ADVERTISEMENT

ಆಧ್ಯಾತ್ಮಿಕ ಶಕ್ತಿಯಿಂದ ಸಂಕಷ್ಟ ಎದುರಿಸಲು ಸಾಧ್ಯ: ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ

ಕುಂತುಸಾಗರ ಮಹಾರಾಜರ 75ನೇ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 12:47 IST
Last Updated 31 ಡಿಸೆಂಬರ್ 2020, 12:47 IST
ಕುಂತುಸಾಗರ ಮಹಾರಾಜ ಅವರ 75ನೇ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ ವರೂರು ನವಗ್ರಹ ತೀರ್ಥ ಕ್ಷೇತ್ರದ ವತಿಯಿಂದ ನಡೆದ ವೆಬಿನಾರ್‌ ಕಾರ್ಯಕ್ರಮದಲ್ಲಿ ಕುಂತುಸಾಗರ ಮಹಾರಾಜ ಅವರಿಗೆ ಜಗದ್ಗುರು ಬಿರುದು ನೀಡಿ ಅವರನ್ನು ಗೌರವಿಸಲಾಯಿತು
ಕುಂತುಸಾಗರ ಮಹಾರಾಜ ಅವರ 75ನೇ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ ವರೂರು ನವಗ್ರಹ ತೀರ್ಥ ಕ್ಷೇತ್ರದ ವತಿಯಿಂದ ನಡೆದ ವೆಬಿನಾರ್‌ ಕಾರ್ಯಕ್ರಮದಲ್ಲಿ ಕುಂತುಸಾಗರ ಮಹಾರಾಜ ಅವರಿಗೆ ಜಗದ್ಗುರು ಬಿರುದು ನೀಡಿ ಅವರನ್ನು ಗೌರವಿಸಲಾಯಿತು   

ಹುಬ್ಬಳ್ಳಿ: ‘ಆಧ್ಯಾತ್ಮಿಕ ಶಕ್ತಿಯಿಂದ ಎಂತಹ ಸಂಕಷ್ಟ ಬಂದರೂ ಎದುರಿಸಲು ಸಾಧ್ಯ. ಅದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿದೆ’ ಎಂದು ಲೋಕಸಭಾ ಸ್ಪೀಕರ್‌ ಓಂ ಪ್ರಕಾಶ ಬಿರ್ಲಾ ಅಭಿಪ್ರಾಯಪಟ್ಟರು.

ವಿಶ್ವಸಂತ ಕುಂತುಸಾಗರ ಮಹಾರಾಜ ಅವರ 75ನೇ ಜನ್ಮ ದಿನ ಅಂಗವಾಗಿ ತಾಲ್ಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದ ವತಿಯಿಂದ ಆಯೋಜಿಸಿರುವ ಅಂತರರಾಷ್ಟ್ರೀಯ ವೆಬಿನಾರ್‌ನ ಎರಡನೆ ದಿನದ ಕಾರ್ಯಕ್ರಮ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವ ಕೊರೊನಾ ಸಂಕಷ್ಟದಲ್ಲಿ ಸಿಲುಕಿದಷ್ಟೇ ಗಂಭೀರವಾಗಿ ಆತಂಕವಾದ, ಪರಿಸರ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯಗಳೂ ವಿಶ್ವವನ್ನು ಕಾಡುತ್ತಿವೆ. ಅವೆಲ್ಲವುಗಳನ್ನು ಕೂಡ ಸಮರ್ಥವಾಗಿ ಎದುರಿಸಬೇಕಾಗಿದೆ’ ಎಂದರು.

ADVERTISEMENT

‘ಎಲ್ಲ ಧರ್ಮದ ಉದ್ದೇಶ ಸಮಾಜದಲ್ಲಿ ಶಾಂತಿ, ಧರ್ಮ ಸ್ಥಾಪಿಸುವುದಾಗಿದೆ. ಜ್ಞಾನಿಗಳ ಮಾರ್ಗದಲ್ಲಿ ನಡೆಯುವುದರಿಂದ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿದೆ’ ಎಂದ ಅವರು, ಸಾಮಾಜಿಕ ಸೌಹಾರ್ದತೆಗೆ ಇಂತಹ ಸಮ್ಮೇಳನಗಳು ಅತ್ಯಗತ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಗಗುರು ಬಾಬಾ ರಾಮದೇವ ಮಾತನಾಡಿ, ‘ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ವಿಭಿನ್ನವಾದ ಆಚರಣೆ, ಅನುಷ್ಠಾನಗಳು ಇರುತ್ತವೆ. ಆಧ್ಯಾತ್ಮಿಕ ಸಾಧನೆ ಮಾಡುತ್ತಲೇ ಸಾಧು ಸಂತರು, ಯೋಗಿಗಳು, ಮಹಾಪುರುಷರು , ತಪಸ್ವಿಗಳು ಸಮಾಜದ ಕಲ್ಯಾಣಕ್ಕೆ ದುಡಿಯುತ್ತಾರೆ’ ಎಂದರು.

