ADVERTISEMENT

ಮರ್ಯಾದೆಗೇಡು ಹತ್ಯೆ ಪ್ರಕರಣ: ತ್ವರಿತ ನ್ಯಾಯಾಲಯ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:14 IST
Last Updated 30 ಡಿಸೆಂಬರ್ 2025, 5:14 IST
ಹುಬ್ಬಳ್ಳಿಯ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಕರ್ನಾಟಕ ಚಲವಾದಿ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಕರ್ನಾಟಕ ಚಲವಾದಿ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣ ಕುರಿತು ತ್ವರಿತ ನ್ಯಾಯಾಲಯ ಸ್ಥಾಪಿಸಿ, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಚಲವಾದಿ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಸದಸ್ಯರು ‌ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿ, ಮರ್ಯಾದೆಗೇಡು ಹತ್ಯೆ ಪ್ರಕರಣವನ್ನು ಖಂಡಿಸಿದರು.  ನಂತರ ಅಲ್ಲಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎನ್. ಮಹೇಶ್‌, ‘ಇನಾಂ ವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಗುಪ್ತಚರ ಇಲಾಖೆ ಸರಿಯಾಗಿ ಕೆಲಸ ಮಾಡಿದ್ದರೆ ಈ ಘಟನೆ ತಪ್ಪಿಸಬಹುದಿತ್ತು’ ಎಂದರು.

ADVERTISEMENT

‘ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆಯಾಗುವಂತೆ ವಸ್ತುನಿಷ್ಠ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಬೇಕು. ಮಾನ್ಯಾ ಅವರ ಪತಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅವರ ಕುಟುಂಬಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ₹1 ಕೋಟಿ ಪರಿಹಾರ, ತಲಾ ಐದು ಎಕರೆ ಜಮೀನು ನೀಡಬೇಕು. ಇನ್ನೆಲ್ಲೂ ಇಂತಹ ಕೃತ್ಯ ನಡೆಯದಂತೆ ಕಠಿಣ ಕಾನೂನು ಜಾರಿಗೆ ತರಬೇಕು’ ಎಂದು ಮುಖಂಡರು ಒತ್ತಾಯಿಸಿದರು.

ಪರಮೇಶ್ವರ ಕಾಳೆ, ಮಾರುತಿ ದೊಡಮನಿ, ಮಲ್ಲಿಕಾರ್ಜುನ ಯಾತಗೇರಿ, ಶ್ರೀಧರ ಕಂದಗಲ್‌, ಪ್ರಭು ಪ್ರಭಾಕರ, ಗುರುನಾಥ ಚಲವಾದಿ, ಶ್ರಿಧರ ಕೌತಾಳ, ಮಲ್ಲಿಕಾರ್ಜುನ ಬಿಳಾರ, ಲಿಂಗರಾಜ ಹೊಸಮನಿ, ರಾಜಪ್ಪ ಕಾಲೆ, ಶಂಕರ ಪಾತ್ರದ, ಕಮಲವ್ವ ಹೊಸಮನಿ ಸೇರಿ ಅನೇಕರು ಪಾಲ್ಗೊಂಡಿದ್ದರು.

ರೇಣವ್ವ ಚೇತರಿಕೆ: ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೇಣವ್ವ ದೊಡಮನಿ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಸಹಜ ಸ್ಥಿತಿಯತ್ತ ಗ್ರಾಮ ಒಂದು ವಾರದಿಂದ ಆತಂಕದ ಸ್ಥಿತಿಯಲ್ಲಿದ್ದ ಇನಾಂ ವೀರಾಪುರದ ಗ್ರಾಮಸ್ಥರು ಸೋಮವಾರದಿಂದ ಹೊಲ–ಗದ್ದೆಗಳಿಗೆ ಮಕ್ಕಳು ಶಾಲಾ–ಕಾಲೇಜುಗಳಿಗೆ ತೆರಳಿದರು. ಭಾನುವಾರ ರಾತ್ರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗ್ರಾಮದಲ್ಲಿ ಶಾಂತಿ ಸಭೆ ನಡೆದಿತ್ತು. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.