
ಧಾರವಾಡ: 135 ವರ್ಷಗಳ ಇತಿಹಾಸವುಳ್ಳ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಐದು ಎಕರೆ ಜಾಗ ಒದಗಿಸುವ ಮತ್ತು ಸಂಘವನ್ನು ಶಾಶ್ವತ ಅನುದಾನಕ್ಕೆ ಒಳಪಡಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ಸಂಘದಿಂದ ಉತ್ತರ ಕರ್ನಾಟಕ ಭಾಗದಲ್ಲಿ ‘ಕಲಾ ಗ್ರಾಮ’ ನಿರ್ಮಿಸುವ ಕನಸು ಸಾಕಾರವಾಗಿಲ್ಲ.
ಮಹಾನಗರ ಪಾಲಿಕೆ ಕಚೇರಿ ಸಮೀಪದಲ್ಲೇ ಸಂಘದ ಕಚೇರಿ ಇದೆ. ಇರುವ 20 ಗುಂಟೆ ಜಾಗದಲ್ಲೇ ಸಭಾಂಗಣ, ಕಚೇರಿ, ಗ್ರಂಥಾಲಯ, ಕಲಾ ಗ್ಯಾಲರಿ, ಕನ್ನಡ ಪುಸ್ತಕ ಮನೆ, ಮಹಿಳಾ ವಿಶ್ರಾಂತಿ ಗೃಹ ಮೊದಲಾದವನ್ನು ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆಗೆ ಜಾಗದ ಕೊರತೆ ಇದೆ.
ಸಂಘದ ಅಭ್ಯುದಯ ಮತ್ತು ಚಟುವಟಿಕೆ ವಿಸ್ತರಣೆಗೆ ಅನುದಾನ, ಜಾಗ ಒದಗಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಕ್ರಮ ವಹಿಸಿಲ್ಲ. ಗೋಕಾಕ ಚಳವಳಿ, ಕನ್ನಡ ಮಾಧ್ಯಮ ಅನುಷ್ಠಾನ ಹೋರಾಟ ಮುಂತಾದವುಗಳಲ್ಲಿ ಸಂಘದ ಹೆಜ್ಜೆ ಗುರುತುಗಳಿವೆ. ನೆಲ, ಜಲ, ಭಾಷೆ ರಕ್ಷಣೆಗೆ ಬದ್ಧವಾಗಿದೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ರಾಜ್ಯೋತ್ಸವ ಸಡಗರದ ಹೊತ್ತಿನಲ್ಲಿ ಸಂಘವು ಸರ್ಕಾರದ ಸ್ಪಂದನೆಯ ನಿರೀಕ್ಷೆಯಲ್ಲಿದೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ರಲ್ಲಿ ಸಂಘದ 128ನೇ ಸಂಸ್ಥಾಪನಾ ದಿನಾಚರಣೆಗೆ ಆಗಮಿಸಿದ್ದರು. ಸಂಘಕ್ಕೆ ಐದು ಎಕರೆ ಜಾಗ ಒದಗಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಆದರೆ, ಜಾಗ ಮಂಜೂರಾತಿ ವಿಷಯ ಇನ್ನು ಪ್ರಸ್ತಾವ ಹಂತದಲ್ಲಿ ಇದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಘಕ್ಕೆ ಶಾಶ್ವತ ಅನುದಾನ ₹ 2 ಕೋಟಿ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಸಂಘಕ್ಕೆ ಜಾಗ, ಅನುದಾನ ಇತ್ಯಾದಿ ಬೇಡಿಕೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರಿಗೆ ಪತ್ರ ಬರೆಯಲಾಗಿದೆ. ಜನಪ್ರತಿನಿಧಿಗಳು ಧ್ವನಿಯೆತ್ತುವರು ಮತ್ತು ಸರ್ಕಾರ ಸ್ಪಂದಿಸುವುದು ಎಂಬ ನಿರೀಕ್ಷೆಯಲ್ಲಿ ಇದ್ದೇವೆ’ ಎಂದರು.
ಸಂಘಕ್ಕೆ ಸರ್ಕಾರವು ಐದು ಎಕರೆ ಜಾಗ ನೀಡಿದರೆ ಅಲ್ಲಿ ಕಲಾ ಗ್ರಾಮ ನಿರ್ಮಿಸಿ ನಾಡಿನ ಇತಿಹಾಸ ಪರಂಪರೆ ಕಲಾ ವೈಭವ ಬಿಂಬಿಸುವ ಉದ್ದೇಶವಿದೆ. ಪ್ರವಾಸಿ ತಾಣವಾಗಿ ರೂಪಿಸುವ ಯೋಚನೆ ಇದೆ.–ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.