ಆರ್ಟ್ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ‘ಕೊರೊನಾ ಸಂಕಷ್ಟ ಸಮಯದಲ್ಲಿ ಎಲ್ಲರೂ ತತ್ತರಿಸಿರುವಾಗ ತಾಳ್ಮೆ, ಅಂತರ್ಮುಖ, ಧ್ಯಾನಸ್ಥ ಸ್ಥಿತಿ ಬೇಕಿದೆ. ಸೇವೆ, ಸತ್ಸಂಗಗಳು ಈ ನಿಟ್ಟಿನಲ್ಲಿ ಪೂರಕ’ ಎಂದರು.

ವಿಜಯರತ್ನ ಸುಂದರ ದೇವನಂದಿ ಮಾತನಾಡಿ, ‘ಪುಣ್ಯ, ಪ್ರಜ್ಞೆ, ಪ್ರೀತಿ, ಪರೋಪಕಾರ ಹಾಗೂ ಪ್ರಸನ್ನತೆ ಈ ಐದು ಗುಣಗಳಿಂದ ಜೀವನ ಸಾರ್ಥಕಪಡಿಸಿಕೊಳ್ಳಬಹುದು’ ಎಂದರು.

ಕುಂತುಸಾಗರ ಮಹಾರಾಜ ಅವರಿಗೆ ‘ಜಗದ್ಗುರು’ ಬಿರುದು ನೀಡಿ ಸನ್ಮಾನ ಪತ್ರ ನೀಡಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸನ್ಮಾನ ಪತ್ರ ವಾಚಿಸಿದರು.

ಬೆಳಿಗ್ಗೆ 7 ಗಂಟೆಯಿಂದ ಶ್ರವಣಬೆಳಗೊಳ, ಕಂತುಗಿರಿ, ನವಗ್ರಹತೀರ್ಥ ಮತ್ತಿತರ ಕಡೆಗಳಲ್ಲಿ ಮಹಾಮಸ್ತಕಾಭಿಷೇಕ ನಡೆದವು. ಡಾ.ಶಿವಮುನಿ ಆಚಾರ್ಯ, ಸ್ವಾಮಿ ದೀಪಾಂಕರ ಜೀ, ಸಾಧ್ವಿ ರಿತಂಬರಾಜೀ, ಬಿ.ಕೆ.ಶಿವಾನಿ, ಆಚಾರ್ಯ ದೇವನಂದಿ ಮತ್ತಿತರರು ಭಾಗವಹಿಸಿ ಶಾಂತಿ, ಸೌಹಾರ್ದತೆ ಕುರಿತು ಸಂದೇಶ ನೀಡಿದರು. ವೀರೇಂದ್ರ ಹೆಗ್ಗಡೆ ಅವರಿಗೆ ಇದೇ ಸಂದರ್ಭದಲ್ಲಿ ‘ಕಲಿಯುಗ ಚಕ್ರವರ್ತಿ’ ಬಿರುದು ನೀಡಲಾಯಿತು. ವರೂರಿನ ನವಗ್ರಹ ತೀರ್ಥದ ಆಚಾರ್ಯ ಗುಣಧರನಂದಿ ಮಹಾರಾಜ ಪಾಲ್ಗೊಂಡಿದ್ದರು.

ಶ್ರವಣಬೆಳಗೊಳ, ಕಂತುಗಿರಿಯಲ್ಲಿ ಮಹಾಮಸ್ತಕಾಭಿಷೇಕ

ಕುಂತುಸಾಗರ ಮಹಾರಾಜ ಅವರಿಗೆ ‘ಜಗದ್ಗುರು’ ಬಿರುದು

ವರೂರು ನವಗ್ರಹ ತೀರ್ಥ ಕ್ಷೇತ್ರದ ವತಿಯಿಂದ ಕಾರ್ಯಕ್ರಮ ಆಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.