
ಹುಬ್ಬಳ್ಳಿ: ಕಾರ್ಟೂನ್ ರೂಪದ ಕೋಳಿ, ಬೆಕ್ಕು, ನಾಯಿ, ಆನೆ, ಛೋಟಾ ಭೀಮ್ ಜೊತೆಗೆ ‘ಐ ಲವ್ ಹುಬ್ಬಳ್ಳಿ’, ‘ಜೈ ಭಾರತ್’ ಘೋಷಣೆಯ ಗಾಳಿಪಟಗಳು ಆಗಸದಲ್ಲಿ ತೇಲಾಡಿದಾಗ ಮಕ್ಕಳ ಕಂಗಳಲ್ಲಿ ಕುತೂಹಲ, ಸಂಭ್ರಮ...
ಈ ದೃಶ್ಯ ಕಂಡುಬಂದಿದ್ದು ನಗರದ ಕುಸಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜು ಬಳಿಯ ಬೃಹತ್ ಮೈದಾನದಲ್ಲಿ. ಶನಿವಾರ ಆರಂಭವಾದ ಎರಡು ದಿನಗಳ ಸಂಸದ ಸಾಂಸ್ಕೃತಿಕ, ಕ್ರೀಡಾ ಮಹೋತ್ಸವ ಹಾಗೂ ಅಂತರರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವವು ಜನರಲ್ಲಿ ಸಡಗರದ ಬುಗ್ಗೆ ಚಿಮ್ಮಿಸಿತು.
ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯಮಟ್ಟದ ಕ್ರೀಡಾಪಟುಗಳು ತಮ್ಮ ನೈಪುಣ್ಯ ಬಳಸಿ, ವೇಗವಾಗಿ ಬೀಸುವ ಗಾಳಿಯಲ್ಲೂ ಗಾಳಿಪಟಗಳನ್ನು ನಿಯಂತ್ರಿಸಿ, ಹಾರಾಡಿಸಿದರು. ಗಾಳಿ ಜೊತೆಗೆ ಸುತ್ತುತ್ತ, ಆಕಾಶದತ್ತ ಸಾಗುತ್ತಿದ್ದ ತರಹೇವಾರಿ ಬೃಹತ್ ಗಾಳಿಪಟಗಳು ನೋಡುಗರ ಮನಸೆಳೆದವು.
ಒಂದೆಡೆ ಗಾಳಿಪಟಗಳು ಗಗನ ಚುಂಬಿಸುತ್ತಿದ್ದರೆ, ಪಕ್ಕದಲ್ಲೇ ನಿರ್ಮಿಸಿದ್ದ ವೇದಿಕೆಯಿಂದ ಕೇಳಿಬರುತ್ತಿದ್ದ ಸಂಗೀತಕ್ಕೆ ತಕ್ಕಂತೆ ಮಕ್ಕಳು ಹೆಜ್ಜೆಹಾಕಿದರು. ಬಿಸಿಲನ್ನೂ ಲೆಕ್ಕಿಸದೆ ಗಾಳಿಪಟ ಹಾರಾಟ ವೀಕ್ಷಿಸುವುದರಲ್ಲೇ ತಲ್ಲೀನರಾಗಿದ್ದರು.
ವಿವಿಧ ಸ್ಪರ್ಧೆ: ಲೋಕಸಭಾ ಮಟ್ಟದ ದೇಸಿ ಕ್ರೀಡೆಗಳು ಹಾಗೂ ಮಹಿಳಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಮೂಹ ನೃತ್ಯ, ಗಾಳಿಪಟ ತಯಾರಿಕೆ, ಸಣ್ಣಕಥೆ ಹೇಳುವುದು, ಫ್ರೀ ಹ್ಯಾಂಡ್ ಮೆಹಂದಿ, ಮುಖವರ್ಣ ಕಲೆ, ಲಗೋರಿ, ಹಗ್ಗ–ಜಗ್ಗಾಟ, ಯೋಗ, ಮಲ್ಲಕಂಬ, ಚಿನ್ನಿ-ದಾಂಡು ಹಾಗೂ ಗೋಣಿಚೀಲ ಜಿಗಿತ ಸೇರಿದಂತೆ ವಿವಿಧ ದೇಸಿ ಕ್ರೀಡೆಗಳು ಜರುಗಿದವು.
ಸಂಗೀತ ಸಂಭ್ರಮ: ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಜಸ್ಕರನ್ ಸಿಂಗ್ ಹಾಗೂ ಗಾಯಕಿ ದಿವ್ಯಾ ರಾಮಚಂದ್ರ ತಂಡದವರ ಗಾಯನಕ್ಕೆ ಜನರನ್ನು ಸಂಗೀತ ಲೋಕದಲ್ಲಿ ತೇಲಾಡಿದರು.
ಬದುಕಿನ ಜಂಜಾಟದಿಂದ ತುಸು ಬಿಡುಗಡೆ ಪಡೆಯಲು ದೇಸಿ ಕ್ರೀಡೆಗಳು ಸಹಕಾರಿ. ಈ ಹಿಂದೆ ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಈಗಿನ ಮಕ್ಕಳಿಗೆ ಓದಲಷ್ಟೇ ಹೇಳುತ್ತಾರೆಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸಭಾಪತಿ
ಪತಿಯೊಂದಿಗೆ ಗಾಳಿಪಟ ಉತ್ಸವದಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿರುವೆ. ಗಾಳಿ ಉತ್ತಮವಾಗಿದ್ದು ಗಾಳಿಪಟ ಹಾರಿಸಲು ಪೂರಕ ವಾತಾವರಣವಿದೆಜಾಗೃತಿ ಜೋಶಿ ಗುಜರಾತ್
ಚೈನಾ ಮಲೇಷಿಯಾ ಥೈಲ್ಯಾಂಡ್‌ಗಳಲ್ಲಿ ನಡೆದ ಗಾಳಿಪಟ ಹಾರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಇಲ್ಲಿಗೆ ಐದನೇ ಬಾರಿ ಬಂದಿರುವೆಅಮನ್ ಕುಮಾರ್ ಸಾಹು ಒಡಿಶಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.