ಹುಬ್ಬಳ್ಳಿ: ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ವತಿಯಿಂದ 2025-26 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕುರಿತು ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು.
ಅಚ್ಚುಕಟ್ಟಾಗಿ ರಾಜ್ಯೋತ್ಸವ ಆಚರಿಸುವ ನಿಟ್ಟಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಸಲಹೆ, ಸೂಚನೆ ನೀಡಿದರು. ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು, ಅಧಿಕಾರಿಗಳು ಕಡ್ಡಾಯವಾಗಿ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಆಯುಕ್ತರು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸಮತಾ ಸೇನಾ ಸಂಘಟನೆಯ ಗುರುನಾಥ ಉಳ್ಳಿಕಾಶಿ, ‘ಧೀಮಂತ ಸನ್ಮಾನಕ್ಕೆ ಕನ್ನಡಪರ ಹೋರಾಟಗಾರು, ಮಹಿಳಾ ಸಾಧಕರು, ಆಟೊ ಚಾಲಕರನ್ನು ಪರಿಗಣಿಸಬೇಕು. ಸೂಕ್ತ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು’ ಎಂದರು.
‘ಸಿದ್ಧಾರೂಢ ಮಠದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಆರಂಭದಲ್ಲಿ ಮಾತ್ರ ಕೆಲವು ಅಧಿಕಾರಿಗಳು, ಸದಸ್ಯರು ಭಾಗವಹಿಸುತ್ತಾರೆ. ನಂತರ ಕಲಾತಂಡಗಳನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಅಚ್ಚುಕಟ್ಟಾಗಿ ಮೆರವಣಿಗೆ ಆಯೋಜಿಸಬೇಕು. ಜವಾಬ್ದಾರಿಯಿಂದ ಕೆಲಸ ಮಾಡುವವರಿಗೆ ಮೆರವಣಿಗೆಯ ಉಸ್ತುವಾರಿ ವಹಿಸಬೇಕು’ ಎಂದು ಹೇಳಿದರು.
‘ಕಲಾತಂಡಗಳಿಗೆ ಉತ್ತಮ ವ್ಯವಸ್ಥೆ ಮಾಡಬೇಕು. ಕರ್ನಾಟಕ ಏಕೀಕರಣದ ಬಗ್ಗೆ ಉಪನ್ಯಾಸ ಏರ್ಪಡಿಸಬೇಕು. ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆ ದುರಸ್ತಿ ಮಾಡಬೇಕು. ಸಿದ್ಧಾರೂಢ ಮಠದಿಂದ ನೆಹರೂ ಮೈದಾನದವರೆಗೆ ನಡೆಯುವ ಮೆರವಣಿಗೆಯ ಮಾರ್ಗವನ್ನು ಯಾವ ಕಾರಣಕ್ಕೂ ಬದಲಿಸಬಾರದು’ ಎಂದರು.
‘₹1 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವುದಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಈ ಹಿಂದಿನ ಕಾರ್ಯಕ್ರಗಳ ಬಿಲ್‌ಗಳನ್ನು ಪಾವತಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಜೀವ ದುಮಕನಾಳ ಮಾತನಾಡಿ, ‘ವಾಣಿಜ್ಯ ಕಟ್ಟಡಗಳ ಮೇಲೆ ಕನ್ನಡ ಧ್ವಜ ಹಾರಿಸಬೇಕು. ನಾಮಫಲಕದಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು’ ಎಂದರು.
‘ಟೌನ್ ಹಾಲ್, ಕನ್ನಡ ಭವನ ಕಟ್ಟಡಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಅವುಗಳನ್ನು ಸರಿಯಾಗಿ ನಿರ್ವಹಣೇ ಮಾಡಬೇಕು’ ಎಂದರು.
ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಕಿತ್ತೂರು ಚನ್ನಮ್ಮ ಪ್ರತಿಮೆ ಬಳಿ ಸ್ವಚ್ಛಗೊಳಿಸಿ, ಧ್ವಜಾರೋಹಣಕ್ಕೆ ಸ್ತಂಭ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಪ್ರವೀಣ ಗಾಯಕವಾಡ, ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಬೇಕು ಎಂದರು.
ಉಪಮೇಯರ್ ಸಂತೋಷ ಚವ್ಹಾಣೆ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆಯ ಸಭಾ ನಾಯಕರು ಈರೇಶ ಅಂಚಟಗೇರಿ, ವಿರೋಧ ಪಕ್ಷದ ನಾಯಕ ಇಮ್ರಾನ ಯಲಿಗಾರ, ಸದಸ್ಯರಾದ ರಾಜಣ್ಣ ಕೊರವಿ, ಇಕ್ಬಾಲ ನವಲೂರ, ಮಹಾದೇವಪ್ಪ ನರಗುಂದ, ಉಮಾ ಮುಕುಂದ, ಆರಿಫ್ ಭದ್ರಾಪುರ, ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ, ಪಮೀದಾ ಕಾರಟಗಿ ಇದ್ದರು.
₹1 ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದುಈರೇಶ ಅಂಚಟಗೇರಿ ಸಭಾನಾಯಕ ಹು–ಧಾ ಮಹಾನಗರ ಪಾಲಿಕೆ
ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ
ಹಿಂದಿನ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ವಿಜೃಂಭಣೆಯಿಂದ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ನೀರು ಮಜ್ಜಿಗೆ ವ್ಯವಸ್ಥೆ ಮಾಡಲಾಗುವುದು. 25 ಸಾವಿರ ಕನ್ನಡ ಧ್ವಜ ಶಾಲುಗಳನ್ನು ಅ.25ರ ಒಳಗೆ ನೀಡಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು. ಕನ್ನಡ ನಾಮಫಕ ಅಳವಡಿಸುವ ಸಂಬಂಧ ಸರ್ಕಾರದ ಇತ್ತೀಚಿನ ಮಾರ್ಗಸೂಚಿ ಅನ್ವಯ ನ.1ರ ಒಳಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.