ADVERTISEMENT

ಮಾದಕ ವಸ್ತು ಸೇವನೆ; 143 ಮಂದಿ ವಿರುದ್ಧ 37 ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:21 IST
Last Updated 30 ಡಿಸೆಂಬರ್ 2025, 5:21 IST
   

ಹುಬ್ಬಳ್ಳಿ: ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ಕುರಿತು ಇತ್ತೀಚಿಗೆ ಹುಬ್ಬಳ್ಳಿ–ಧಾರವಾಡ ಮಹಾನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, 143 ಮಂದಿ ವಿರುದ್ಧ 37 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಠಾಣಾ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಬಳಕೆ ಮಾಡಿದ ಸಂಶಯಾಸ್ಪದ 1016 ಮಂದಿಯನ್ನು ವಶಕ್ಕೆ ಪಡೆದಿದ್ದರು. ಅವರನ್ನು ನಗರದ ಕೆಎಂಸಿ–ಆರ್‌ಐ ಹಾಗೂ ಧಾರವಾಡದ ಡಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, 143 ಮಂದಿ ಮಾದಕ ವಸ್ತು ಸೇವನೆ ಮಾಡಿದ್ದು ದೃಢಪಟ್ಟಿದೆ.

ಆರೋಪಿಗಳನ್ನು ನಗರದ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಕರೆತಂದು, ಆಪ್ತಸಮಾಲೋಚನೆ ನಡೆಸಲಾಯಿತು. ಅವರ ಪೋಷಕರಿಗೆ ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಕಾಳಜಿಯ ಬಗ್ಗೆ ಮಾಹಿತಿ ನೀಡಲಾಯಿತು.

ADVERTISEMENT

‘ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟಗಾರರ ವಿರುದ್ಧ ಪ್ರಸ್ತುತ ವರ್ಷ ಏಳು ಬಾರಿ ವಿಶೇಷ ಕಾರ್ಯಾಚರಣೆ ನಡೆಸಿ, 3,800ಕ್ಕೂ ಹೆಚ್ಚು ಶಂಕಿತರನ್ನು ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಪಾಸಿಟಿವ್ ವರದಿ ಬಂದ 1,419 ಮಂದಿ ವಿರುದ್ಧ 285 ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಆತ್ಮಹತ್ಯೆ, ಬಂಧನ: ಸಾಲ ಪಡೆದ ಹಣಕ್ಕೆ ಬಡ್ಡಿ ನೀಡುವಂತೆ ಕಿರುಕುಳ ನೀಡಿದ್ದರಿಂದ ಉಣಕಲ್‌ನ ಸಿದ್ದೇಶ್ವರ ನಗರದ ಕಲ್ಲೇಶಕುಮಾರ ಭಜಂತ್ರಿ (58) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ವಿದ್ಯಾನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಜಗದೀಶ ಮತ್ತು ವಿನಾಯಕ ಬಂಧಿತರು. ಕಲ್ಲೇಶಕುಮಾರ ಅವರು ಮಕ್ಕಳ ಮದುವೆಗಾಗಿ ಅವರಲ್ಲಿ ಸಾಲ ಪಡೆದಿದ್ದರು. ಬಡ್ಡಿ ಹಣ ಪಡೆಯುವ ಕುರಿತು ಅವರು ಸಾರ್ವಜನಿಕವಾಗಿ ನಿಂದನೆ ಮಾಡಿದ್ದಕ್ಕೆ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.