ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ
ಹುಬ್ಬಳ್ಳಿ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಜಯಗಳಿಸಿದ ಹಿನ್ನೆಲೆಯಲ್ಲಿ, ನಗರದ ಚನ್ನಮ್ಮ ವೃತ್ತದಲ್ಲಿ ಅಭಿಮಾನಿಗಳು ತಡರಾತ್ರಿವರೆಗೂ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಕೊನೆಯ ಮೂರು ಓವರುಗಳು ಬಾಕಿಯಿದ್ದಾಗಲೇ ಗೆಲುವು ಖಚಿತವೆಂದು, ಮನೆಯಿಂದ ಹೊರಗೆ ಬಂದು ಚನ್ನಮ್ಮ ವೃತ್ತದ ಬಳಿ ಸೇರಲು ಆರಂಭಿಸಿದರು. ಕೆಲವರು ಮೊಬೈಲ್‌ನಲ್ಲಿಯೇ ಪಂದ್ಯಾವಳಿಯ ನೇರಪ್ರಸಾರ ವೀಕ್ಷಿಸುತ್ತ, ಆರ್‌ಸಿಬಿ, ಆರ್‌ಸಿಬಿ ಎಂದು ಘೋಷಣೆ ಕೂಗುತ್ತ ನಗರವನ್ನೆಲ್ಲ ಸಂಚರಿಸಿದರು. ಕೆಲವರು ಬಡಾವಣೆಯಲ್ಲಿ ಗುಂಪುಗೂಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ ಮೂಡಿತು.
ಐಪಿಎಲ್ ಅಂತಿಮ ಪಂದ್ಯಕ್ಕೆ ಆರ್‌ಸಿಬಿ ಅರ್ಹತೆ ಪಡೆದ ದಿನದಿಂದಲೇ, ನಗರದಲ್ಲಿ ಆರ್‌ಸಿಬಿ ಜೆರ್ಸಿಗೆ ಬೇಡಿಕೆ ಹೆಚ್ಚಾಗಿತ್ತು. ಮಾಲ್‌ಗಳ ಬಟ್ಟೆ ಮಳಿಗೆಗಳಲ್ಲಿ ಹಾಗೂ ಕ್ರೀಡಾ ಸಾಮಗ್ರಿಗಳ ಅಂಗಡಿಗಳಲ್ಲಿ ಜೆರ್ಸಿ ಗಳು ಭರ್ಜರಿಯಾಗಿ ಮಾರಾಟವಾದವು. ಯುವಕರು, ಮಕ್ಕಳು ಹಾಗೂ ಆರ್‌ಸಿಬಿ ಅಭಿಮಾನಿಗಳು ಜರ್ಸಿ ಧರಿಸಿ ಸಂಭ್ರಮಿಸಿದರು.
ಕೆಲವು ಸಂಘಟನೆಗಳ ಪದಾಧಿಕಾರಿಗಳು, ಆರ್‌ಸಿಬಿ ಗೆಲುವಿಗೆ ಸಿದ್ಧಾರೂಢಮಠ, ಶಿರಡಿ ಸಾಯಿ ಬಾಬಾ ಗುಡಿ ಹಾಗೂ ಇತರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬ್ಯಾಟ್, ಬಾಲ್ ಇಟ್ಟು ಪ್ರಾರ್ಥಿಸಿದರು. ಪಂದ್ಯ ವೀಕ್ಷಣೆಗೆ ಕೆಲವು ಬಾರ್ ಹಾಗೂ ಹೋಟೆಲ್‌ಗಳಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.
ಪಂದ್ಯ ಅರಂಭವಾಗುತ್ತಿದ್ದಂತೆ ನಗರದಲ್ಲಿ ಬೆಟ್ಟಿಂಗ್ ದಂಧೆಯೂ ಜೋರಾಗುವ ಸಂಶಯದ ಹಿನ್ನೆಲೆಯಲ್ಲಿ ಪೊಲೀಸರು, ಅಲ್ಲಲ್ಲಿ ಕಾರ್ಯಾಚರಣೆ ನಡೆಸಿದರು. ನಗರದ ವಿವಿಧೆಡೆ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ಅಭಿಮಾನಿಗಳು ತಂಡೋಪ ತಂಡವಾಗಿ ಚನ್ನಮ್ಮ ವೃತ್ತದ ಬಳಿ ಬಂದು ಜಮಾಯಿಸಿದ ಕಾರಣ, ಕಾರವಾರ ರಸ್ತೆ, ನೀಲಿಜಿನ್ ರಸ್ತೆ, ಸಿದ್ದಪ್ಪ ಕಂಬಳಿ ರಸ್ತೆ, ಪಿ.ಬಿ. ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು
ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.