
ರೈಲು
ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ಪ್ರಯಾಣಿಕರ ಕೊರತೆ ಕಾರಣಕ್ಕೆ ರದ್ದುಪಡಿಸಲಾಗಿದ್ದ ಹುಬ್ಬಳ್ಳಿ–ಬೆಂಗಳೂರು–ಹುಬ್ಬಳ್ಳಿ (07339/07340) ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ನ.30ರಿಂದ ಪುನರಾಂಭಿಸಲು ನೈರತ್ಯ ರೈಲ್ವೆ ಮುಂದಾಗಿದೆ.
ರೈಲು ನ.30ರಿಂದ 2024ರ ಫೆಬ್ರುವರಿ 29ರವರೆಗೆ ಹುಬ್ಬಳ್ಳಿಯಿಂದ ಮತ್ತು ನ.30ರಿಂದ 2024ರ ಮಾರ್ಚ್ 1ರವರೆಗೆ ಬೆಂಗಳೂರಿನಿಂದ ಸಂಚಾರ ಆರಂಭಿಸಲಿದೆ. ರೈಲು ಸಂಚಾರದ ಸಮಯ, ನಿಲುಗಡೆ ಮತ್ತು ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರ ಕೊರತೆ ಕಾರಣ ನೀಡಿ ನ.20ರಿಂದ ರೈಲು ಸಂಚಾರ ರದ್ದುಪಡಿಸಲಾಗಿತ್ತು. ರೈಲು ಸಂಚಾರ ರದ್ದುಪಡಿಸಿ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
‘ರೈಲು ಸಂಚಾರ ರದ್ದುಪಡಿಸಿದ್ದರಿಂದ ಜನರಿಗೆ ಆಗುತ್ತಿದ್ದ ತೊಂದರೆ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಈಗ ರೈಲು ಸಂಚಾರ ಪುನರಾರಂಭಿಸಿ ಆದೇಶ ಹೊರಡಿಸಿದ್ದು ಅಭಿನಂದನೀಯ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಒತ್ತಡಕ್ಕೆ ಮಣಿದು ಆರಂಭ: ಹುಬ್ಬಳ್ಳಿ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ಪುನರಾರಂಭ ಅಭಿಯಾನಕ್ಕೆ ಜಯ ಸಿಕ್ಕಿದ್ದು, ಒತ್ತಡಕ್ಕೆ ಮಣಿದು ಮತ್ತೆ ರೈಲು ಸಂಚಾರ ಆರಂಭಿಸಲಾಗುತ್ತಿದೆ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.