ಹುಬ್ಬಳ್ಳಿ: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ನೂಲ್ವಿ–ಬೆಳಗಲಿ ಕ್ರಾಸ್‌ನಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಪ್ರಲ್ಹಾದ ಜೋಶಿ, ‘ಈ ಹಿಂದೆ ನಾಲ್ಕು ಪಥದ ಹೆದ್ದಾರಿ ಇದ್ದಾಗಲೇ ಸರ್ವಿಸ್ ರಸ್ತೆ, ಬ್ರಿಡ್ಜ್ ನಿರ್ಮಾಣ ಮಾಡಬೇಕಿತ್ತು. ಅದು ಆಗಲಿಲ್ಲ. 2014ರಲ್ಲಿ ನಿತಿನ್ ಗಡ್ಕರಿ ಅವರು ಸಚಿವರಾದ ನಂತರ ಆರು ಪಥದ ರಸ್ತೆ ನಿರ್ಮಾಣ ಮಾಡಲಾಯಿತು. ರಸ್ತೆ ಅಗಲವಾದ ನಂತರ ವಾಹನಗಳ ವೇಗ, ಇನ್ನಿತರ ಕಾರಣಗಳಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಿತ್ತು. ಈ ನಿಟ್ಟಿನಲ್ಲಿ ₹12.44 ಕೋಟಿ ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ ನಿರ್ಮಿಸಲಾಗುತ್ತಿದೆ’ ಎಂದರು.
‘ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಮಂಜೂರು ಮಾಡಿದ್ದಾರೆ. ಕೆಳಸೇತುವೆಯ ಎತ್ತರವು 4.50 ಮೀಟರ್ ಬದಲಾಗಿ 5.50 ಮೀಟರ್ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ರೈತರು, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.
‘ಕುಂದಗೋಳ ಮತಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಇನ್ನಿತರ ಚುನಾವಣೆಗಳಲ್ಲಿ ಜನರು ಆಶೀರ್ವಾದ ಮಾಡಬೇಕು’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಸುರಕ್ಷೆ, ಯೋಗಕ್ಷೇಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ಹೆದ್ದಾರಿಗಳಲ್ಲಿ ಯಾವುದೇ ಸಾವು ಸಂಭವಿಸಬಾರದು ಎಂಬುದು ನಿತಿನ್ ಗಡ್ಕರಿ ಅವರ ಆಶಯ. ಹೀಗಾಗಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಆಯಿತು. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ದಿನ 11 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ, ಈಗ ದಿನಕ್ಕೆ 30 ಕಿ.ಮೀ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಔಷಧ, ಗೊಬ್ಬರ ಸಿಂಪಡಣೆಗೆ ಡ್ರೋನ್‌ಗಳನ್ನು ವಿತರಣೆ ಮಾಡುತ್ತಿದ್ದು, ಇದರಿಂದ ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಸಾಧ್ಯವಾಗುತ್ತಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ₹6 ಸಾವಿರ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಅಡುಗೆ ಎಣ್ಣೆ, ವಿದ್ಯುತ್, ಬಸ್ ಪ್ರಯಾಣ ದರ ಸೇರಿದಂತೆ ಎಲ್ಲ ವಸ್ತುಗಳ ದರ ಏರಿಕೆ ಮಾಡಿದೆ’ ಎಂದು ದೂರಿದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ‘ರಸ್ತೆ ಕೆಳಸೇತುವೆ ನಿರ್ಮಾಣ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅಪಘಾತಗಳಿಂದಾಗಿ ಈ ವೃತ್ತ ಮೃತ್ಯುಕೂಪವಾಗಿತ್ತು. ಸೇತುವೆ ನಿರ್ಮಾಣವಾದರೆ ಸಮಸ್ಯೆ ನಿವಾರಣೆಯಾಗಲಿದೆ’ ಎಂದರು.
ಈರಣ್ಣ ಜಡಿ, ನಿಂಗನಗೌಡ ಮರಿಗೌಡರ, ಶಿವಯ್ಯನವರ ಹಿರೇಮಠ, ಮಹೇಶಗೌಡ ನೂಲ್ವಿ, ಬೆಳಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು ಇದ್ದರು.
2025ರ ಅಕ್ಟೋಬರ್‌ಗೆ ಹು–ಧಾ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ: ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಬೈಪಾಸ್ ರಸ್ತೆ ಕಾಮಗಾರಿ ಬ್ರಿಡ್ಜ್ ಹೊರತುಪಡಿಸಿ ಅಕ್ಟೋಬರ್ ವೇಳೆಗೆ ಬಹುತೇಕ ಮುಗಿಯಲಿದೆ. ಇನ್ನುಳಿದ ಕಾಮಗಾರಿ 2026ರ ಜೂನ್‌ನಲ್ಲಿ ಮುಗಿಯಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಗರದ ವರ್ತುಲ ರಸ್ತೆಯಲ್ಲಿ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.
‘ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಕುರಿತು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗುತ್ತಿಗೆದಾರ ಜಿಲ್ಲಾಧಿಕಾರಿ ಜತೆ ಮುಂದಿನ ವಾರ ಸಭೆ ನಡೆಸಿ ಚರ್ಚಿಸಲಾಗುವುದು. ಇಲಾಖೆಗಳ ನಡುವೆ ಹೊಂದಾಣಿಕೆ ಕೊರತೆ ಇದ್ದು ಅದನ್ನು ನಿವಾರಣೆ ಮಾಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಲಾಗಿದೆ’ ಎಂದು ಹೇಳಿದರು. ‘ಸ್ಮಾರ್ಟ್ ಸಿಟಿ ಯೋಜನೆ ಅಡಿ ಆಗಿರುವ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಂಡು ಮಹಾನಗರ ಪಾಲಿಕೆಯವರು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕಾಮಗಾರಿಯಲ್ಲಿ ದೋಷಗಳಿದ್ದರೆ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.