ಸ್ಥಗಿತವಾಗಿದ್ದ ಹುಬ್ಬಳ್ಳಿ ಉಪನಗರ ಕೇಂದ್ರ ಬಸ್ ನಿಲ್ದಾಣ ಬುಧವಾರದಿಂದ ಪುನರಾರಂಭವಾಗಲಿದ್ದು, ಮಂಗಳವಾರ ಕಾರ್ಮಿಕರು ನಿಲ್ದಾಣದ ಆವರಣವನ್ನು ಶುಚಿಗೊಳಿಸಿದರು
ಹುಬ್ಬಳ್ಳಿ: ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ನಾಲ್ಕೂವರೆ ತಿಂಗಳಿನಿಂದ ಸ್ಥಗಿತವಾಗಿದ್ದ ಇಲ್ಲಿನ ಉಪನಗರ ಕೇಂದ್ರ(ಹಳೇ) ಬಸ್ ನಿಲ್ದಾಣ ಬುಧವಾರದಿಂದ (ಸೆಪ್ಟೆಂಬರ್ 3) ಪುನರಾರಂಭವಾಗಲಿದೆ. ಚನ್ನಮ್ಮ ವೃತ್ತದಿಂದ ಬಸವ ವನದವರೆಗೆ ಬಂದ್ ಮಾಡಲಾಗಿದ್ದ ರಸ್ತೆ ಸಹ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಮೇಲ್ಸೇತುವೆಯ ತ್ವರಿತ ಕಾಮಗಾರಿಗಾಗಿ ಏ. 20ರಿಂದ ಬಸ್ ನಿಲ್ದಾಣ ಸೇರಿ ಅದರ ಎದುರಿನ ರಸ್ತೆ ಮತ್ತು ಚನ್ನಮ್ಮ ವೃತ್ತದಿಂದ ಹಳೇಕೋರ್ಟ್‌ವರೆಗಿನ ರಸ್ತೆ ಬಂದ್ ಮಾಡಲಾಗಿತ್ತು. ಈ ಭಾಗದಲ್ಲಿ ಅಪಾಯಕಾರಿ ಕಾಮಗಾರಿ ಮುಕ್ತಾಯವಾದ ಹಿನ್ನೆಲೆಯಲ್ಲಿ, ಬಸ್ ನಿಲ್ದಾಣ ಹಾಗೂ ಭಾಗಶಃ ರಸ್ತೆ ಮುಕ್ತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಬಸ್‌ಗಳ ಸಂಚಾರ ಹಾಗೂ ಪ್ರಯಾಣಿಕರ ಓಡಾಟವಿಲ್ಲದೆ ಬಸ್ ನಿಲ್ದಾಣದ ಆವರಣದಲ್ಲಿ ಕಸ, ಕಡ್ಡಿಗಳು ರಾಶಿ ಬಿದ್ದಿದ್ದವು. ನಿಲ್ದಾಣ ಪ್ರವೇಶಿಸುವ ದ್ವಾರದಲ್ಲಿ ಹುಲ್ಲು, ಗಿಡಗಳು ಬೆಳೆದಿದ್ದವು. ಆಸನಗಳೆಲ್ಲ ದೂಳಿನಿಂದ ಆವೃತವಾಗಿತ್ತು. ಸಾರಿಗೆ ಅಧಿಕಾರಿಗಳು ಮಂಗಳವಾರ ಕಾರ್ಮಿಕರ ನೆರವಿನಿಂದ ನಿಲ್ದಾಣ ಶುಚಿಗೊಳಿಸಿದರು.
ಇದರ ಕುರಿತು ವಿವರಣೆ ನೀಡಿದ ಹುಬ್ಬಳ್ಳಿ ನಗರ ವಿಭಾಗೀಯ ಸಾರಿಗೆ ಅಧಿಕಾರಿ ಸಿದ್ಧೇಶ್ವರ, ‘ನೂತನ ನಿಲ್ದಾಣ ಆರಂಭವಾದ ಮೂರು ತಿಂಗಳಲ್ಲೇ ಸ್ಥಗಿತವಾಗಿ, ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಇದೀಗ ಪುನರಾರಂಭಕ್ಕೆ ಅನುಮತಿ ಸಿಕ್ಕಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಿಲ್ದಾಣದಿಂದ ನಗರದ ವಿವಿಧೆಡೆ ಪ್ರತಿದಿನ ಮೂರು ಸಾವಿರ ಮಾರ್ಗಸೂಚಿಯಲ್ಲಿ ಬಸ್‌ಗಳು ಸಂಚರಿಸುತ್ತವೆ’ ಎಂದರು.
ಬುಧವಾರ ಬೆಳಿಗ್ಗೆಯಿಂದಲೇ ಬಸ್‌ಗಳ ಸಂಚಾರ ಆರಂಭವಾಗಲಿದೆ. ಹಂತಹಂತವಾಗಿ ಬಸ್‌ಗಳನ್ನು ಓಡಿಸಿ ಸಂಜೆ ವೇಳೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.ಸಿದ್ದೇಶ್ವರ, ಸಾರಿಗೆ ಅಧಿಕಾರಿ. ಹುಬ್ಬಳ್ಳಿ ನಗರ ವಿಭಾಗ
‘ಚನ್ನಮ್ಮ ವೃತ್ತದಿಂದ ಹುಬ್ಬಳ್ಳಿ ಆಪ್ಟಿಕಲ್ಸ್‌ವರೆಗೆ ಮಾತ್ರ ರಸ್ತೆ ಮುಕ್ತವಾಗಲಿದ್ದು, ಈ ಭಾಗದಲ್ಲಿ ಹೊಂಡ ಬಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ಕಡಿ ಹಾಗೂ ಸಿಮೆಂಟ್‌ನಿಂದ ಮುಚ್ಚಲಾಗಿದೆ. ದೂಳು ಏಳುವುದರಿಂದ ಆಗಾಗ ನೀರು ಸಿಂಪಡಿಸಲು ತೀರ್ಮಾನಿಸಲಾಗಿದೆ. ಕಾಮಗಾರಿ ನಡೆಯುವ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕಿದ್ದೇವೆ’ ಎಂದು ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸತೀಶ ನಾಗನೂರು ತಿಳಿಸಿದರು.
‘ಬಸ್‌ಗಳ ಸುಗಮ ಸಂಚಾರಕ್ಕೆ ನಿಲ್ದಾಣದ ಎಡಗಡೆಯ ಪ್ರವೇಶದ್ವಾರದ ಪಕ್ಕದಲ್ಲಿ ಇರುವ ಶೆಡ್ ತೆರವು ಮಾಡಲು ನಿರ್ಧರಿಸಲಾಗಿತ್ತು. ಖಾಸಗಿ ಆಸ್ತಿಯಾಗಿರುವುದರಿಂದ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ತೀರ್ಮಾ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.