ ಬೃಹತ್‌ ಚಿತ್ರಸಂತೆ ನಡೆಸಿದರೆ, ಕಲಾವಿದರ ಕಲಾಕೃತಿಗಳು ಮಾರಾಟವಾಗುವುದಲ್ಲದೆ, ಅವರ ಸಾಧನೆಗಳು ಮತ್ತು ಪರಿಚಯ ಎಲ್ಲರಿಗೂ ಆಗುತ್ತದೆ. ಇದರಿಂದ ಹುಬ್ಬಳ್ಳಿಗೆ ಹೆಸರು ಬರುವುದಲ್ಲದೆ, ಸ್ಥಳೀಯ ಕಲಾವಿದರ ಸಂಘಟನೆಯ ಕ್ರಿಯಾಶೀಲತೆಯೂ ಎಲ್ಲೆಡೆ ಹಬ್ಬುತ್ತದೆ’ ಎಂದರು.

ADVERTISEMENT

‘ಮಿಣಜಿಗಿ ಅವರು ನಮ್ಮ ಹೆಮ್ಮೆ. ಅವರು ರಚಿಸಿದ ಕಲಾಕೃತಿಗಳ ಪ್ರದರ್ಶನಕ್ಕೆ ಇಲ್ಲಿ ಸೂಕ್ತ ಸ್ಥಳ ಇರಲಿಲ್ಲ. ಇದೀಗ ಗ್ಯಾಲರಿ ಸಿಕ್ಕಿದ್ದು, ನಿರಂತರವಾಗಿ ಚಿತ್ರಪ್ರದರ್ಶನ ನಡೆಯಬೇಕು. ಇದು ಸಾರ್ವಜನಿಕರನ್ನು ಸೆಳೆಯುವ ಆಕರ್ಷಣೀಯ ತಾಣವಾಗಬೇಕು. ಕಲಾವಿದರ ಕ್ರಿಯಾಶೀಲತೆ ನೋಡಿ, ಮಹಾನಗರ ಪಾಲಿಕೆ ಸಂಪೂರ್ಣ ಕಟ್ಟಡವನ್ನೇ ಕಲಾವಿದರಿಗೆ ನೀಡುವಂತಾಗಬೇಕು’ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ಟ್ ಗ್ಯಾಲರಿಯ ಅಧ್ಯಕ್ಷ ಆರ್.ವಿ. ಗರಗ, ‘ಸಾಕಷ್ಟು ಪ್ರತಿಭಟನೆ, ಒತ್ತಡದ ಪರಿಣಾಮ ಪಾಲಿಕೆಯಿಂದ ಕಲಾವಿದರಿಗೆ ಆರ್ಟ್‌ ಗ್ಯಾಲರಿ ದೊರಕಿದೆ. ಉತ್ತಮ ಸ್ಥಳಾವಕಾಶವಿದ್ದು, 300 ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಬಹುದು. ಕಟ್ಟಡದ ಗೋಡೆಗಳು ಮಾಸಿದ್ದು, ಬಣ್ಣ ಬಳಿಯಬೇಕಿದೆ. ಮಳೆನೀರಿಗೆ ಗೋಡೆಗಳು ಒದ್ದೆಯಾಗುವುದರಿಂದ ಕಲಾಕೃತಿಗಳು ಹಾಳಾಗುತ್ತವೆ. ಇದಕ್ಕೆ ಪರಿಹಾರ ಬೇಕಿದೆ. ಅಲ್ಲದೆ, ಪ್ರತಿವರ್ಷ ಕಲಾವಿದರ ಸಂಘಟನೆಗೆ ಮತ್ತು ಕಾರ್ಯಕ್ರಮಕ್ಕೆ ವಿಶೇಷ ಅನುದಾನ ನೀಡಬೇಕು’ ಎಂದು ವಿನಂತಿಸಿದರು.

ಉದ್ಯಮಿ ನಾರಾಯಣ ನಿರಂಜನ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹೇಶ ಬುರ್ಲಿ, ವೀರೇಶ ಉಪ್ಪಿನ, ರಮೇಶ ದಂಡಪ್ಪನವರ ಇದ್ದರು. ಕಲಾವಿದೆ ಸುಜಾತಾ ಪವಾರ ಅವರು ಬಿಡಿಸಿದ 90ಕ್ಕೂ ಹೆಚ್ಚು ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

‘ಕಲಾವಿದರನ್ನು ಪ್ರೋತ್ಸಾಹಿಸಿ’

‘ಈ ಗ್ಯಾಲರಿಯಲ್ಲಿ ಮೊದಲ ಬಾರಿಗೆ ಕಲಾವಿದೆಯ ಕಲಾಕೃತಿಗಳು ಪ್ರದರ್ಶನವಾಗುತ್ತಿದ್ದು ಮತ್ತಷ್ಟು ಮಹಿಳಾ ಕಲಾವಿದರು ಉತ್ಸುಕತೆ ತೋರಬೇಕು. ಕಲಾ ಸಂಘಟನೆಗಳು ಸ್ಥಳೀಯ ನಾಯಕರು ಹಾಗೂ ಕಲಾ ಆಸಕ್ತರು ಅವರ ಬೆನ್ನಿಗೆ ನಿಂತು ಪ್ರೋತ್ಸಾಹಿಸಬೇಕು. ಚಿತ್ರದ ಒಳಗಿನ ಹೂರಣ ಅರ್ಥ ಮಾಡಿಕೊಂಡು ಕಲೆಗೆ ಗೌರವ ನೀಡಬೇಕು. ಕಲಾಕೃತಿಗಳನ್ನು ಮನೆಯ ಗೋಡೆಗೆ ತೂಗುಹಾಕುವ ಸಂಸ್ಕೃತಿ ಹೆಚ್ಚಾಗಿ ಬೆಳೆದರೆ ಕಲಾವಿದರ ಬದುಕು ಸಹ ಸಾರ್ಥಕವಾಗುತ್ತದೆ’ ಎಂದು ಸಂಸದ ಶೆಟ್ಟರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.